ಮೈಸೂರು: ಆಷಾಢ ಮಾಸದ ಮೂರನೇ ಶುಕ್ರವಾರದ ಪ್ರಯುಕ್ತ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ದೇವಾಲಯವನ್ನು ವಿಶೇಷವಾಗಿ ಅಲಂಕರಿಸಲಾಗಿದೆ.
ಶುಕ್ರವಾರ ಮುಂಜಾನೆ 3 ಗಂಟೆಯಿಂದಲೆ ಭಕ್ತ ಸಾಗರ ಬೆಟ್ಟಕ್ಕೆ ಹರಿದು ಬಂದಿದೆ.
ಬೆಳಗ್ಗೆ 5.30 ರಿಂದ ರಾತ್ರಿ 12 ಗಂಟೆಯ ವರೆಗೆ ದೇವಿಯ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.
ಶುಕ್ರವಾರ ಮುಂಜಾನೆ 3.30ಕ್ಕೆ ದೇವಸ್ಥಾನದಲ್ಲಿ ಆಷಾಢ ಮಾಸದ ವಿಶೇಷ ಪೂಜೆ ಆರಂಭಿಸಲಾಯಿತು.
ಮಹಾನ್ಯಾಸಕ ಪೂರ್ವಕ ರುದ್ರಾಭಿಷೇಕ, ಪಂಚಾಮೃತ ಅಭಿಷೇಕ ನೆರವೇರಿಸಿ, ವಿಶೇಷ ಸಿಂಹವಾಹಿನಿ ಅಲಂಕಾರವನ್ನು ಚಾಮುಂಡೇಶ್ವರಿ ದೇವಿಗೆ ಪ್ರಧಾನ ಅರ್ಚಕ ಡಾ.ಶಶಿಶೇಖರ್ ದೀಕ್ಷಿತ್ ನೇತೃತ್ವದ ಅರ್ಚಕರ ತಂಡ ನೆರವೇರಿಸಿದರು.
ಅಲ್ಲದೇ ಭಕ್ತರು ವಿವಿಧ ಸೇವೆಗಳನ್ನು ಹಾಗೂ ಪೂಜೆಗಳನ್ನು ನೆರವೇರಿಸುತ್ತಿದ್ದಾರೆ.
ದೇವಸ್ಥಾನದ ಮುಂಭಾಗ ಬಗೆಬಗೆಯ ಹೂವುಗಳಿಂದ ಅಲಂಕಾರ ಮಾಡಲಾಗಿದೆ.
ಬೇರೆ ಬೇರೆ ಕಡೆಯಿಂದ ಬರುವ ಭಕ್ತರಿಗಾಗಿ ಉಚಿತವಾಗಿ 50 ಕೆಎಸ್‍ಆರ್‍ಟಿಸಿ ಬಸ್‍ಗಳನ್ನು ಜಿಲ್ಲಾಡಳಿತ ವ್ಯವಸ್ಥೆ ಮಾಡಿದೆ.
ಟ್ರಾಫಿಕ್ ಜಾಮ್ ಉಂಟಾಗದಂತೆ ಖಾಸಗಿ ವಾಹನಗಳ ಪ್ರವೇಶವನ್ನು ನಿಷೇಧಿಸಿ ಅವುಗಳಿಗೆ ಲಲಿತ ಮಹಲ್ ಹೆಲಿಪ್ಯಾಡ್‍ನಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ.
ವಿಶೇಷ ದರ್ಶನಕ್ಕೆ 50 ರೂ. 300 ರೂ. ವಿಶೇಷ ಪಾಸ್ ವ್ಯವಸ್ಥೆ ಮಾಡಲಾಗಿದೆ. ಭದ್ರತಾ ದೃಷ್ಟಿಯಿಂದ 46 ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.
ಆದಷ್ಟು ಪ್ಲಾಸ್ಟಿಕ್ ವಸ್ತುಗಳನ್ನು ಮಾರಾಟ ಬಳಸದೆ ಆಷಾಢ ಆಚರಿಸುವ ಪಣ ತೊಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಕೆ.ವಿ ರಾಜೇಂದ್ರ ಈ ವೇಳೆ ಮಾಧ್ಯಮದವರಿಗೆ ತಿಳಿಸಿದರು.
65 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ 50 ರೂ. ದ್ವಾರದ ಮೂಲಕ ಉಚಿತವಾಗಿ ದೇವಿ ದರ್ಶನ ಪಡೆಯುವ ವ್ಯವಸ್ಥೆ ಮಾಡಲಾಗಿದೆ.
ಅನ್ನಸಂತರ್ಪಣೆ ಮಾಡುವ ದಾನಿಗಳಿಗೆ ಮಲ್ಟಿಲೆವಲ್ ವಾಹನ ಪಾರ್ಕಿಂಗ್ ಸ್ಥಳ ಹಾಗೂ ಮಹಿಷಾಸುರ ಪ್ರತಿಮೆ ಎದುರಿನ ಖಾಲಿ ಜಾಗದಲ್ಲಿ ವ್ಯವಸ್ಥೆ ಮಾಡಲಾಗಿದೆ.