ಮೈಸೂರು: ದಾನ ಮಾಡುವ ಪ್ರವೃತ್ತಿಯನ್ನು ಎಲ್ಲರೂ ಬೆಳೆಸಿಕೊಳ್ಳಬೇಕು,ಪ್ರತಿಫಲಾಪೇಕ್ಷೆ ಇಲ್ಲದ ದಾನವೇ ಶ್ರೇಷ್ಠ ಎಂದು ದೇವರಾಜ ಸಂಚಾರಿ ಠಾಣೆಯ ವೃತ್ತ ನಿರೀಕ್ಷಕರಾದ ಮುನಿಯಪ್ಪ ಹೇಳಿದರು
ಮೈಸೂರಿನ ಚಾಮುಂಡಿಪುರಂನಲ್ಲಿರುವ ಬಾಲ ಬೋಧಿನಿ ಶಾಲೆಯಲ್ಲಿ ಚಾಮುಂಡೇಶ್ವರಿ ವಿದ್ಯುತ್ ನಿಗಮದ ಅಧಿಕಾರಿಗಳ ವರ್ಗ ಹಾಗೂ ನೌಕರರ ಸಂಘ ಮತ್ತು ಚಾಮುಂಡೇಶ್ವರಿ ಕಾರು ಮಾಲೀಕರ ಮತ್ತು ಚಾಲಕರ ಸಂಘ ಹಾಗೂ ರವಿ ಸ್ನೇಹ ಬಳಗದ ವತಿಯಿಂದ 40 ಶಾಲಾ ಮಕ್ಕಳಿಗೆ ಪುಸ್ತಕ ಹಾಗೂ ಸಮವಸ್ತ್ರ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವಿದ್ಯಾರ್ಥಿ ಜೀವನದಲ್ಲಿ ಪಡೆದ ಸಹಾಯವನ್ನು ಮುಂದೆ ಸ್ಥಿತಿವಂತರಾದಾಗ ಸಮಾಜಕ್ಕೆ ವಾಪಸ್ ನೀಡುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಮಕ್ಕಳಿಗೆ ಕಿವಿಮಾತು ಹೇಳಿದರು.
ನಂತರ ಸಂಚಾರಿ ನಿಯಮದ ಬಗ್ಗೆ ಮಕ್ಕಳಿಗೆ ಜಾಗೃತಿ ಮೂಡಿಸಿದರು.
ನಗರದ ಸರ್ಕಾರಿ ಶಾಲೆಗಳಿಗೆ ಬೇಕಾದಂತ ವಸ್ತುಗಳನ್ನು ನೀಡಿರುವ ಈ ಸಂಘಟನೆಗಳ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದು ಮುನಿಯಪ್ಪ ಮೆಚ್ಚುಗೆ ವ್ಯಕ್ತಪಡಿಸಿದರು.
ಕೆ ಆರ್ ಬ್ಯಾಂಕ್ ಉಪಾಧ್ಯಕ್ಷ ಬಸವರಾಜ್ ಬಸಪ್ಪ ಮಾತನಾಡಿ,ಸರ್ಕಾರಿ ಸೌಲಭ್ಯ ಸದುಪಯೋಗವಾಗಲಿ ಸರ್ಕಾರ ಬಡ ವಿದ್ಯಾರ್ಥಿಗಳಿಗೆ ನೀಡಿರುವ ಆರ್‌ಟಿಐ ಸೌಲಭ್ಯ ಸದುಪಯೋಗ ಪಡೆದುಕೊಂಡು ಹೆತ್ತವರ ಕೀರ್ತಿ ತರುವಂತಹ ಮಕ್ಕಳಾಗಬೇಕು ಎಂದು ಸಲಹೆ ನೀಡಿದರು.
ಶಾಲೆಯಲ್ಲಿ ಪ್ರತಿವರ್ಷ ಆರ್‌ಟಿಐ ಅಡಿಯಲ್ಲಿ ಆಯ್ಕೆಯಾದ ಮಕ್ಕಳಿಗೆ ಉಚಿತ ಪಠ್ಯ ಪುಸ್ತಕ ನೀಡುವುದು ಸಂತೋಷ ತಂದಿದೆ, ಸರ್ಕಾರ ಸರ್ಕಾರಿ ಶಾಲೆಗಳಿಗೆ ಹೆಚ್ಚು ಅನುದಾನವನ್ನು ಬಜೆಟ್ ನಲ್ಲಿ ನೀಡಿರುವುದು ಸಂತೋಷ ಉಂಟು ಮಾಡಿದೆ ಎಂದು ಹೇಳಿದರು
ಕಾರ್ಯಕ್ರಮದಲ್ಲಿ ಸಾಮಾಜಿಕ ಹೋರಾಟಗಾರ ವಿಕ್ರಂ ಅಯ್ಯಂಗಾರ್, ಸಂಘದ ಪದಾಧಿಕಾರಿಗಳಾದ ರವಿ, ಸುಬ್ರಮಣ್ಯ, ದೀಪಕ್, ಶಾಲೆಯ ಮುಖ್ಯ ಶಿಕ್ಷಕರಾದ ಜಯಂತಿ, ಶಿಕ್ಷಕರುಗಳಾದ ಲೀಲಾವತಿ, ಜತ್ತಿ, ಎಂ. ಡಿ ಶ್ರೀನಿವಾಸ್ ಮತ್ತಿತರರು ಹಾಜರಿದ್ದರು.