ಮೈಸೂರು: ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಗೊಳಿಸುವುದಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಕಾನೂನು ಆಯೋಗವು ನಾಗರಿಕರಿಂದ ಅಭಿಪ್ರಾಯಗಳನ್ನು ಆಹ್ವಾನಿಸಿರುವುದು ಒಳ್ಳೆಯ ಬೆಳವಣಿಗೆ ಎಂದು ವೀರ ಸಾವರ್ಕರ್ ಯುವ ಬಳಗದ ಅಧ್ಯಕ್ಷ ರಾಕೇಶ್ ಭಟ್ ಹೇಳಿದ್ದಾರೆ.
ಏಕರೂಪ ನಾಗರಿಕ ಸಂಹಿತೆ ಸಂವಿಧಾನದ ಆಶಯವೂ ಆಗಿದೆ,ಆದ್ದರಿಂದ ಪ್ರಜ್ಞಾವಂತ ನಾಗರಿಕರು ತಮ್ಮ ಅಭಿಪ್ರಾಯವನ್ನು ದಾಖಲು ಮಾಡಬೇಕು ಅವರು ಮನವಿ ಮಾಡಿದ್ದಾರೆ.
ಹಿಂದುತ್ವದ ಮೇಲೆ ಕೆಂಡ ಕಾರುತ್ತಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಇದೀಗ ಮತಾಂತರ ನಿಷೇಧ ಕಾಯ್ದೆಯನ್ನು ರದ್ದು ಮಾಡಲು ಮುಂದಾಗುವ ಮೂಲಕ ಪರೋಕ್ಷ ಸಮರ ಸಾರಿದ್ದಾರೆ.
ಬಿಜೆಪಿ ಸರ್ಕಾರ ಮತಾಂತರ ಹಾವಳಿ ತಡೆಗಟ್ಟಲು ಮತಾಂತರ ನಿಷೇಧ ಕಾಯ್ದೆ ಜಾರಿಗೆ ತಂದಿತ್ತು. ಇದೀಗ ಒಂದೆರಡು ಸಮು ದಾಯದ ಓಲೈಕೆ ಹಾಗೂ ಮುಂದಿನ ಲೋಕಸಭಾ ಚುನಾವಣೆ ಮೇಲೆ ಕಣ್ಣಿಟ್ಟಿರುವ ಕಾಂಗ್ರೆಸ್ ಸರ್ಕಾರ, ಈ ಕಾಯ್ದೆಯನ್ನು ವಾಪಸ್ ಪಡೆಯುತ್ತಿರುವುದು ಖಂಡನೀಯ ಎಂದು ಅವರು ಹೇಳಿದ್ದಾರೆ.
ಪಠ್ಯ ಪುಸ್ತಕದಲ್ಲಿ ರಾಷ್ಟ್ರೀಯತೆ, ದೇಶ ಪ್ರೇಮ ಬಿಂಬಿಸುವ ಪಠ್ಯಕ್ರಮವನ್ನು ಹಿಂಪಡೆದಿರುವುದರಿಂದ ದೇಶದಲ್ಲಿ ಮತ್ತೆ ಮತಾಂಧತೆಯ ಶಕ್ತಿಗಳು ವಿಜೃಂಭಿಸುವುದರಲ್ಲಿ ಸಂಶಯವಿಲ್ಲ ಎಂದು ರಾಕೇಶ್ ಭಟ್ ಆತಂಕ ವ್ಯಕ್ತಪಡಿಸಿದ್ದಾರೆ.
ಮತದಾರರು ಕಾಂಗ್ರೆಸ್ ಸರ್ಕಾರದ ನೀತಿಯನ್ನು ಗಮನಿಸುತ್ತಿದ್ದು, ಮುಂದಿನ ಲೋಕಸಭಾ ಚುನಾವಣೆಯಲ್ಲಿ ಸೂಕ್ತ ಉತ್ತರ ನೀಡಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.