ಮೈಸೂರು: ನಿರ್ಮಾಣ ಹಂತದ ಕಟ್ಟಡದ ಗುಂಡಿಯಲ್ಲಿ ಉದ್ಯಮಿ ಪುತ್ರನ ಶವ ದೊರೆತಿದ್ದು ಸಾಕಷ್ಟು ಅನುಮಾನ ಹುಟ್ಟಿ ಹಾಕಿದೆ.
ನಗರದ ಹೆಬ್ಬಾಳು ಕೈಗಾರಿಕಾ ಪ್ರದೇಶದಲ್ಲಿರುವ ಟೂಲ್ಸ್ ತಯಾರಿಸುವ ಸೆನ್ ಇಂಜಿನಿಯರಿಂಗ್ ವರ್ಕ್ಸ್ ಮಾಲೀಕ ಚೆರಿಯನ್ ಅವರ ಪುತ್ರ ಕ್ರಿಸ್ಟೋಫರ್ ಚೆರಿಯನ್(35) ಎಂಬವರ ದೇಹ ದೊರೆತಿದೆ.
ವೈದ್ಯರೊಬ್ಬರಿಗೆ ಸೇರಿದ ನಿವೇಶನದಲ್ಲಿ ನಿರ್ಮಿಸುತ್ತಿರುವ ಕಟ್ಟಡದ ಗುಂಡಿಯಲ್ಲಿ ಚೆರಿಯನ್ ಶವ ಪತ್ತೆಯಾಗಿದೆ.
ಒಂದೂವರೆ ವರ್ಷದ ಹಿಂದೆ ಮರಿಯಾ ಎಂಬುವರನ್ನ ವಿವಾಹವಾಗಿದ್ದ ಕ್ರಿಸ್ಟೋಫರ್ ಚೆರಿಯನ್ ಒಂದು ಮಗುವಿನ ತಂದೆಯಾಗಿದ್ದರು.
ಮೂರು ತಿಂಗಳ ಹಿಂದೆ ಆಕಸ್ಮಿಕವಾಗಿ ನಡೆದ ಘಟನೆಯಲ್ಲಿ ಕಾಲು ಮುರಿದುಕೊಂಡು ವಿಶ್ರಾಂತಿಯಲ್ಲಿದ್ದರು.ಓಡಾಡಲು ಸಾಧ್ಯವಾಗದ ಹಿನ್ನಲೆ ಕ್ರಿಸ್ಟೋಫರ್ ಮಾನಸಿಕ ಖಿನ್ನತೆಗೂ ಒಳಗಾಗಿದ್ದರೆಂದು ಗೊತ್ತಾಗಿದೆ.
ಶನಿವಾರ ಸಂಜೆ ವಾಕಿಂಗ್ ತೆರಳಿದ ಕ್ರಿಸ್ಟೋಫರ್ ಮನೆಗೆ ಹಿಂದಿರುಗಿಲ್ಲ.ಸಂಜೆತನಕ ಮನೆಯವರು ಎಲ್ಲಾ ಕಡೆ ಹುಡುಕಿದರೂ ಏನೂ ಪ್ರಯೋಜನವಾಗಿರಲಿಲ್ಲ.
ಆದರೆ ಭಾನುವಾರ ಮಧ್ಯಾಹ್ನ ಕ್ರಿಸ್ಟೋಫರ್ ಮೃತದೇಹ ಗುಂಡಿಯಲ್ಲಿ ಪತ್ತೆಯಾಗಿದೆ.ಹಾಗಾಗಿ ಇದರಲ್ಲಿ ಸಾಕಷ್ಟು ಅನುಮಾನ ಕಾಡಿತ್ತಿದೆ.
ಕ್ರಿಸ್ಟೋಫರ್ ಸಾವು ಆಕಸ್ಮಿಕವೋ ಅಥವಾ ಯಾರಾದರೂ ಕೊಲೆ ಮಾಡಿದ್ದಾರೆಯೋ ಎಂಬ ಅನುಮಾನ ಕಾಡುತ್ತಿದ್ದು, ಸತ್ಯಾಸತ್ಯತೆ ತನಿಖೆಯಿಂದ ಹೊರಬರಬೇಕಿದೆ.ಮೃತನ ಮನೆಯವರು ವಿಜಯನಗರ ಪೊಲೀಸ್ ಠಾಣೆಗೆ ಈ ಬಗ್ಗೆ ದೂರು ನೀಡಿದ್ದು, ಸೂಕ್ತ ತನಿಖೆ ನಡೆಸಿ ಸತ್ಯ ಬಯಲಿಗೆಳೆಯಬೇಕೆಂದು ಮನವಿ ಮಾಡಿದ್ದಾರೆ.