ಮೈಸೂರು: ಬಿಪಿಎಲ್ ಕುಟುಂಬಕ್ಕೆ ಅಕ್ಕಿ ನೀಡುವ ವಿಚಾರದಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ರಾಜಕೀಯ ಮಾಡುತ್ತಿದೆ ಎಂದು ಮೈಸೂರು ನಗರ ಬಿಜೆಪಿ ಹಿಂದುಳಿದ ವರ್ಗ ಮೋರ್ಚಾದ ಅಧ್ಯಕ್ಷ ಜೋಗಿ ಮಂಜು ಟೀಕಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆಯಡಿ ಬಿಪಿಎಲ್ ಕುಟುಂಬಕ್ಕೆ ಪ್ರತಿ ತಿಂಗಳು 5 ಕೆ.ಜಿ. ಅಕ್ಕಿ ಮತ್ತು ಅಂತ್ಯೋದಯ ಪಡಿತರದಾರರಿಗೆ 35 ಕೆ.ಜಿ ಅಕ್ಕಿಯನ್ನು ಪಡಿತರ ಮೂಲಕ ಉಚಿತವಾಗಿ ವಿತರಿಸುತ್ತಿದೆ.
ಆದರೆ ಕಾಂಗ್ರೆಸ್ ಸರ್ಕಾರ ಸತ್ಯ ಮರೆಮಾಚಿ ಬಡವರ ಅನ್ನದ ವಿಚಾರದಲ್ಲಿ ರಾಜಕೀಯ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಧಿಕಾರಕ್ಕೆ ಬಂದ ನಂತರ ಕಾಂಗ್ರೆಸ್ ಪಕ್ಷ ಐದು ಗ್ಯಾರಂಟಿಗಳನ್ನು ಯಥಾವತ್ತಾಗಿ ಜಾರಿಗೊಳಿಸಲಾಗದೆ ಜನತೆಗೆ ಮೋಸ ಮಾಡಲು ಹೊರಟಿದೆ.
ಇದೀಗ ಅಕ್ಕಿ ವಿಚಾರದಲ್ಲಿ ಕೇಂದ್ರದ ಮೇಲೆ ಗೂಬೆ ಕೂರಿಸುವ ಹುನ್ನಾರ ಮಾಡುತ್ತಿದೆ ಚುನಾವಣೆಗೂ ಮುನ್ನ ಕಾಂಗ್ರೆಸ್ ನೀಡಿದ ವಾಗ್ದಾನದಂತೆ 15 ಕೆ.ಜಿ. ಅಕ್ಕಿ ಕೊಡಬೇಕು ಎಂದು ಜೋಗಿ ಮಂಜು ಆಗ್ರಹಿಸಿದ್ದಾರೆ.
ಕೇಂದ್ರ ಸರ್ಕಾರದ ಅನ್ನ ಯೋಜನೆಯ ಅಕ್ಕಿಯನ್ನು ಸ್ವಂತ ಅನ್ನಭಾಗ್ಯ ಯೋಜನೆ ಎಂಬಂತೆ ಬಿಂಬಿಸಿ ಸಿದ್ದರಾಮಯ್ಯ ಪ್ರಚಾರ ಪಡೆದಿದ್ದಾರೆ.
ಕೊರೋನಾ ಸಂದರ್ಭದಲ್ಲಿ ಗರೀಬ್ ಕಲ್ಯಾಣ್ ಯೋಜನೆಯಡಿ ದೇಶದ 90 ಕೋಟಿಗೂ ಹೆಚ್ಚು ಬಡವರಿಗೆ ಅನ್ನ ಯೋಜನೆ ಮೂಲಕ ಕೇಂದ್ರ ಸರ್ಕಾರ ಉಚಿತ ಅಕ್ಕಿ ವಿತರಿಸಿದೆ ಇದು ಕಾಂಗ್ರೆಸ್ ಸರ್ಕಾರಕ್ಕೆ ಗೊತ್ತಿಲ್ಲವೆ ಎಂದು ಪ್ರಶ್ನಿಸಿದ್ದಾರೆ.
ಚುನಾವಣಾ ಪ್ರಚಾರದ ಸಂದರ್ಭ ಎಲ್ಲರಿಗೂ 200 ಯುನಿಟ್ ಕೊಡುವುದಾಗಿ ಹೇಳಿದ್ದ ಸರ್ಕಾರ ಈಗ ಉಲ್ಟಾ ಹೊಡೆದಿದೆ.
ರಾಜ್ಯದ ಜನರನ್ನು ಮೂರ್ಖರನ್ನಾಗಿ ಮಾಡಲು ದಿನಕ್ಕೊಂದು ಹೇಳಿಕೆ ಕೊಟ್ಟು1 ವರ್ಷದ ಸರಾಸರಿ ಬಳಕೆ ಎಂಬ ಷರತ್ತು ಹಾಕಿ ವಿದ್ಯುತ್ ದರ ಏರಿಸಲಾಗಿದೆ ಎಂದು ಜೋಗಿ ಮಂಜು ದೂರಿದ್ದಾರೆ.
ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಂಜೂರುಗೊಂಡು ಪ್ರಾರಂಭವಾಗದ ಕಾಮಗಾರಿಗಳನ್ನು ತಡೆ ಹಿಡಿಯುವುದು, ಹಲವು ಕಾಯ್ದೆ ಗಳು,ಪಠ್ಯಕ್ರಮ ಬದಲಾವಣೆ ಸರ್ಕಾರಕ್ಕೆ ಸಾಧ್ಯವಾದರೆ, ವಿದ್ಯುತ್ ದರ ಏರಿಕೆ ತಡೆಯಲು ಏಕೆ ಸಾಧ್ಯವಿಲ್ಲ ಎಂಬುದನ್ನು ತಿಳಿಸಬೇಕೆಂದು ಅವರು ಒತ್ತಾಯಿಸಿದ್ದಾರೆ.
ಮುಂದಿನ ಚುನಾವಣೆಗಳಲ್ಲಿ ಕಾಂಗ್ರೆಸ್‌ಗೆ ಮತದಾರರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ಜೋಗಿ ಮಂಜು ತಿಳಿಸಿದ್ದಾರೆ.