ಚಾಮುಂಡಿ ಬೆಟ್ಟ ಪ್ಲಾಸ್ಟಿಕ್ ಮುಕ್ತ ಮಾಡೋಣ: ಭಕ್ತರಿಗೆ ಗಿರೀಶ್ ಮನವಿ

ಮೈಸೂರು: ಪ್ಲಾಸ್ಟಿಕ್ ಬಿಡಿ,ಬಟ್ಟೆ ಬ್ಯಾಗ್ ಹಿಡಿ ಎಂಬ ಘೋಷಣೆ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಸತತವಾಗಿ ಮೊಳಗಿ ಪರಿಸರ ಸಂರಕ್ಷಣೆ ಜಾಗೃತಿ ಮೂಡಿಸಲಾಯಿತು.

ಸಾಂಸ್ಕೃತಿಕ ನಗರಿಯನ್ನ ಪ್ಲಾಸ್ಟಿಕ್ ಮುಕ್ತ ನಗರವನ್ನಾಗಿಸಲು ಪರಿಸರ ಸ್ನೇಹಿ ತಂಡ ಹಾಗೂ ಕೆ.ಎಂ.ಪಿ.ಕೆ.ಟ್ರಸ್ಟ್ ಸಂಘಟನೆಗಳು ಜಾಗೃತಿ ಅಭಿಯಾನ ಕೈಗೊಂಡಿದೆ.

ಈಗಾಗಲೇ ಹಲವೆಡೆ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿರುವ ಸಂಘಟನೆಗಳು ಮಂಗಳವಾರ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸಿದವು.

ಮೆಟ್ಟಿಲು ಮೂಲಕ ಚಾಮುಂಡಿ ಬೆಟ್ಟಕ್ಕೆ ತೆರಳುವ ಭಕ್ತರಿಗೆ ಬಟ್ಟೆ ಬ್ಯಾಗ್ ವಿತರಿಸುವ ಮೂಲಕ ಪ್ಲಾಸ್ಟಿಕ್ ಬಳಕೆ ತ್ಯಜಿಸುವಂತೆ ಟ್ರಸ್ಟ್ ಸದಸ್ಯರು ಜಾಗೃತಿ ಮೂಡಿಸಿದರು.

ಪ್ಲಾಸ್ಟಿಕ್ ಬಿಡಿ,ಬಟ್ಟೆ ಬ್ಯಾಗ್ ಹಿಡಿ ಎಂಬ ಸಂದೇಶ ಸಾರುವ ಭಿತ್ತಿ ಚಿತ್ರಗಳನ್ನ ಪ್ರದರ್ಶಿಸುತ್ತಾ ಭಕ್ತರಿಗೆ ಬಟ್ಟೆ ಬ್ಯಾಗ್ ಗಳನ್ನ ವಿತರಿಸಿ ಪರಿಸರ ಸಂರಕ್ಷಣೆಗೆ ಸಹಕರಿಸುವಂತೆ ಮನವಿ ಮಾಡಿದರು

ಪರಿಸರ ಸ್ನೇಹಿ ತಂಡ ಹಾಗೂ ಕೆ.ಎಂ.ಪಿ.ಕೆ.ಟ್ರಸ್ಟ್ ನ ಜಾಗೃತಿ ಕಾರ್ಯಕ್ರಮಕ್ಕೆ ಪಾಲಿಕೆ ಅಧಿಕಾರಿಗಳು ಸಹ ಕೈ ಜೋಡಿಸಿದರು

ಈ ಸಂದರ್ಭದಲ್ಲಿ ಮೈಸೂರು ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಣಾಧಿಕಾರಿ  ಗಿರೀಶ್ ಮಾತನಾಡಿ ಚಾಮುಂಡಿ ಬೆಟ್ಟದ ಪರಿಸರ ರಕ್ಷಿಸಲು ಸಂಪೂರ್ಣ ಪ್ಲಾಸ್ಟಿಕ್ ನಿಷೇಧ ವಲಯ ಮಾಡಲು ನಾಗರೀಕರು ಕೈಜೋಡಿಸಬೇಕೆಂದು ಕೋರಿದರು.

ಮನೆಯಿಂದಲೇ ಪ್ಲಾಸ್ಟಿಕ್ ಬ್ಯಾಗ್ ಬಳಸುವುದನ್ನು ಜನರು ಕಡಿಮೆ ಮಾಡಬೇಕು, ಬೆಟ್ಟಕ್ಕೆ ಬರುವಾಗ ಜತೆಯಲ್ಲಿ ಬಟ್ಟೆ ಬ್ಯಾಗ್ ತರಬೇಕು ಎಂದು ಸಲಹೆ ನೀಡಿದರು.

ಸರ್ಕಾರದ ನಿಯಮವನ್ನ ಪಾಲಿಸದೇ ಪ್ಲಾಸ್ಟಿಕ್ ಬಳಸಿದರೆ ದಂಡವಿಧಿಸಲಾಗುತ್ತದೆ ಎಂದು ಗಿರೀಶ್ ಎಚ್ಚರಿಸಿದರು.

