ನ್ಯಾಯಯುತವಾಗಿ ಕರ್ತ್ಯವ್ಯ ನಿರ್ವಹಿಸಿ ಅಧಿಕಾರಿಗಳಿಗೆ ಫಣೀಂದ್ರ ಸೂಚನೆ

ಮೈಸೂರು: ಅಧಿಕಾರಿಗಳು ಪಾರದರ್ಶಕ ಪ್ರಾಮಾಣಿಕ ಹಾಗೂ ನ್ಯಾಯಯುತವಾಗಿ  ಕರ್ತವ್ಯ ನಿರ್ವಹಿಸಬೇಕೆಂದು ಉಪ ಲೋಕಾಯುಕ್ತರಾದ  ಕೆ. ಎನ್. ಫಣೀಂದ್ರ ಸೂಚನೆ ನೀಡಿದರು.

ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಸಾರ್ವಜನಿಕರಿಂದ ಅಹವಾಲು ಸ್ವೀಕಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,

ನಾವು ಈಗಾಗಲೇ 7 ಜಿಲ್ಲೆಗಳಲ್ಲಿ ಅಹವಾಲು ಸ್ವೀಕಾರ ಮಾಡಿದ್ದೇವೆ ಎಂದು ತಿಳಿಸಿದರು.

ಇದು 8ನೆ ಜಿಲ್ಲೆಯಾಗಿದೆ,ಸರ್ಕಾರದ ಮೂರು ಅಂಗಗಳು ತಮ್ಮ ಕಾರ್ಯಗಳನ್ನು ನ್ಯಾಯುತವಾಗಿ ಮಾಡಬೇಕಿದೆ ಎಂದು ತಿಳಿಸಿದರು.

ಶಾಸಕಾಂಗ ಕಾನೂನುಗಳನ್ನು ರಚಿಸಿದರೆ, ಆ ಕಾನೂನುಗಳನ್ನು ಕಾರ್ಯಾಂಗ ಜಾರಿಗೆ ತಂದು ಜನರಿಗೆ ತಲುಪಿಸುತ್ತದೆ.

ಜನರಿಗೆ ನೀಡಿರುವ ಕಾನೂನು, ಹಕ್ಕುಗಳ ಉಲ್ಲಂಘನೆ ಅದಾಗ ನ್ಯಾಯಾಂಗ ಇದನ್ನು ಸರಿಪಡಿಸುವ ಕಾರ್ಯ ಮಾಡುತ್ತದೆ.

ಮಾಧ್ಯಮವು ಈ ಮೂರು ಅಂಗಗಳು ಮಾಡುವ ತಪ್ಪುಗಳನ್ನು ಗಮನಕ್ಕೆ ತಂದು ಸರಿಪಡಿಸುವ ಕಾರ್ಯಕ್ಕೆ ಸಹಕರಿಸುತ್ತದೆ ಎಂದು ವಿವರವಾಗಿ ತಿಳಿಸಿಕೊಟ್ಟರು.

ಎಲ್ಲೆಲ್ಲಿ ಕಾರ್ಯಾಂಗ, ಶಾಸಕಾಂಗ ತಪ್ಪು ದಾರಿ ಹಿಡಿದು ಕಾನೂನು ಉಲ್ಲಂಘನೆ ಮಾಡಿದರೆ, ಕರ್ತವ್ಯ ಲೋಪ ಎಸಗಿದರೆ ಲೋಕಾಯುಕ್ತ ಪ್ರಕರಣ ದಾಖಲಿಸಿಕೊಂಡು ಕ್ರಮ ಕೈಗೊಳ್ಳುತ್ತದೆ ಎಂದು ಹೇಳಿದರು.

ಸಾರ್ವಜನಿಕರಿಂದ ದೂರುಗಳನ್ನು ಸ್ವೀಕರಿಸಿ ನಮ್ಮ ವ್ಯಾಪ್ತಿಗೆ ಬಂದರೆ ದೂರನ್ನು ಸಂಬಂದಿಸಿದ ಅಧಿಕಾರಿಗಳಿಗೆ ಕಳುಹಿಸಿ ಸಮಸ್ಯೆ ಪರಿಹರಿಸಲಾಗುವುದು ಎಂದು ಉಪ ಲೋಕಾಯರು ತಿಳಿಸಿದರು.

ನಮ್ಮ ವ್ಯಾಪ್ತಿ ಮೀರಿದ ದೂರು ಆದರೆ ಮಾಹಿತಿ ನೀಡಿ ನ್ಯಾಯಾಲಯಕ್ಕೆ ದೂರು ಸಲ್ಲಿಸಲು ಮಾರ್ಗದರ್ಶನ ನೀಡಲಾಗುವುದು ಎಂದು ಹೇಳಿದರು.

ಅಧಿಕಾರಿಗಳು ಆತ್ಮ ಸಾಕ್ಷಿಗೆ ಅನುಗುಣವಾಗಿ ಕಾರ್ಯ ನಿರ್ವಹಿಸಬೇಕು. ಸಾರ್ವಜನಿಕರಿಗೆ ತಲುಪಬೇಕಾದ ಸವಲತ್ತುಗಳನ್ನು ನ್ಯಾಯಯುತವಾಗಿ ಸಕಾಲದಲ್ಲಿ ತಲುಪಿಸಬೇಕು ಎಂದು ಫಣೀಂದ್ರ ಸಲಹೆ ನೀಡಿದರು.

ಲೋಕಾಯುಕ್ತಕ್ಕೆ ಅನಾವಶ್ಯಕವಾಗಿ ಸುಳ್ಳು ದೂರುಗಳನ್ನು ಸಲ್ಲಿಸಿದರೆ ಅಂತವರಿಗೆ 6 ತಿಂಗಳು ಜೈಲಿಗೆ ಕಳುಹಿಸುವ ಅಧಿಕಾರ ಲೋಕಾಯುಕ್ತ ಸಂಸ್ಥೆಗೆ ಇದೆ ಎಂದು ಎಚ್ಚರಿಕೆ ಸಹಾ ನೀಡಿದರು.

ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಿದ ಉಪ ಲೋಕಾಯುಕ್ತರು ಸಂಬಂದಿಸಿದ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡುವುದಾಗಿ ತಿಳಿಸಿದರು.

ಸಭೆಯಲ್ಲಿ ಲೋಕಾಯುಕ್ತ ಉಪ ನಿಬಂಧಕರಾದ ಚನ್ನಕೇಶವ ರೆಡ್ಡಿ, ಅಪರ ನಿಬಂಧಕರಾದ ಶಿವಕುಮಾರ್ ಬಿ. ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ದಿನೇಶ್, ಮೈಸೂರು ಜಿಲ್ಲಾ ಲೋಕಾಯುಕ್ತ ಎಸ್ ಪಿ. ಸುರೇಶ್ ಬಾಬು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಎಂ ಗಾಯಿತ್ರಿ, ಅಪರ ಜಿಲ್ಲಾಧಿಕಾರಿ ಕವಿತಾ ರಾಜಾರಾಮ್, ಸೇರಿದಂತೆ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಪಾಲ್ಗೊಂಡಿದ್ದರು.

ದೂರದೂರುಗಳಿಂದ ಬಂದಿದ್ದ ಸಾರ್ವಜನಿಕರು ತಮ್ಮ ಅಹವಾಲುಗಳನ್ನು ಅಧಿಕಾರಿಗಳಿಗೆ ಸಲ್ಲಿಸಿದರು.