ಯಾರು ತಪ್ಪು ಮಾಡಿದರೂ ಜೈಲಿಗೆ ಹಾಕಿ: ಸತ್ಯ ಸಂಧರು ಎಂಬುದನ್ನ ಪ್ರೂವ್ ಮಾಡಿ -ಪ್ರತಾಪ್ ಸಿಂಹ ಸವಾಲ್

ಮೈಸೂರು: ಇಷ್ಟು ದಿನ ಕಾಂಗ್ರೆಸ್‌ನವರು 40% ಕಮಿಷನ್ ಅಂತಾ ಬೊಬ್ಬೆ ಹೊಡೆಯುತ್ತಿದ್ದರು, ಈಗ ಅಧಿಕಾರವೇ ಅವರ ಕೈಯಲ್ಲಿದೆ. ಎಲ್ಲವನ್ನ ತನಿಖೆ ಮಾಡಿಸಿ ಎಂದು ಸಂಸದ ಪ್ರತಾಪ್ ಸಿಂಹ ಸವಾಲು ಹಾಕುದ್ದಾರೆ.

ಬಿಜೆಪಿಯವರೇ ತಪ್ಪು ಮಾಡಿದ್ರೂ ಸರಿ ಇನ್ಯಾರೇ ತಪ್ಪು ಮಾಡಿರಲಿ ಅಂತವರನ್ನ ಹಿಡಿದು ಜೈಲಿಗೆ ಹಾಕಿಸಿ. ನೀವು ಸತ್ಯ ಸಂಧರು ಅನ್ನೋದನ್ನ ಸಾಬೀತು ಮಾಡಿಕೊಳ್ಳಿ ಎಂದು ಹೇಳಿದರು.

ಮೈಸೂರಿನಲ್ಲಿ ಶುಕ್ರವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡಿದರು.

ಪಿಎಸ್‌ಐ ಹಗರಣ, ಬಿಟ್ ಕಾಯಿನ್ ಪ್ರಕರಣ, 40% ಕಮಿಷನ್ ಹಗರಣ, ಚಾಮರಾಜನಗರ ಆಕ್ಸಿಜನ್ ದುರಂತ ಎಲ್ಲರದ ಬಗ್ಗೆ ತನಿಖೆ ಮಾಡಿ.

ಅದು ಯಾರು ತಪ್ಪು ಮಾಡಿದ್ದಾರೊ ಅವನನ್ನ ಹಿಡಿದು ಜೈಲಿಗೆ ಹಾಕಿ. ನೀವು ಸತ್ಯ ಸಂಧರು ಎಂಬುದನ್ನ ಪ್ರೂವ್‌ ಮಾಡಿ. ನೀವು ತನಿಖೆ ಮಾಡಿದ್ರೆ ನಮ್ಮ ಪಕ್ಷವನ್ನೂ ಸ್ವಚ್ಛಗೊಳಿಸೋದಕ್ಕೆ ಅನುಕೂಲವಾಗುತ್ತದೆ ಎಂದು ಹೇಳಿದರು.

ನೀವು ಬಿಜೆಪಿ ಸರ್ಕಾರದ ಮೇಲೆ ಏನೇನು ಆರೋಪ ಮಾಡಿದ್ದೀರೊ ಅವೆಲ್ಲದರ ಬಗ್ಗೆಯೂ ತುರ್ತು ತನಿಖೆ ಮಾಡಿ. ನಿಮ್ಮ ಮೇಲೆ ಜನ ಅತೀವ ವಿಶ್ವಾಸ ಇಟ್ಟಿದ್ದಾರೆ. ಆ ವಿಶ್ವಾಸವನ್ನ ಉಳಿಸಿಕೊಳ್ಳಿ ಎಂದು ತಿರುಗೇಟು ನೀಡಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯನವರು ಗ್ಯಾರಂಟಿ ಯೋಜನೆ ಘೋಷಣೆ ಮಾಡುವಾಗ ಯಾವ ಕಂಡಿಷನ್ ಹಾಕಿರಲಿಲ್ಲ.

ನನಗೂ ಫ್ರೀ, ನಿನಗೂ, ಎಲ್ಲರಿಗೂ ಫ್ರೀ ಎಂದಿದ್ದರು. ಈಗಲೂ ಯಾವ ಕಂಡಿಷನ್ ಇಲ್ಲದೇ ಗ್ಯಾರಂಟಿ ಜಾರಿ ಮಾಡಿ ನೋಡೋಣ ಎಂದರು.

ಅವರು ಆಡಿದ ಮಾತುಗಳೇ ಅವರ ತಲೆ ಮೇಲೆ ಒತ್ತಡ ತಂದಿದೆ. ಆ ಒತ್ತಡವನ್ನ ಅವರೇ ನಿಭಾಯಿಸಿಕೊಂಡು ಯಾವ ಷರತ್ತುಗಳಿಲ್ಲದೇ ಗ್ಯಾರಂಟಿ ಜಾರಿ ಮಾಡಬೇಕು ಎಂದು ಪ್ರತಾಪ್ ಸಿಂಹ ಆಗ್ರಹಿಸಿದರು.