ಆಷಾಢ‌ ಶುಕ್ರವಾರಕ್ಕೆ ಹೆಚ್ಚು ಭಕ್ತರು: ಚಾಮುಂಡಿ‌ಬೆಟ್ಟದಲ್ಲಿ ವ್ಯವಸ್ಥೆ ಪರಿಶೀಲಿಸಿದ ಅಧಿಕಾರಿಗಳು

ಮೈಸೂರು: ಆಷಾಢ ಶುಕ್ರವಾರಗಳಂದು ಮೈಸೂರಿನ ಅಧಿದೇವತೆ ಚಾಮುಂಡೇಶ್ವರಿ ದೇವಿ ದರ್ಶನಕ್ಕೆ ಅತಿ ಹೆಚ್ಚು ಭಕ್ತರು ಬರುವುದರಿಂದ ಬೆಟ್ಟದಲ್ಲಿ ಅವರಿಗೆ ಯಾವುದೇ ತೊಂದರೆಯಾಗದಂತೆ‌ ವ್ಯವಸ್ಥೆ ಮಾಡಲಾಗಿದ್ದು, ಪೊಲೀಸ್ ಕಮಿಷನರ್ ‌ಹಾಗೂ‌ ಜಿಲ್ಲಾದಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.

ಹಾಗಾಗಿ ವ್ಯವಸ್ಥೆ ಹೇಗಿದೆ ಎಂಬುದನ್ನು ಜಿಲ್ಲಾಧಿಕಾರಿ ಡಾ.ರಾಜೇಂದ್ರ,ಮೈಸೂರು ಪೊಲೀಸ್ ಕಮಿಷನರ್ ‌ರಮೇಶ್‌ ಬಿ.ಹಾಗೂ ಅದಿಕಾರಿಗಳು ಚಾಮುಂಡಿ ಬೆಟ್ಟದಲ್ಲಿ ಗುರುವಾರ ಪರಿಶೀಲನೆ ನಡೆಸಿದರು.

ಚಾಮುಂಡಿಬೆಟ್ಟದಲ್ಲಿ ಜೂ.23 ರಿಂದ ಜುಲೈ 14 ರ ವರೆಗೆ ಆಷಾಢ ಶುಕ್ರವಾರ ಹಾಗೂ ಜುಲೈ 10 ರ ವರ್ಧಂತಿ ದಿನದಂದು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಬರುತ್ತಾರೆ.

ಸುಗಮ ಸಂಚಾರದ ದೃಷ್ಟಿಯಿಂದ ಹಾಗೂ ಸಾರ್ವಜನಿಕರಿಗೆ ಸುಗಮ ಸಂಚಾರದ ವ್ಯವಸ್ಥೆಯನ್ನು ಕಲ್ಪಿಸುವ ಸಲುವಾಗಿ ಭಕ್ತರು ತಮ್ಮ ವಾಹನಗಳನ್ನು ಲಲಿತಮಹಲ್ ಮೈದಾನದಲ್ಲಿ ನಿಲುಗಡೆ ಮಾಡಬೇಕು.

ಹಾಗೂ ಜಿಲ್ಲಾಡಳಿತ ವ್ಯವಸ್ಥೆ ಮಾಡಿರುವ ಉಚಿತ ಕೆಎಸ್​ಆರ್​ಟಿಸಿ ಬಸ್‌ಗಳಲ್ಲಿ ದೇವಸ್ಥಾನಕ್ಕೆ ತೆರಳಬೇಕು ಎಂದು ನಗರ ಪೊಲೀಸ್ ಆಯುಕ್ತರು ಆದೇಶಿಸಿದ್ದಾರೆ.

ಬೆಳಗಿನ ಜಾವ 3 ರಿಂದ ರಾತ್ರಿ 10ರ ವರೆಗೆ ಉಚಿತ ಬಸ್ ಸೌಲಭ್ಯ ವ್ಯವಸ್ಥೆ ಮಾಡಲಾಗಿದೆ.

