ಮೈಸೂರು: ಚರಂಡಿಯಲ್ಲಿ ಹೂಳೆತ್ತುವಾಗ ಹೆಲ್ಮೆಟ್ ಒಳಗೆ ತಲೆಬುರುಡೆ ಪತ್ತೆ ಆದ ಪ್ರಕರಣ ಪೊಲೀಸರಿಗೆ ತಲೆ ಬಿಸಿ ತಂದಿದೆ.
ಚರಂಡಿಯಲ್ಲಿ ಕೂಲಿ ಕಾರ್ಮಿಕನಿಗೆ ಕಂಡು ಬಂದ ತಲೆಬುರುಡೆ ಪೊಲೀಸರಿಗೆ ಇನ್ನೂ ಸಿಕ್ಕಿಲ್ಲ.
ಶನಿವಾರ,ಭಾನುವಾರ ಇಡೀ ದಿನ ಶೋಧನೆ ನಡೆಸಿದರೂ ತಲೆ ಬುರುಡೆ ಪತ್ತೆ ಆಗಿರಲಿಲ್ಲ ಹಾಗಾಗಿ ಶೋಧ ಕಾರ್ಯವನ್ನು ಇನ್ನೂ ಮುಂದುವರೆಸಿದ್ದಾರೆ.
ನಗರದ ಅಗ್ರಹಾರದಲ್ಲಿರುವ ಶ್ರೀಕಾಂತ ಶಾಲೆ ಬಳಿ ಚರಂಡಿ ಹೂಳೆತ್ತುವ ಕಾರ್ಯ ನಡೆಯುತ್ತಿದ್ದಾಗ ಕೂಲಿ ಕಾರ್ಮಿಕ ಪಳನಿಸ್ವಾಮಿ ಎಂಬುವರಿಗೆ ಹೆಲ್ಮೆಟ್ ಒಳಗಿದ್ದ ತಲೆಬುರುಡೆ ಕಂಡು ಬಂದಿತ್ತು.
ಇದರಿಂದ ಹೆದರಿದ ಪಳನಿಸ್ವಾಮಿ ಹೆಲ್ಮೆಟ್ ಎಸೆದು ಓಡಿ ಹೋಗಿ ಗುತ್ತಿಗೆದಾರನಿಗೆ ಮಾಹಿತಿ ನೀಡಿದ್ದರು.
ಕೂಡಲೇ ಪಾಲಿಕೆ ಸದಸ್ಯ ಬಿ ವಿ.ಮಂಜುನಾಥ್ ಸ್ಥಳಕ್ಕೆ ಧಾವಿಸಿ ಕೆ.ಆರ್.ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಪೊಲೀಸರು ಶೋಧ ನಡೆಸಿದಾಗ ತಲೆ ಬುರುಡೆ ಕಂಡು ಬಂದಿಲ್ಲ. ತಲೆ ಬುರುಡೆ ಇದ್ದಲ್ಲಿ ಮನುಷ್ಯನ ಅಸ್ಥಿಪಂಜರವೂ ಇರಬಹುದು ಎಂಬ ಶಂಕೆ ವ್ಯಕ್ತವಾಗಿದೆ.
ಚರಂಡಿಯಲ್ಲಿ ಹರಿಯುತ್ತಿರುವ ನೀರಿನಲ್ಲಿ ತಲೆ ಬುರುಡೆ ಕೊಚ್ಚಿಕೊಂಡು ಹೋಗರಬಹುದು ಆದರೆ ದೇಹ ಎಲ್ಲಿದೆ ಎಂಬ ಬಗ್ಗೆ ಪೊಲೀಸರು ತಲೆಕೆಡಿಸಿಕೊಂಡಿದ್ದಾರೆ.
ಮತ್ತೆ ಶೋಧನಾ ಕಾರ್ಯ ಮುಂದುವರಿದಿದ್ದು, ಪಳನಿಸ್ವಾಮಿ ಕಣ್ಣಿಗೆ ಬಿದ್ದ ತಲೆಬುರುಡೆ ಪತ್ತೆಯಾಗದ ಕಾರಣ ಪೊಲೀಸರಿಗೆ ನಿಜಕ್ಕೂ ತಲೆನೋವಾಗಿ ಪರಿಣಮಿಸಿದೆ.