ಮೈಸೂರು: ಬೇಸಿಗೆ ರಜೆಯ ಮಜ ಮುಗಿದು ಚಿಣ್ಣರು ಶಾಲೆ ಕಡೆ ಹೊರಟಿದ್ದಾರೆ.
ಒಂದೆರಡು ತಿಂಗಳಿಂದ ಮನೆ,ಪ್ರವಾಸ,ಆಟಗಳಲ್ಲಿ ತೊಡಗಿಕೊಂಡು ಮಜವಾಗಿ ರಜೆಯ ಸವಿಯನ್ನು ಸವಿದಿದ್ದ ಮಕ್ಕಳಿಗೆ ಮೇ 31ರಿಂದ ಶಾಲೆಗೆ ಹೋಗಬೇಕಿದೆ.
ಹಾಗಾಗಿ ರಜದಲ್ಲಿದ್ದ ಮಕ್ಕಳಿಗೆ ಶಾಲೆಗೆ ಬರಲು ಬೇಜಾರಾಗಬಾರದೆಂದು ಶಿಕ್ಷಕರು ಪೂರ್ವ ಸಿದ್ದತೆ ಮಾಡಿಕೊಂಡು ಅವರನ್ನು ಶಾಲೆಗೆ ವಿಶೇಷವಾಗಿ ಬರಮಾಡಿಕೊಂಡಿದ್ದಾರೆ.
ಮೈಸೂರಿನ ತ್ಯಾಗರಾಜ ರಸ್ತೆಯಲ್ಲಿರುವ ಅಕ್ಕನ ಬಳಗ ಶಾಲೆಯ ವಿದ್ಯಾರ್ಥಿಗಳ ಮೇಲೆ ಹೂವು ಹಾಕಿ ಕೈಗೆ ಹೂವು ಮತ್ತು ಸಿಹಿ ಕೊಟ್ಟು ಸ್ವಾಗತಿಸಿದ್ದು ವಿಶೇಷವಾಗಿತ್ತು.
ಮೈಸೂರಿನಲ್ಲಿ ತರಗತಿಗಳು ಬುಧವಾರದಿಂದ ಪ್ರಾರಂಭಗೊಂಡಿದ್ದು, ವಿದ್ಯಾರ್ಥಿಗಳು ನಗುಮೊಗದಿಂದಲೇ ಶಾಲೆಯತ್ತ ಬಂದರು.
ಶಾಲೆಗಳನ್ನು ಮಾವಿನ ತಳಿರು ತೋರಣ ಮತ್ತು ಹೂವುಗಳಿಂದ ಅಲಂಕರಿಸಿ, ಶಿಕ್ಷಕರು ಹೂ ಹಿಡಿದು ಶಾಲಾ ದ್ವಾರದಲ್ಲಿ ನಿಂತು ವಿದ್ಯಾರ್ಥಿಗಳನ್ನು ಆತ್ಮೀಯವಾಗಿ ಬರಮಾಡಿಕೊಂಡರು.
ಅಕ್ಕನ ಬಳಗ ಶಾಲೆಯ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣವನ್ನು ಶುಚಿಗೊಳಿಸಿ ರಂಗೋಲಿಯ ಚಿತ್ತಾರದೊಂದಿಗೆ, ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು.
ವಿದ್ಯಾರ್ಥಿಗಳಿಗೆ ಆರತಿ ಎತ್ತಿ, ಹಣೆಗೆ ತಿಲಕ ಇಟ್ಟು, ಹೂವು ನೀಡಿ, ಸಿಹಿ ಹಾಗೂ ಪಠ್ಯಪುಸ್ತಕ ಹಂಚುವಮೂಲಕ ಶಾಲೆಗೆ ಸ್ವಾಗತಿಸಲಾಯಿತು.
ಈ ವೇಳೆ ಮಾತನಾಡಿದ ಹಿರಿಯ ಸಮಾಜ ಸೇವಕರಾದ ಕೆ ರಘುರಾಮ್ ವಾಜಪೇಯಿ ಮಕ್ಕಳು ಸಂತೋಷ ಹಾಗೂ ಖುಷಿಯಿಂದ ಶಾಲೆಗೆ ಆಗಮಿಸಬೇಕು ಶಿಕ್ಷಕರು ಕೂಡ ಮಕ್ಕಳ ಎಳೆ ಮನಸ್ಸನ್ನು ಅರಿತುಕೊಂಡು ವಿದ್ಯಾದಾನ ಮಾಡಬೇಕು ಎಂದು ಮನವಿ ಮಾಡಿದರು.
ಮಕ್ಕಳು ಸಂಪೂರ್ಣವಾಗಿ ವಿದ್ಯಾರ್ಜನೆಯಲ್ಲಿ ತೊಡಗಿಸಿಕೊಳ್ಳಬೇಕು, ಬಾಹ್ಯ ಆಕರ್ಷಣೆಗಳಿಗೆ ಒಳಗಾಗಬಾರದು, ವಿದ್ಯೆಯ ಜೊತೆ ಕಲೆ, ಸಂಸ್ಕೃತಿಯನ್ನು ಹವ್ಯಾಸವನ್ನಾಗಿ ಮಾಡಿಕೊಳ್ಳಬೇಕು. ಆಗ ಜೀವನ ಪರಿಪೂರ್ಣವಾಗುತ್ತದೆ ಎಂದು ಕಿವಿಮಾತು ಹೇಳಿದರು.
ಕೆಎಂಪಿ ಕೆ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷರಾದ ವಿಕ್ರಮ ಅಯ್ಯಂಗಾರ್, ಜೀವದಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ಚಿನ್ನ ಬೆಳ್ಳಿ ವ್ಯಾಪಾರಗಾರರ ಸಂಘದ ಅಧ್ಯಕ್ಷರಾದ ಸುರೇಶ್ ಗೋಲ್ಡ್, ಬೈರತಿ ಲಿಂಗರಾಜು, ಎಸ್. ಎನ್ ರಾಜೇಶ್, ಶಾಲೆಯ ಮುಖ್ಯ ಶಿಕ್ಷಕರಾದ ಸುಗುಣಾವತಿ, ಶಿವಯ್ಯ, ಶಿಲ್ಪ, ನಾಗರತ್ನ ಹಾಗೂ ಶಿಕ್ಷಕ ವೃಂದ ಹಾಜರಿದ್ದರು.