ಆಷಾಢ ಶುಕ್ರವಾರಗಳಂದು ಮತ್ತು ವರ್ಧಂತಿ ದಿನದಂದು ತಾವರೆಕಟ್ಟೆಯಿಂದ, ಉತ್ತನಹಳ್ಳಿ ರಸ್ತೆ ಕಡೆಯಿಂದ ಮತ್ತು ಇಂಡಸ್‌ವ್ಯಾಲಿ ರಸ್ತೆ ಮೂಲಕ ಚಾಮುಂಡಿಬೆಟ್ಟಕ್ಕೆ ಹೋಗುವ (ಶಿಷ್ಟಾಚಾರವಿರುವ ಗಣ್ಯರು ಮತ್ತು ಅತಿಗಣ್ಯರ ವಾಹನಗಳು ಮತ್ತು ಸಾರಿಗೆ ಸಂಸ್ಥೆಯ ವಾಹನಗಳನ್ನು ಹೊರತುಪಡಿಸಿ) ಎಲ್ಲಾ ಮಾದರಿಯ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ.

ಲಲಿತಮಹಲ್ ಮೈದಾನದ ಖಾಲಿ ಸ್ಥಳದಲ್ಲಿ ಸಂಚಾರ ಪೊಲೀಸರು ನೀಡುವ ಸೂಚನೆ ಅನುಸಾರ ಕ್ರಮಬದ್ಧವಾಗಿ ದ್ವಿಚಕ್ರ ಮತ್ತು ನಾಲ್ಕು ಚಕ್ರದ ವಾಹನಗಳನ್ನು ಪ್ರತ್ಯೇಕವಾಗಿ ನಿಲುಗಡೆ ಮಾಡಬೇಕು.

ಲಲಿತಾದ್ರಿಪುರದ ರಸ್ತೆ ಕಡೆಯಿಂದ ಚಾಮುಂಡಿಬೆಟ್ಟಕ್ಕೆ ಬರುವ ಭಕ್ತರು ವಾಹನಗಳನ್ನು ಲಲಿತಾದ್ರಿಪುರದ ರಸ್ತೆ ಮೂಲಕ ಲಲಿತಮಹಲ್ ಮೈದಾನ ತಲುಪಿ ಲಲಿತಮಹಲ್ ಮೈದಾನದಲ್ಲಿ ನಿಲುಗಡೆ ಮಾಡಬೇಕು.

ಉತ್ತನಹಳ್ಳಿ ರಸ್ತೆ ಕಡೆಯಿಂದ ಚಾಮುಂಡಿಬೆಟ್ಟಕ್ಕೆ ಬರುವ ಭಕ್ತರು ನಂಜನಗೂಡು ರಸ್ತೆ ಮೂಲಕ ಎಂ.ಎಲ್. ಸೋಮಸುಂದರಂ ವೃತ್ತ-ಮಹಾರಾಣಾ ಪ್ರತಾಪ ಸಿಂಹ ವೃತ್ತ -ಸಂಗೊಳ್ಳಿ ರಾಯಣ್ಣ ವೃತ್ತ -ಲಲಿತಮಹಲ್ ರಸ್ತೆ ಮೂಲಕ ಲಲಿತಮಹಲ್ ಮೈದಾನದ ಖಾಲಿ ಸ್ಥಳದಲ್ಲಿ ವಾಹನಗಳನ್ನು ನಿಲುಗಡೆ ಮಾಡಬೇಕು.

ವಾಹನಗಳನ್ನು ನಿಲುಗಡೆ ಮಾಡಿದ ಸ್ಥಳದಿಂದ ಚಾಮುಂಡಿಬೆಟ್ಟಕ್ಕೆ ಹೋಗಲು ಹಾಗೂ ಮತ್ತೆ ಹಿಂದಿರುಗಲು ನಗರ ಸಾರಿಗೆ ಬಸ್ ಗಳನ್ನು ವ್ಯವಸ್ಥೆ ಮಾಡಲಾಗಿದೆ.

