ಹಾವಭಾವದ ಸುತ್ತ

-ಜಿ.ಆರ್.ಸತ್ಯಲಿಂಗರಾಜು
ಮನುಷ್ಯನ ಒಳಗೆಯೇ ಹಲವಾರು ಸ್ವಭಾವ ಇವೆ. ಒಳಗೊಳಗೇ ಅವು ಸಂದರ್ಭ ಅನುಸಾರ ಸಹಜ ಸ್ಪಂದನೆಗೆ ಒಳಗಾಗುತ್ತಿರುತ್ತವೆ.
ಈ ಅಂತರ್ಗತ ಸ್ವಭಾವವೇ ‘ಹಾವ’. ಇದನ್ನ ಬಹಿರಂಗವಾಗಿ ಪ್ರದರ್ಶಿಸುವುದೇ ‘ಭಾವ’ (ಭಾವ ಎಂದರೆ ಮಾಡುವುದು ಎಂದರ್ಥ).
ಅಂತರ್ಮುಖಿ ತುಮುಲವನ್ನ ಬಹಿರ್ಮುಖಗೊಳಿಸುವುದೇ ‘ಹಾವಭಾವ’ ಆಗಿರುವುದರಿಂದ ಇವೆರಡೂ ಒಂದಕ್ಕೊಂದು ಪ್ರತಿರೂಪದ ರೀತಿ ಕಾಣಿಸಿದಾಗಲೇ ಅಭಿನಯದಲ್ಲಿ ಸಹಜತೆ ಬರುತ್ತೆ.
ಕಲಾವಿದ ಆಗಬೇಕು ಎಂಬ ತುಮುಲ ಇಟ್ಡುಕೊಂಡಿರುವವರು ತನ್ನ ಒಳಗಿನ ಅನುಭವಗಳನ್ನೇ ಸೂಕ್ಷ್ಮವಾಗಿ ಅಭ್ಯಸಿಸಿಕೊಂಡು, ಸಂದರ್ಭ ಅನುಸಾರ ಅದನ್ನ ಪ್ರಕಟಿಸುವ ಚತುರತೆ ಹೊಂದಿರಬೇಕು. ಇದರಿಂದಾಗಿ ಕಲಾವಿದ ಮಾನಸಿಕ ತಜ್ಞನಂತೆ ಇರಬೇಕಾಗುತ್ತೆ.
ಈ ಹಾವಭಾವ ಪ್ರಕಟಿಸಲು ಆಂಗಿಕ, ವಾಚಕ, ಆಹಾರ್ಯ, ಸಾತ್ವಿಕ ಎಂಬ ನಾಲ್ಕು ಪ್ರಕಾರ ಇವೆ ಎಂದು ಲಕ್ಷಣ ನಾಟ್ಯ ದರ್ಪಣದಲ್ಲಿ ವರ್ಣನೆ ಇದೆ. ವಾಚಕಾಭಿನಯ ಎಂದರೆ ಭಾವಕ್ಕೆ ತಕ್ಕನಾಗಿ ಮಾತಾಡುವುದು.
ಆಂಗಿಕಾಭಿನಯ ಎಂದರೆ ಕಾರ್ಯಕ್ಕೆ ತಕ್ಕಂತೆ ಶರೀರದ ಅಂಗಗಳನ್ನ ಆಡಿಸುವುದು.
ಸಾತ್ವಿಕಾಭಿನಯ ಎಂದರೆ ಉತ್ತಮ ಮಧ್ಯ ಮಾಧ್ಯಮ ಪ್ರಕೃತ್ವಾದಿ ಔಚಿತ್ಯಕ್ಜೆ ಅನುಗುಣವಾಗಿ ಸ್ವರಭೇದಾದ್ಯನುಭವ ಪ್ರದರ್ಶಿಸುವುದು. ಆಹಾರ ್ಯ ಅಭಿನಯ ಎಂದರೆ, ಬಣ್ಣ ವೇಷಭೂಷಣದಿಂದ ದೇಹ ಅಲಂಕರಿಸಿಕೊಳ್ಳುವುದು.
ಈ ನಾಲ್ಕೂ ಪ್ರಕಾರಗಳಲ್ಲಿ ಆಹಾರ್ಯಾಭಿನಯ ಮಾತ್ರ ಬಾಹ್ಯವಾದುದು, ಉಳಿದ ಮೂರೂ ಅಭಿನಯ ದೇಹ ಅಥವಾ ದೇಹದೊಳಕ್ಕೆ ಸಂಬಂಧಿಸಿವೆ.

ಅಭಿನಯ ಇರೋದೆ ನಾಲ್ಕು ರೀತಿ
ವೇದಗಳು ನಾಲ್ಕು. ಅಂತೆಯೇ ಅಭಿನಯ ಕೂಡ ನಾಲ್ಕು ಪ್ರಕಾರದಲ್ಲಿದೆ (ಆಂಗಿಕ, ವಾಚಕ, ಸಾತ್ವಿಕ, ಆಹಾರ್ಯ).
ಇವುಗಳ ವಿವರ ನೋಡುವುದಾದರೆ….
ಆಂಗಿಕ ಅಭಿನಯ: ಕಲಾವಿದರ ಶರೀರದ ಭಾಗಗಳೇ ಸಮಯಾನುಸಾರ ಭಾವನೆ ಸ್ಫುರಿಸುತ್ತವೆ. ಅಂದರೆ ಇಲ್ಲಿ ಮಾತು ಇರಲ್ಲ, ದೈಹಿಕವಾಗಿ ವ್ಯಕ್ತಪಡಿಸುವಂಥದ್ದು ಮತ್ತೊಂದು ಪಾತ್ರಕ್ಕೆ ಅರ್ಥವಾಗಿದೆ ಎಂದುಕೊಂಡು ಅಭಿನಯಿಸಲಾಗುತ್ತೆ. ಆದಿ ಮಾನವನಿಗೆ ಇನ್ನೂ ಮಾತು ಬರದಿದ್ದ ಕಾಲಘಟ್ಟ, ಮೂಕಿ ಸಿನಿಮಾ ಅವಧಿ ಇದಕ್ಕೆ ಉದಾಹರಣೆ. ಕಮಲ ಹಾಸನ್ ಅಭಿನಯದ ‘ಪುಷ್ಪಕ ವಿಮಾನ’ ಅನೇಕ ಕಲಾವಿದರು ದೈಹಿಕ ಅಂಗಗಳ ಚಲನೆಯಿಂದಲೇ ಭಾವತೀವ್ರತೆ ಕಟ್ಟಿಕೊಡುತ್ತಿದ್ದನ್ನ ನೆನಯಬಹುದು.
ಆಹಾರ್ಯಾಭಿನಯ: ಪಾತ್ರಕ್ಕೆ ತಕ್ಕ ವೇಷಭೂಷಣ ತೊಡುವ ಬಗೆ ಇದು. ಕಲಾವಿದ ಮಾತಾಡುತ್ತಾ ಅದಕ್ಕೆ ಸಂಬಂಧಿಸಿದ ವಸ್ರ್ರಾಭರಣ ಮುಟ್ಟುತ್ತಾ ಅಭಿನಯಿಸುವುದು ಮತ್ತಷ್ಟು ಶೋಭೆ ತರುತ್ತೆ. ಉದಾಹರಣೆಗೆ, ರಾಜನ ಪಾತ್ರಧಾರಿಯು ‘ನಿನ್ನ ಕುತ್ತಿಗೆ ಸೀಳುವೆ’ ಎಂದೇಳುತ್ತಾ, ಸೊಂಟದಲ್ಲಿದ್ದ ಖಡ್ಗ ತೆಗೆವುದು: ಶುಭ ವಿಚಾರ ತಿಳಿಸಿದ್ದಕ್ಕೆ ಪ್ರತಿಯಾಗಿ ಕುತ್ತಿಗೆಯಲ್ಲಿದ್ದ ಕಂಠೀಹಾರ ತೆಗೆದುಕೊಡುವುದು…..ಇಂಥವೆಲ್ಲ ಅಭಿನಯಕ್ಕೆ ಸಹಕಾರಿ ಆಗುವುದು ಮಾತ್ರವಲ್ಲ, ಅಭಿನಯದ ಅರ್ಥವನ್ನ ಮತ್ತಷ್ಟು ಹೆಚ್ಚಿಸುತ್ತೆ. ನೋಡುಗರ ಮನದ ಮೇಲೂ ಪ್ರಭಾವ ಬೀರುತ್ತೆ.

ವಾಚಕಾಭಿನಯ: ಅಭಿನಯಿಸುತ್ತಾ ಮಾತಾಡುವುದು ವಾಚಕಾಭಿನಯ. ಇದರಲ್ಲಿ ಅನೇಕ ವಿಧಗಳಿವೆ. ಉಪದೇಶ ಇಲ್ಲದೆ ಬಿಡಾಡಿಯಾಗಿ ಆಡುವ ಮಾತು ‘ಆಲಾಪ’: ಉದಾಹರಣೆ ಸಮೇತ ಆಡುವ ಮಾತು ‘ಪ್ರಲಾಪ’; ಕರುಣೆ ತುಂಬಿದ ಮಾತು ‘ವಿಲಾಪ’, ಒಂದೇ ಮಾತನ್ನ ಅನೇಕ ಸಲ ಹೇಳುವುದು ‘ಅನುಲಾಪ’, ಉಕ್ತಿ-ಪ್ರತ್ಯುಕ್ತಿ ಸಹಿತವಾದುದು ‘ಸಂಲಾಪ’ , ಮೊದಲು ಹೇಳಿದ ಮಾತನ್ನ ಮತ್ತೊಂದು ರೀತಿ ಬದಲಿಸಿ ಹೇಳುವುದು ‘ಅಪಲಾಪ’, ಆತ ಇದನ್ನ ಮಾಡಬೇಕೆಂದು ಹೇಳಿ ಕಳುಹಿಸುವುದು ‘ಸಂದೇಶ’, ನೀನು ಹೇಳಿದ್ದನ್ನೇ ನಾನು ಮಾಡಿದ್ದು ಎನುವಂಥದ್ದು ‘ಅತಿದೇಶ’, ಹೌದು ಮಾತಾಡ್ತಿರೋದು ನಾನೇ ಎಂದು ತನ್ನನ್ನ ತಾನೇ ನಿರ್ದೇಶಿಸಿಕೊಳ್ಳುವ ಮಾತು ‘ನಿರ್ದೇಶಕ’, ಹಾರಿಕೆ ಅಥವಾ ನೆಪಮಾತ್ರದ ಮಾತು ‘ವ್ಯಪದೇಶ’, ಹೀಗೆ ಮಾಡು ಎಂದು ಉಪದೇಶಿಸುವುದು ‘ಉಪದೇಶ’, ಅವನು ಹೀಗೆ ಹೇಳಿದ ಎಂದು ಮತ್ತೊಬ್ಬನಿಗೆ ಹೇಳುವುದು ‘ಅಪದೇಶ’. ಇವು ವಾಚಕಾಭಿನಯದ ಭಾಗಗಳು. ಇಲ್ಲಿ ಪ್ರತಿಯೊಂದು ಮಾತಿನ ರೀತಿಗೂ ಧ್ವನಿ ಏರಿಳಿತ, ಮಾತಿನ ಗಾತ್ರವನ್ನ ಹೆಚ್ಚುಕಡಿಮೆ ಮಾಡುವ ಮೂಲಕ ಅಭಿನಯವನ್ನ ಪರಿಣಾಮಕಾರಿ ಆಗಿಸಬಹುದು. ಮಾತುಗಳೂ ಅಭಿನಯಕ್ಕೆ ಸ್ಫೂರ್ತಿ ನೀಡುವುದರಿಂದ ಮಾತಿನಲ್ಲಿ ಲಯ ಇರಬೇಕು. ಕೋಪದ ಮಾತನ್ನ ಹಾಸ್ಯದಲ್ಲಿ, ಹಾಸ್ಯದ ಮಾತನ್ನ ಶೋಕದಲ್ಲಿ ಹೇಳುವುದು ಅಭಾಸವಾಗುತ್ತೆ. ಏರಿಳಿತ ಇಲ್ಲದೆ ಒಂದೇ ಸಮ ಮಾತಾಡುವುದು ಅಭಾಸವಾಗುತ್ತೆ. ಹೀಗಾಗಿ ಕಲಾವಿದ ಮಾತಿನ ಶೈಲಿ ರೂಪಿಸಿಕೊಳ್ಳಬೇಕು.
ಸಾತ್ವಿಕಾಭಿನಯ: ಮನದೊಳಗಿನ ಭಾವನೆಗಳನ್ನು ಪಾತ್ರ, ಸಮಯ ಸಂದರ್ಭಕ್ಕೆ ಅನುಗುಣವಾಗಿ ಅಭಿವ್ಯಕ್ತಿಸುವುದೆ ಸಾತ್ವಿಕಾಭಿನಯ. ಅಂದರೆ ಅರಚಾಟ ಕಿರುಚಾಟ ಪಾತ್ರಕ್ಕೆ ಅನಿವಾರ್ಯ ಆಗಿದ್ದರೂ, ಅದನ್ನೇ ಅತಿಯಾಗಿಸುವುದು ಅಥವಾ ಕರ್ಕಶಗೊಳಿಸುವುದು ಸಲ್ಲದು. ಪಾತ್ರದಲ್ಲಿ ತನ್ಮಯನಾಗಿ ಅಭಿನಯಿಸಿ ಪ್ರೇಕ್ಷಕರನ್ನ ಲಯಬದ್ಧ ಮಾತಿನ ಮೂಲಕ ಸೆಳೆಯುವ ಸಾತ್ವಿಕಾಭಿನಯ ರೂಡಿಸಿಕೊಂಡವರು ಉತ್ತಮ ಕಲಾವಿದ ಎನಿಸಿಕೊಳ್ಳುವುದು ಖಚಿತ.