ಆಷಾಡ ಮಾಸದಲ್ಲಿ ಚಾಮುಂಡಿ ಬೆಟ್ಟದ   ಪರಿಸರ ರಕ್ಷಣೆಗೆ ಸಾಮಾಜಿಕ ಸಂಘ ಸಂಸ್ಥೆಗಳು ಕೈಜೋಡಿಸಿರುವುದು ಶ್ಲಾಘನೀಯ

ಮುಂದಿನ‌ ದಿನದಲ್ಲಿ ಚಾಮುಂಡಿ ಬೆಟ್ಟದಲ್ಲಿ ಪ್ಲಾಸ್ಟಿಕ್ ತಡೆಗಟ್ಟಲು ತಿರುಪತಿ ಗೋಪಾಲಸ್ವಾಮಿ ಬೆಟ್ಟದ ಮಾದರಿಯಲ್ಲಿ ತಪಾಸಣ ಕೇಂದ್ರ ರಚಿಸುವ ಚಿಂತನೆಯಿದೆ ಎಂದು ತಿಳಿಸಿದರು.

ಮೈಸೂರು ನಗರಪಾಲಿಕೆ ಆರೋಗ್ಯಾಧಿಕಾರಿ ಡಾ. ನಾಗರಾಜ್  ಮಾತನಾಡಿ ಪ್ಲಾಸ್ಟಿಕ್ ಬಳಕೆ ಸಂಪೂರ್ಣವಾಗಿ ನಿಲ್ಲಿಸಲು ಸಾರ್ವಜನಿಕರ ಸಹಭಾಗಿತ್ವ ಬಹಳ ಮುಖ್ಯ ಎಂದು ಹೇಳಿದರು.

ಮೈಸೂರು ಸ್ವಚ್ಛನಗರಿಯಾಗಿದ್ದು ಆಷಾಡ ಮಾಸದಲ್ಲಿ  ಬೆಟ್ಟಕ್ಕೆ ಲಕ್ಷಾಂತರ ಮಂದಿ ಭಕ್ತರು ಆಗಿಮಿಸುತ್ತಾರೆ, ಪ್ಲಾಸ್ಟಿಕ್ ತಡೆಗಟ್ಟಲು ಟಾಸ್ಕ್ ಫೋರ್ಸ್ ರಚಿಸಲಾಗುವುದು ಎಂದು ಹೇಳಿದರು.

ವೈಜ್ಞಾನಿಕವಾಗಿ  ಕಸ ನಿರ್ಮೂಲನೆಯಾಗಬೇಕಾದರೆ ಪ್ಲಾಸ್ಟಿಕ್ ಬಳಕೆ ನಿಷೇಧಿಸಬೇಕಿದೆ ಮೈಸೂರು ನಗರಪಾಲಿಕೆಯೊಂದಿಗೆ ಸ್ವಯಂಸೇವಕರ ತಂಡ ಸಾರ್ವಜನಿಕರಲ್ಲಿ ಅರಿವು ಮೂಡಿಸುತ್ತಿದೆ ಎಂದು ತಿಳಿಸಿದರು.

ಕೆ ಎಂ ಪಿ ಕೆ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ವಿಕ್ರಮ ಅಯ್ಯಂಗಾರ್, ಪರಿಸರ ಸ್ನೇಹಿ ತಂಡದ ಅಧ್ಯಕ್ಷ ಲೋಹಿತ್, ಜೀವದಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ಸಾಮಾಜಿಕ ಹೋರಾಟಗಾರ ಅಜಯ್ ಶಾಸ್ತ್ರಿ, ಚಿನ್ನ ಬೆಳ್ಳಿ ವ್ಯಾಪಾರಸ್ಥರ ಸಂಘದ ಅಧ್ಯಕ್ಷರಾದ ಸುರೇಶ್ ಗೋಲ್ಡ್,ಹಿರಿಯ ಆರೋಗ್ಯ ನಿರೀಕ್ಷಕ ಶಿವಪ್ರಸಾದ್, ಪರಿಸರ ಇಂಜಿನಿಯರ್ ಜ್ಯೋತಿ, ಕಿರಿಯ ಆರೋಗ್ಯ ನಿರೀಕ್ಷಕಿ ಪ್ರೀತಿ, ರಾಕೇಶ್, ಸಚೀಂದ್ರ, ಚಕ್ರಪಾಣಿ, ಚೇತನ್ ಆರಾಧ್ಯ, ಬಸವರಾಜು, ಮಂಜುನಾಥ, ಉಮಾ, ವನಜಾಕ್ಷಿ, ರಂಗಸ್ವಾಮಿ, ಮಂಜುನಾಥ್ ಮತ್ತಿತರರು ಅಭಿಯಾನದಲ್ಲಿ ಪಾಲ್ಗೊಂಡಿದ್ದರು.