ದೇವಸ್ಥಾನದಲ್ಲಿ ಉಚಿತ ಪ್ರಸಾದ ವಿನಿಯೋಗದ ವಾಹನಗಳಿಗೆ ಈ ಬಾರಿ ಚಾಮುಂಡಿ ಬೆಟ್ಟದಲ್ಲಿ ಬಸ್ ನಿಲ್ದಾಣದ ಎದುರು ಇರುವ ಪಾರ್ಕಿಂಗ್ ಜಾಗದಲ್ಲಿ ವ್ಯವಸ್ಥೆ ಮಾಡಲಾಗಿದೆ ಜತೆಗೆ ಪಾಸ್ ಕಡ್ಡಾಯ ಮಾಡಲಾಗಿದೆ

ಈ ವಾಹನಗಳು ನಿಗಧಿಪಡಿಸಿದ ಸಮಯದಲ್ಲೇ ಪ್ರಸಾದ ವಿನಿಯೋಗ ಮಾಡಬೇಕು,ಇಲ್ಲದಿದ್ದರೆ ಪ್ರವೇಶ ನೀಡಲಾಗುವುದಿಲ್ಲ.

ದೇವಸ್ಥಾನಕ್ಕೆ ಆಗಮಿಸುವ ಶಿಷ್ಟಾಚಾರವಿರುವ ಗಣ್ಯ ಮತ್ತು ಅತಿಗಣ್ಯರ ವಾಹನಗಳಿಗೆ ಚಾಮುಂಡಿ ಬೆಟ್ಟದಲ್ಲಿ ಮಲ್ಟಿಲೆವಲ್ ಪಾರ್ಕಿಂಗ್ ಜಾಗದಲ್ಲಿ ವ್ಯವಸ್ಥೆ ಮಾಡಲಾಗಿದೆ.

ಪ್ರತಿ ಆಷಾಢ ಶುಕ್ರವಾರದ ಹಿಂದಿನ ದಿನ ಅಂದರೆ ಗುರುವಾರ ಹಾಗೂ ಚಾಮುಂಡೇಶ್ವರಿ ವರ್ಧಂತಿ ದಿನದ ಹಿಂದಿನ ದಿನದ ರಾತ್ರಿ 10 ಗಂಟೆಯಿಂದಲೇ ಚಾಮುಂಡಿ ಬೆಟ್ಟಕ್ಕೆ ಎಲ್ಲಾ ಮಾದರಿಯ ವಾಹನಗಳಿಗೆ ಪ್ರವೇಶವನ್ನು ನಿರ್ಬಂಧಿಸಲಾಗಿದೆ.

ಚಾಮುಂಡಿ ಬೆಟ್ಟದಲ್ಲಿರುವ ನಿವಾಸಿಗಳು ತಮ್ಮ ವಾಹನಗಳ ಪ್ರವೇಶಕ್ಕೆ ಅಗತ್ಯ ದಾಖಲಾತಿಗಳಾದ ಡಿ.ಎಲ್, ವಾಹನದ ದಾಖಲಾತಿ, ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿಗಳ ಜೆರಾಕ್ಸ್ ಪ್ರತಿಗಳನ್ನು ತಾವರೆಕಟ್ಟೆ ಪ್ರವೇಶ ದ್ವಾರದ ಬಳಿ ಪೊಲೀಸರಿಗೆ ತೋರಿಸಿ ಪ್ರವೇಶ ಪಡೆಯಬಹುದು.

