ಮೈಸೂರು: ಕಬ್ಬು ಮತ್ತು ಭತ್ತ ಸೇರಿದಂತೆ ಎಲ್ಲಾ ಬೆಳೆಗಳಿಗೆ ಎಂ ಎಸ್ ಪಿ ದರ ನಿಗದಿ ಮಾಡಬೇಕು ಎಂದು ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಆಗ್ರಹಿಸಿದರು.
ಮೈಸೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಪಡಿತರ ವ್ಯವಸ್ಥೆಗೆ ರಾಜ್ಯದ ರೈತರು ಬೆಳೆದ ಭತ್ತವನ್ನೇ ಖರೀದಿ ಮಾಡಬೇಕು. ಭತ್ತಕ್ಕೆ ನಿಗದಿತ ಬೆಲೆ ನಿರ್ಧಾರ ಮಾಡಬೇಕು ಎಂದು ಒತ್ತಾಯಿಸಿದರು.
ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ರೈತರಿಗೆ 5 ಲಕ್ಷದವರೆಗೆ 0% ಬಡ್ಡಿಯಲ್ಲಿ ಸಾಲ ಕೊಡುತ್ತೇವೆ ಎಂದು ಹೇಳಿತ್ತು. ಸ್ಕೇಲ್ ಆಫ್ ಫೈನಾನ್ಸ್ ಹೆಚ್ಚಿಸಬೇಕು. ಕೋಆಪರೇಟಿವ್ ಬ್ಯಾಂಕುಗಳ ಮೂಲಕ ಸರ್ಕಾರ ಹೆಚ್ಚು ಹೆಚ್ಚು ಸಾಲ ಕೊಡಬೇಕು.
ಕೃಷಿಯಲ್ಲಿ ತೊಡಗಿಸಿಕೊಂಡ ಯುವ ಕೃಷಿಕರಿಗೆ 10 ಲಕ್ಷದಷ್ಟು ಸಾಲವನ್ನ 0% ನಲ್ಲಿ ಕೊಡಬೇಕು ಎಂದು ಒತ್ತಾಯಿಸಿದರು.
ರೈತರು ಇವತ್ತು ಸಂಕಷ್ಟದಲ್ಲಿದ್ದಾರೆ. ಸಾಲಮುಕ್ತಗೊಳಿಸುವ, ಕೆಲ ರೈತಪರ ಯೋಜನೆಗಳ ಜಾರಿಗೆ ತರುವ ಕೃಷಿ ಪೂರಕ ನೀತಿಗಳ ಜಾರಿಗೆ ಬಜೆಟ್ ನಲ್ಲಿ ಆದ್ಯತೆ ನೀಡಬೇಕು ಜೊತೆಗೆ ಗೋಹತ್ಯೆ ನಿಷೇಧ ಕಾಯಿದೆ ವಾಪಸ್ ಪಡೆಯಬೇಕು ಎಂದು ಹೇಳಿದರು.
ಎಪಿಎಂಸಿ ಕಾಯಿದೆಗೆ ತಿದ್ದುಪಡಿ ಮಾಡಬೇಕು, ಸ್ವಾಮಿನಾಥನ್ ವರದಿ ಜಾರಿ ತರಬೇಕು ಎಂದು ಬಡಗಲಪುರ ನಾಗೇಂದ್ರ ಮುಖ್ಯ ಮಂತ್ರಿಗಳನ್ನು ಒತ್ತಾಯಿಸಿದರು.