ಚಾಮುಂಡೇಶ್ವರಿ ತಾಯಿಗೆ ಜನುಮದಿನದ ಸಂಭ್ರಮ:ಹರಿದು ಬಂದ ಭಕ್ತ ಸಾಗರ

ಮೈಸೂರು: ನಾಡಿನ ಅದಿದೇವತೆ ಚಾಮುಂಡಿ ಬೆಟ್ಟದಲ್ಲಿ ನೆಲೆಸಿರುವ ಚಾಮುಂಡೇಶ್ವರಿ ತಾಯಿಗೆ ಜನುಮದಿನದ ಸಂಭ್ರಮ.

ಶ್ರೀ ಚಾಮುಂಡೇಶ್ವರಿ ವರ್ಧಂತಿ ಮಹೋತ್ಸವದ ಪ್ರಯುಕ್ತ ಚಾಮುಂಡಿ ಬೆಟ್ಟದಲ್ಲಿ ಭಕ್ತರ ಸಡಗರ, ಸಂಭ್ರಮ ಮನೆ ಮಾಡಿದೆ.

ಬೆಳಗಿನ‌ ಜಾವದಿಂದಲೇ‌ ರಾಜ್ಯಾದ್ಯಂತ ಭಕ್ತರು ಬೆಟ್ಟಕ್ಕೆ ತಂಡೋಪತಂಡವಾಗಿ ಆಗಮಿಸಿ ತಾಯಿ ಚಾಮುಂಡೇಶ್ವರಿ ದರ್ಶನ ಪಡೆಯುತ್ತಿದ್ದಾರೆ.

ಚಾಮುಂಡೇಶ್ವರಿ ದೇವಿಗೆ ವಿಶೇಷ ಪೂಜಾ ಕಾರ್ಯಗಳು ನೆರವೇರಿದ್ದು, ಸಾರ್ವಜನಿಕರಿಗೆ ಬೆಳಗ್ಗೆ 9 ಗಂಟೆ ಬಳಿಕ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದ್ದು,ಅತಿ ಹೆಚ್ಚು ಭಕ್ತರು ಆಗಮಿಸುತ್ತಿದ್ದಾರೆ.

ಬೆಳಗ್ಗೆ 10 ಗಂಟೆಗೆ ಬಳಿಕ ಪಲ್ಲಕ್ಕಿ ಉತ್ಸವ ಜರುಗಿತು.ಚಿನ್ನದ ಪಲ್ಲಕ್ಕಿಗೆ ಹೂವಿನ  ಅಲಂಕಾರ ಮಾಡಲಾಗಿತ್ತು.

ಚಾಮುಂಡಿ ಬೆಟ್ಟಕ್ಕೆ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಮತ್ತು ಪತ್ನಿ ತೃಷಿಕಾಕುಮಾರಿ ಆಗಮಿಸಿ ಪಲ್ಲಕ್ಕಿ ಉತ್ಸವಕ್ಕೆ ಪೂಜೆ ಸಲ್ಲಿಸಿದರು.

ಬೆಳಗ್ಗೆ 9 ಗಂಟೆ ನಂತರ ಸರ್ಕಾರಿ ಬಸ್ ಗಳ ಮೂಲಕ ಬೆಟ್ಟಕ್ಕೆ ಬರಲು ಅವಕಾಶ ಕಲ್ಪಿಸಲಾಗಿದ್ದು, ಖಾಸಗಿ ವಾಹನಗಳಿಗೆ ಸಂಪೂರ್ಣ ನಿರ್ಬಂಧ ವಿಧಿಸಲಾಗಿದೆ.

ಈ ವೇಳೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಪ್ರಧಾನ ಅರ್ಚಕ ಶಶಿ ಶೇಖರ್ ದೀಕ್ಷಿತ್ ಮಾತನಾಡಿ ಅಮ್ಮನವರ ವರ್ದಂತಿ ಉತ್ಸವ  ಬಹಳ ವಿಶೇಷ ಎಂದು ತಿಳಿಸಿದರು.

ಪುರಾಣ ಪ್ರಸಿದ್ಧ ದೇವಾಲಯದಲ್ಲಿ ವರ್ದಂತಿ ಉತ್ಸವ ನಡೆಯುವುದೂ ಒಂದು ವಿಶೇಷ. ಸಂಸ್ಕೃತದಲ್ಲಿ ವರ್ದಂತಿ ಎನ್ನುತ್ತಾರೆ. ಕನ್ನಡದಲ್ಲಿ ಹುಟ್ಟುಹಬ್ಬ ಎನ್ನುತಾರೆ.

ಅಮ್ಮನವರ ಹುಟ್ಟುಹಬ್ಬದ ದಿನದಂದು ದೇವಸ್ಥಾನದಲ್ಲಿ ವಿಶೇಷ ಪೂಜಾ ಕಾರ್ಯಗಳು ನೆರವೇರಿಸಿದ್ದೇವೆ ಎಂದು ಹೇಳಿದರು.

ಬೆಳಗಿನ ಜಾವ 4.30 ರಿಂದ ಅಭ್ಯುಂಜನ ಸ್ನಾನ, ಪಂಚಾಮೃತ ಅಭಿಷೇಕ ಮಾಡಿ 9.30 ಕ್ಕೆ ಮಹಾ ಮಂಗಳಾರತಿ ಮಾಡಲಾಯಿತು. 10.30 ಕ್ಕೆ ರಾಜವಂಶಸ್ಥರು ಚಿನ್ನದ ಪಲ್ಲಕ್ಕಿಗೆ ಚಾಲನೆ ಕೊಟ್ಟಿದ್ದಾರೆ.ಇದು ಹಿಂದಿನಿಂದ ನಡೆದುಕೊಂಡು ಬಂದಿದೆ, ಹೀಗೆಯೇ ಮುಂದುವರಿಯಲಿದೆ ಎಂದು ಶಶಿಶೇಖರ್ ದೀಕ್ಷಿತ್ ತಿಳಿಸಿದರು.