ಚಾಮುಂಡಿಬೆಟ್ಟಕ್ಕೆ ಕರ್ತವ್ಯದ ನಿಮಿತ್ತ ಆಗಮಿಸುವ ಸರ್ಕಾರಿ ವಾಹನಗಳು ಮತ್ತು ಪೊಲೀಸ್ ವಾಹನಗಳಿಗೆ ಚಾಮುಂಡಿಬೆಟ್ಟದ ಪಾರ್ಕಿಂಗ್-2 ನಲ್ಲಿ ನಿಲುಗಡೆಗೆ ವ್ಯವಸ್ಥೆ ಮಾಡಿದೆ.

ನಗರ ಬಸ್ ನಿಲ್ದಾಣದಿಂದ ಜನರನ್ನು ಕರೆತರುವ ಕೆಎಸ್​ಆರ್​ಟಿಸಿ ರೂಟ್ ಬಸ್ಸುಗಳು ಸಂಗೊಳ್ಳಿ ರಾಯಣ್ಣ ವೃತ್ತ- ಲಲಿತ ಮಹಲ್ ಹೆಲಿಪ್ಯಾಡ್ ವೈ ಜಂಕ್ಷನ್ ಬಳಿ ಬಲ ತಿರುವು ಪಡೆದು ನಂತರ ಲಲಿತಾದ್ರಿಪುರ ರಸ್ತೆಯಲ್ಲಿ ಐವಾಕ್ ರಸ್ತೆ ಮುಖಾಂತರ ಚಾಮುಂಡಿಬೆಟ್ಟಕ್ಕೆ ಹೋಗಬೇಕು.

ಬೆಟ್ಟದ ಪಾದದಿಂದ ಮೆಟ್ಟಿಲು ಮುಖಾಂತರ ದೇವಸ್ಥಾನಕ್ಕೆ ಕಾಲು ನಡಿಗೆಯಲ್ಲಿ ಹೋಗುವ ಭಕ್ತರು ವಾಹನಗಳನ್ನು ಪಿಂಜರಪೋಲ್ ಮುಂಭಾಗದಲ್ಲಿ ಇರುವ ಮೈದಾನದಲ್ಲಿ ಹಾಗೂ ಪೊಲೀಸರು ಸೂಚಿಸುವ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿ ದೇವಸ್ಥಾನಕ್ಕೆ ಹೋಗಬೇಕು.

ದೇವಸ್ಥಾನದಲ್ಲಿ ಪ್ರತ್ಯೇಕ ಹೆಲ್ಪ್ ಡೆಸ್ಕ್, ವಿದ್ಯುತ್ ದೀಪಗಳ ವ್ಯವಸ್ಥೆ, ಭದ್ರತೆಯ ದೃಷ್ಟಿಯಿಂದ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.

ಮತ್ತು ಲಲಿತ ಮಹಲ್ ಮೈದಾನದಲ್ಲಿ ವಾಹನಗಳ ನಿಲುಗಡೆಗೆ ಭದ್ರತಾ ವ್ಯವಸ್ಥೆ, ತಾತ್ಕಾಲಿಕ ಬಸ್ ನಿಲ್ದಾಣ, ಶೌಚಾಲಯ, ವೈದ್ಯಕೀಯ ಸೌಲಭ್ಯ ಹಾಗೂ ವಿದ್ಯುತ್ ದೀಪಗಳ ವ್ಯವಸ್ಥೆ, ಕುಡಿಯುವ ನೀರಿನ ಸೌಲಭ್ಯಗಳನ್ನು ಕಲ್ಪಿಸಲಾಗಿದೆ

ಭಕ್ತರು ಯಾವುದೇ ಭೀತಿ ಇಲ್ಲದೇ ವಾಹನಗಳನ್ನು ನಿಲುಗಡೆಗೊಳಿಸಿ ದೇವರ ದರ್ಶನ ಪಡೆಯಬಹುದು ಎಂದು ನಗರ ಪೊಲೀಸ್ ಆಯುಕ್ತ ರಮೇಶ್ ಬಿ ತಿಳಿಸಿದ್ದಾರೆ.