ಮೈಸೂರು: ಸ್ವಚ್ಛತಾ ಅಭಿಯಾನಗಳು ಮನೆ ಮನೆಯಲ್ಲೂ ಆರಂಭಗೊಂಡರೆ ಮಾತ್ರ ಪರಿಸರ ಸುಂದರವಾಗಿಡಲು ಸಾಧ್ಯ ಎಂದು ಮಹಾಪೌರರಾದ ಶಿವಕುಮಾರ್ ಹೇಳಿದರು.
ನಗರದ ದೊಡ್ಡ ಮಾರ್ಕೆಟ್ ಮುಂಭಾಗ ಪ್ರಜ್ಞಾವಂತ ನಾಗರಿಕ ವೇದಿಕೆ ಹಾಗೂ ಕೆಎಂಪಿ ಕೆ ಚಾರಿಟಬಲ್ ಟ್ರಸ್ಟ್ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಪ್ಲಾಸ್ಟಿಕ್ ಮುಕ್ತಗೊಳಿಸುವ ಆಂದೋಲನಕ್ಕೆ ಚಾಲನೆ ನೀಡಿ ಮಾತನಾಡಿದರು.
ಪ್ರಸ್ತುತ ಪ್ಲಾಸ್ಟಿಕ್ ತ್ಯಾಜ್ಯ ನಮ್ಮ ಪರಿಸರವನ್ನು ಆವರಿಸಿಕೊಂಡಿದೆ, ಇದರಿಂದ ವಿವಿಧ ರೀತಿಯ ಸಾಂಕ್ರಾಮಿಕ ಖಾಯಿಲೆಗಳು ಸೃಷ್ಠಿಯಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಪರಿಸರವನ್ನು ನಾವು ಆರಾಧಿಸಿದರೆ ಅವು ನಮ್ಮನ್ನು ಹಾಗೂ ನಮ್ಮ ಮುಂದಿನ ಪೀಳಿಗೆಯನ್ನು ಕಾಯುತ್ತವೆ.
ಆರೋಗ್ಯವಂತ ಸಮಾಜ ನಿರ್ಮಾಣ ಮಾಡಲು ಸಂಘ ಸಂಸ್ಥೆಗಳ ವಿವಿಧ ಬಗ್ಗೆಯ ಕಾರ್ಯಕ್ರಮಗಳು ಸಹಕಾರಿ ಈ ನಿಟ್ಟಿನಲ್ಲಿ ಕೆಎಂಪಿ ಕೆ ಚಾರಿಟೇಬಲ್ ಟ್ರಸ್ಟ್ ಯುವಕರ ಕಾರ್ಯ ಶ್ಲಾಘನೀಯ ಎಂದು ಮೇಯರ್ ಮೆಚ್ಚುಗೆ ವ್ಯಕ್ತಪಡಿಸಿದರು.
ಯಾವುದೇ ಕಾರ್ಯಕ್ರಮ ಆಯೋಜಿಸಿಕೊಂಡು ಬರುವುದು ಸುಲಭ ಆದರೆ ಅದನ್ನು ನಿರಂತವಾಗಿ ಮುಂದುವರಿಸಿಕೊಂಡು ಹೋಗುವುದು ಬಹುದೊಡ್ಡ ಸಾಧನೆಯಾಗಿದೆ ಇದಕ್ಕೆ ಇಂತಹ ಸಂಘಟನೆಗಳು ಸಾಕ್ಷಿಯಾಗಿವೆ ಎಂದು ಹೇಳಿದರು.
ಪ್ಲಾಸ್ಟಿಕ್ ಮಿತವಾಗಿ ಬಳಸಿ ಪರಿಸರವನ್ನು ಉಳಿಸಿ ಎಂಬ ಘೋಷವಾಕ್ಯ ಎಲ್ಲಾ ಕೇರಿಗಳಲ್ಲಿ ಮೊಳಗಲಿ ಎಂದು ಶಿವಕುಮಾರ್ ಆಶಿಸಿದರು.
ಬಿಜೆಪಿ ಮುಖಂಡ ಆರ್. ರಘು ಕೌಟಿಲ್ಯ ಮಾತನಾಡಿ ಮನೆಯಿಂದಲೇ ಸ್ವಚ್ಛತಾ ಅಭಿಯಾನ ಆರಂಭವಾಗಲಿ, ಪ್ರತಿಯೊಬ್ಬರ ಮನೆಗಳಲ್ಲಿ ಪ್ಲಾಸ್ಟಿಕ್ ಬಳಕೆ ನಿಲ್ಲಿಸಲು ಪಣತೊಡಬೇಕಾಗಿದೆ ಎಂದು ಕರೆ ನೀಡಿದರು.
ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ.ಟಿ ಪ್ರಕಾಶ್, ಹಿರಿಯ ಸಮಾಜ ಸೇವಕರಾದ ಕೆ. ರಘುರಾಮ್ ವಾಜಪೇಯಿ, ನಗರಪಾಲಿಕಾ ಸದಸ್ಯರಾದ ಪ್ರಮೀಳಾ ಬರತ್, ಪ್ರಜ್ಞಾವಂತ ನಾಗರಿಕ ವೇದಿಕೆ ಅಧ್ಯಕ್ಷ ಕಡಕೋಳ ಜಗದೀಶ್, ಕೆ ಎಂ ಪಿ ಕೆ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ವಿಕ್ರಮ ಅಯ್ಯಂಗಾರ್, ಹಿರಿಯ ಆರೋಗ್ಯ ನಿರೀಕ್ಷಕ ಶಿವಪ್ರಸಾದ್, ಪರಿಸರ ಇಂಜಿನಿಯರ್ ಜ್ಯೋತಿ, ಕಿರಿಯ ಆರೋಗ್ಯ ನಿರೀಕ್ಷಕಿ ಪ್ರೀತಿ, ವಿದ್ಯಾರಣ್ಯ ಟ್ರಸ್ಟ್ ಅಧ್ಯಕ್ಷರಾದ ರವಿಶಂಕರ್, ಬೈರತಿ ಲಿಂಗರಾಜು, ಎಸ್ ಎನ್ ರಾಜೇಶ್, ಸುಚೇಂದ್ರ,ವಿಘ್ನೇಶ್ವರ ಭಟ್, ವೆಂಕಟ್ ರಾಮು, ಚರಣ್ ಮತ್ತಿತರರು ಭಾಗವಹಿಸಿದ್ದರು.
ಈ ವೇಳೆ ಗ್ರಾಹಕರಿಗೆ ಹಾಗೂ ವ್ಯಾಪಾರಸ್ಥರಿಗೆ ಬಟ್ಟೆ ಬ್ಯಾಗ್ ವಿತರಿಸುವ ಮೂಲಕ ಪ್ಲಾಸ್ಟಿಕ್ ಮುಕ್ತಗೊಳಿಸುವ ಕುರಿತು ಅರಿವು ಮೂಡಿಸಲಾಯಿತು.