ಮೈಸೂರು: ಅಂಬರ್ ಗ್ರೀಸ್ ಮಾರಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಹೆಚ್.ಡಿ.ಕೋಟೆ ಪೊಲೀಸರು ಯಶಸ್ವಿಯಾಗಿದ್ದು 25 ಕೋಟಿ ಬೆಲೆಯ ಅಂಬರ್ ಗ್ರೀಸ್ ವಶಪಡಿಸಿಕೊಂಡಿದ್ದಾರೆ.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮೈಸೂರು ಜಿಲ್ಲಾ ಪೊಲೀಸ್ ಅಧೀಕ್ಷಕಿ ಸೀಮಾ ಲಾಟ್ಕರ್ ಈ ಕುರಿತು ವಿವರ ನೀಡಿದರು.
ಸೆನ್ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಪುರುಷೋತ್ತಮ ಅವರಿಗೆ ಸಿಕ್ಕ ಮಾಹಿತಿ ಮೇರೆಗೆ ಹೆಚ್.ಡಿ.ಕೋಟೆ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಶಬ್ಬಿರ್ ಹುಸೇನ್ ಮತ್ತು ಸಿಬ್ಬಂದಿ
ದಾಳಿ ನಡೆಸಿದರು.
ಹೆಚ್.ಡಿ.ಕೋಟೆ ತಾಲ್ಲೋಕು ಹ್ಯಾಂಡ್‌ಪೋಸ್ಟ್ ಬಳಿಯ ಇಂಡಿಯನ್ ಹೋಟೆಲ್ ಬಳಿ ಸ್ವಿಫ್ಟ್ ಕಾರಿನಲ್ಲಿದ್ದ ಮೂರು ಮಂದಿಯನ್ನು ಬಂಧಿಸಿ 25 ಕೋಟಿ ಬೆಲೆ ಬಾಳುವ ಒಟ್ಟು 9 ಕೆ.ಜಿ 821 ಗ್ರಾಂ, 25 ಅಂಬರ್ ಗ್ರೀಸ್‌ನ್ನು ವಶಪಡಿಸಿಕೊಂಡಿದ್ದಾರೆ ಎಂದು ತಿಳಿಸಿದರು.
ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಂಗ ಬಂಧನದಲ್ಲಿಡಲಾಗಿದೆ ಎಂದು ಹೇಳಿದರು.
ಈ ಸಂಬಂಧ ಹೆಚ್.ಡಿ.ಕೋಟೆ ಪೊಲೀಸ್ ಠಾಣೆಯಲ್ಲಿ ವನ್ಯ ಜೀವಿ ಸಂರಕ್ಷಣಾ ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಕೈಗೊಳ್ಳಲಾಗಿದೆ.
ಆರೋಪಿಗಳ ಪತ್ತೆ ಕಾರ್ಯದಲ್ಲಿ ಭಾಗವಹಿಸಿದ್ದ ಪೊಲೀಸ್ ನಿರೀಕ್ಷಕರಾದ ಶಬೀರ್ ಹುಸೇನ್, ಪುರುಷೋತ್ತಮ್, ಸಿಬ್ಬಂದಿಗಳಾದ ಮಹದೇವಸ್ವಾಮಿ, ಸೈಯದ್, ಕಬೀರುದ್ದೀನ್, ಮೋಹನ್, ಸುನಿಲ್, ಯೋಗೇಶ, ಕಿರಣ್ ಕುಮಾರ್, ರಿತೀಶ್ ಕುಮಾರ್, ಮಂಜುನಾಥ.ಎಸ್, ಮಂಜುನಾಥ.ಬಿ.ವಿ, ರಂಗಸ್ವಾಮಿ, ಮಹೇಶ್.ಸಿ.ಎನ್ ಅವರ ಕಾರ್ಯವನ್ನು ಮೈಸೂರು ಜಿಲ್ಲಾ ಪೊಲೀಸ್ ಅಧೀಕ್ಷಕಿ ಸೀಮಾ ಲಾಟ್ಕರ್ ಶ್ಲಾಘಿಸಿದ್ದಾರೆ.