ಅಧಿವೇಶನದಲ್ಲಿ ಮೈಸೂರು ಅಭಿವೃದ್ದಿ ಬಗ್ಗೆ  ಶ್ರೀವತ್ಸ ಪ್ರಸ್ತಾಪ

ಬೆಂಗಳೂರು: ವಿಧಾನಸಭೆ ