ಮೈಸೂರು: ಯೋಗ ಮಾಡುವುದರಿಂದ ಮನುಷ್ಯನ ಮಾನಸಿಕ ಹಾಗೂ ದೈಹಿಕ ಆರೋಗ್ಯವನ್ನು ಹೆಚ್ಚುತ್ತದೆ ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದರು
ವಿಶ್ವ ಯೋಗ ದಿನಾಚರಣೆ ಪ್ರಯುಕ್ತ ಮೈಸೂರು ಅರಮನೆ ಮೈದಾನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆಯುಷ್ ಇಲಾಖೆ, ಮೈಸೂರು ಅರಮನೆ ಮಂಡಳಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ವಿವಿಧ ಯೋಗ ನಿರತ ಸಂಘ ಸಂಸ್ಥೆಗಳು ಹಮ್ಮಿಕೊಂಡಿದ್ದ 9 ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
2015 ರಲ್ಲಿ ಪ್ರಧಾನ ಮಂತ್ರಿಗಳು ಜೂ. 21 ನ್ನು ವಿಶ್ವ ಯೋಗ ದಿನವಾಗಿ ಆಚರಣೆ ಮಾಡಬೇಕು ಎಂದು ವಿಶ್ವ ಸಂಸ್ಥೆಯಲ್ಲಿ ಮಂಡಿಸಿದ್ದರು.
ಬಹುತೇಕ ರಾಷ್ಟ್ರಗಳು ಅದಕ್ಕೆ ಒಪ್ಪಿಗೆ ಸೂಚಿಸಿದವು. ಅಂದಿನಿಂದ ವಿಶ್ವ ಯೋಗ ದಿನಾಚರಣೆ ಮಾಡಲಾಗುತ್ತಿದೆ. ಮೈಸೂರನ್ನು ಸಿಟಿ ಆಫ್ ಯೋಗ ಎಂದು ಕರೆಯಲಾಗುತ್ತದೆ ಎಂದು ತಿಳಿಸಿದರು.
ವಿಧಾನ ಪರಿಷತ್ ಸದಸ್ಯ ಸಿ. ಎನ್ ಮಂಜೇಗೌಡ ಮಾತನಾಡಿ ನಾವು ಚಿಕ್ಕವರಿದ್ದಾಗ ಡಾ. ರಾಜಕುಮಾರ್ ಅವರ ಯೋಗವನ್ನು ನೋಡುತ್ತಿದ್ದೆವು. ಯೋಗ ಮಾಡುವುದರಿಂದ ದೇಹಕ್ಕೆ ತೇಜಸ್ಸು ಉಂಟಾಗುತ್ತದೆ, ಯೋಗ ಮಾನಸಿಕ ಒತ್ತಡವನ್ನು ಕಡಿಮೆ ಮಾಡುತ್ತದೆ ಎಂದು ತಿಳಿಸಿದರು.
ದೇಶ ಕಾಯುವ ಸೈನಿಕರಿಗೂ ಯೋಗ ಮಾಡಿಸಬೇಕು ಎಂದು ಮನವಿ ಮಾಡಿದರು.
ಜಿಲ್ಲಾಧಿಕಾರಿಗಳಾದ ಡಾ. ಕೆ.ವಿ ರಾಜೇಂದ್ರ ಅವರು ಮಾತನಾಡಿ ಮೈಸೂರು ಯೋಗಕ್ಕೆ ಪ್ರಸಿದ್ದಿ ಪಡೆದಿದೆ. ಯೋಗದಲ್ಲಿ ಮೈಸೂರು ಗಿನ್ನಿಸ್ ದಾಖಲೆ ಮಾಡಿತ್ತು. ಯೋಗ ಆರೋಗ್ಯಕ್ಕೆ ಉತ್ತಮ ಪ್ರಯೋಜನ ನೀಡುತ್ತದೆ, ಮತ್ತೊಮ್ಮೆ ಯೋಗದಲ್ಲಿ ಮೈಸೂರು ಗಿನ್ನಿಸ್ ದಾಖಲೆ ಮಾಡಬೇಕು ಎಂದು ಹೇಳಿದರು.
ಶ್ರೀ ಸೋಮೇಶ್ವರ ಸ್ವಾಮೀಜಿ ಅವರು ಮಾತನಾಡಿ ಯೋಗ ಮನಸ್ಸನ್ನು ಹಿಡಿತದಲ್ಲಿ ಇಡುತ್ತಡೆ ಎಂದು ತಿಳಿಸಿದರು.
ಶಂಕನಾದ ಮೊಳಗಿಸುವ ಮೂಲಕ ಯೋಗವನ್ನು ಪ್ರಾರಂಭಿಸಿದುದು ವಿಶೇಷ.
ಕಾರ್ಯಕ್ರಮದಲ್ಲಿ ಶಾಸಕ ಶ್ರೀವತ್ಸ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ. ಎಂ ಗಾಯತ್ರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್, ಮುಖಂಡರಾದ ತನ್ವೀರ್ ಪಾಷಾ ಸೇರಿದಂತೆ ವಿವಿಧ ಧರ್ಮಗುರುಗಳು ಹಾಗೂ ಯೋಗಪಟುಗಳು ಭಾಗವಹಿಸಿದ್ದರು.
ಸಚಿವರು,ಶಾಸಕರ ಗೈರು:ಅರಮನೆಯಲ್ಲಿ ಜಿಲ್ಕಾಡಳಿತದ ವತಿಯಿಂದ ಹಮ್ಮಿಕೊಳ್ಳಲಾದ ಯೋಗ ಕಾರ್ಯಕ್ರಮಕ್ಕೆ ಕಾಂಗ್ರೆಸ್ ಪಕ್ಷದ ಸಚಿವರು ಹಾಗೂ ಶಾಸಕರು ಗೈರಾಗಿದ್ದಾರೆ.
ಸಚಿವರಾದ ಡಾ ಎಚ್ ಸಿ ಮಹದೇವಪ್ಪ ಕೆ. ವೆಂಕಟೇಶ್, ಶಾಸಕರಾದ ತನ್ವೀರ್ ಸೇಠ್, ರವಿಶಂಕರ್, ದರ್ಶನ್ ಧ್ರುವನಾರಾಯಣ್, ಅನಿಲ್ ಚಿಕ್ಕಮಾದು, ಹರೀಶ್ ಗೌಡ ಗೈರಾಗಿದ್ದರು.