ರೌಡಿ ಶೀಟರ್ ಚಂದ್ರು ಕೊಲೆ ಪ್ರಕರಣ:7 ಮಂದಿ ಅರೆಸ್ಟ್

ಮೈಸೂರು: ನಗರದ ಪಡುವಾರಹಳ್ಳಿ ವಾಸಿ ರೌಡಿ ಶೀಟರ್ ಚಂದ್ರು ಕೊಲೆ ಪ್ರಕರಣ ಸಂಬಂಧ ವಿವಿ ಪುರಂ ಠಾಣೆ ಪೊಲೀಸರು ಏಳು ಮಂದಿ ಆರೋಪಗಳನ್ನು ಬಂಧಿಸಿ ವಿಚಾರಣೆ ಗೊಳಪಡಿಸಿದ್ದಾರೆ.

ಕೊಲೆ‌ ಪ್ರಕರಣದಲ್ಲಿ ಇನ್ನೂ ನಾಲ್ಕು ಮಂದಿ ಆರೋಪಿಗಳು ಭಾಗಿಯಾಗಿದ್ದು ಅವರುಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

ಮೈಸೂರಿನ ಪಡುವಾರಹಳ್ಳಿ, ಕುವೆಂಪುನಗರ ಹಾಗೂ ಕೆ.ಜಿ.ಕೊಪ್ಪಲಿನ ನಿವಾಸಿಗಳಾದ ಯಶವಂತ, ಪ್ರಶಾಂತ, ಅರವಿಂದ ಸಾಗರ್, ರಾಘವೇಂದ್ರ, ಸುದೀಪ್, ಮಹೇಶ್, ಪ್ರೀತಮ್ ಬಂಧಿತ ಆರೋಪಿಗಳು.

ಉಳಿದ ಆರೋಪಿಗಳಾದ ವರುಣ್, ಅನಿಲ್, ಸಚಿನ್, ದರ್ಶನ್ ಬಂಧನಕ್ಕೆ ಪೊಲೀಸರು ಶೋಧ ನಡೆಸಿದ್ದಾರೆ.

ಮೇ 18ರಂದು ನಗರದ ವಿವಿ ಪುರಂನ ಕಾಳಿದಾಸ ರಸ್ತೆಯಲ್ಲಿರುವ ಟೈಲರ್ ಶಾಪ್ ಬಳಿ ಕುಳಿತಿದ್ದ ಚಂದ್ರುವನ್ನು ಬೈಕಿನಲ್ಲಿ ಬಂದ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ದಾಳಿ ಮಾಡಿ ಪರಾರಿಯಾಗಿದ್ದರು.

ಈ ಸಂಬಂಧ ವಿವಿ ಪುರಂ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು.

ಪೊಲೀಸರು ಇಲವಾಲದ ಹೊರ ವಲಯದಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ರೌಡಿಶೀಟರ್ ದೇವು ಕೊಲೆ ಹಿನ್ನಲೆಯಲ್ಲಿ ಚಂದ್ರುವನ್ನು ಮಾರಕಾಸ್ತ್ರಗಳಿಂದ ಕೊಲೆ ಮಾಡಲಾಗಿದೆ ಎಂದು ತನಿಖೆ ವೇಳೆ ಗೊತ್ತಾಗಿದೆ.

ಆರೋಪಿಗಳ ಪತ್ತೆಗಾಗಿ ನಗರ ಪೊಲೀಸ್ ಆಯುಕ್ತ ಬಿ.ರಮೇಶ್ ಅವರು ಎನ್.ಆರ್.ಭಾಗದ ಎಸಿಪಿ ಅಶ್ವತ್ ನಾರಾಯಣ್, ದೇವರಾಜ ವಿಭಾಗ ಎಸಿಪಿ ಶಾಂತಮಲ್ಲಪ್ಪ, ಸಿಸಿಬಿ ಘಟಕದ ಎಸಿಪಿ ಸಂದೇಶ್ ಕುಮಾರ್ ಹಾಗೂ ಮಂಡಿ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಯೋಗೇಶ್ ಮತ್ತು ಅಧಿಕಾರಿ ಸಿಬ್ಬಂದಿಗಳನ್ನೊಳಗೊಂಡ ಪ್ರತೇಕ ತಂಡವನ್ನು ರಚಿಸಿದ್ದರು.