ಮೈಸೂರು: ಮೈಸೂರು ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಗುಡುಗು ಸಹಿತ ಭಾರೀ ಮಳೆಯಾಗಿದ್ದು ಸಾಕಷ್ಟು ಅವಾಂತರ ಸೃಷ್ಟಿಸಿದ್ದು, ಸಾವು ನೋವಿಗೂ ಕಾರಣವಾಗಿದೆ.
ಸಿಡಿಲು ಬಡಿದು ಇಬ್ಬರು, ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ಒಬ್ಬರು ರೈತರು ಮೃತಪಟ್ಟಿದ್ದಾರೆ.
ಹುಣಸೂರು ತಾಲ್ಲೂಕಿನ ಬಿಳಿಕೆರೆ ಹೋಬಳಿ ಮಂಟಿಕೊಪ್ಪಲು ಗ್ರಾಮದ ಜಮೀನಿನಲ್ಲಿ ಸಿಡಿಲು ಬಡಿದು ಹರೀಶ್ (42)ಎಂಬ ರೈತ ಮೃತಪಟ್ಟಿದ್ದಾರೆ.
ಅವರು ಬೆಳೆಗೆ ನೀರು ಹಾಯಿಸಲು ಜಮೀನಿಗೆ ತೆರಳಿದ್ದ ವೇಳೆ ಸಿಡಿಲು ಬಡಿದಿದೆ. ಅವರಿಗೆ ಪತ್ನಿ, ಪುತ್ರ, ಪುತ್ರಿ ಇದ್ದಾರೆ.
ಹುಣಸೂರು ತಾಲ್ಲೂಕಿನ ಮರೂರು, ಗಾವಡಗೆರೆ, ಮರೂರು ಕಾವಲ್, ಕಟ್ಟೆಮಳಲವಾಡಿ ಭಾಗದಲ್ಲಿ ಜೋರು ಮಳೆಯಿಂದಾಗಿ ಮರ ನೆಲಕ್ಕುರುಳಿ 20 ವಿದ್ಯುತ್ ಕಂಬಗಳು ಬಿದ್ದಿವೆ
ಪಿರಿಯಾಪಟ್ಟಣ ತಾಲ್ಲೂಕಿನ ಅವರ್ತಿ ಗ್ರಾಮದ ಲೋಕೇಶ್ (55) ಜಮೀನಿನಲ್ಲಿ ಕೆಲಸ ಮಾಡುತ್ತಿದ್ದಾಗ ಸಿಡಿಲು ಬಡಿದು ಮೃತಪಟ್ಟಿದ್ದಾರೆ.
ಜಮೀನಿನಲ್ಲಿ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ಸಮೀಪದ ಕೆ.ದೊಡ್ಡಕೊಪ್ಪಲು ಗ್ರಾಮದ ಸ್ವಾಮಿ (18) ಮೃತಪಟ್ಟಿದ್ದಾರೆ.
ಬೆಟ್ಟದಪುರ ಸಮೀಪದ ಬಾರಸೆ ಗ್ರಾಮದ ಜಮೀನಿನಲ್ಲಿ ಈ ಘಟನೆ ನಡೆದಿದೆ.
ಹರೀಶ್(42) ಮತ್ತು ಸಂಜಯ್ (19) ಗಾಯಗೊಂಡಿದ್ದಾರೆ. ಜೋರು ಮಳೆ, ಗಾಳಿಯಿಂದಾಗಿ ತಂತಿ ತುಂಡಾಗಿ ಬಿದ್ದಿತ್ತು. ಉಳುಮೆ ಮಾಡುವಾಗ ತಂತಿ ತುಳಿದಿದ್ದಾರೆ ಎಂದು ಸ್ಥಳೀಯರು ತಿಳಿಸಿದರು.
ಹೆಚ್.ಡಿ.ಕೋಟೆ: ಹೆಚ್.ಡಿ ಕೋಟೆ ತಾಲ್ಲೂಕಿನಲ್ಲೂ ಭಾರೀ ಗಾಳಿ ಮಳೆ ಆರ್ಭಟಕ್ಕೆ ಮನೆ ಮೇಲ್ಛಾವಣಿ ಹಾರಿಹೋಗಿದೆ.ಕೆಲ ಮನೆಗಳು ಉರುಳಿವೆ.
ಬಾಳೆ ಬೆಳೆ ನೆಲಕಚ್ಚಿದ್ದು,ರೈತರು ಕಂಗಾಲಾಗಿದ್ದಾರೆ.
ಮತ್ತೆ ಕೆಲವೆಡೆ ಮರಗಳು ಉರುಳಿಬಿದ್ದು ರಸ್ತೆ ಸಂಚಾರ ಬಂದ್ ಆಗಿದೆ.
ಹಲವೆಡೆ ವಿದ್ಯುತ್ ಸಂಪರ್ಕ ಕಡಿತವಾದ ಕಾರಣ ಗ್ರಾಮಸ್ಥರು ಬಹಳ ತೊಂದರೆ ಅನುಭವಿಸಬೇಕಾಯಿತು.
ಇನ್ನು ಮೈಸೂರಿನ ಜೆಎಲ್‍ಬಿ ರಸ್ತೆಯ ವೈದ್ಯಕೀಯ ವಿದ್ಯಾರ್ಥಿಗಳ ಹಾಸ್ಟೆಲ್ ಎದುರು ಮರ ಉರುಳಿ ಬಿದ್ದಿದ್ದು ವಾಹನ ಸವಾರರಿಗೆ ಸಂಚರಿಸಲು ತೀವ್ರ ಅಡಚಣೆಯಾಯಿತು.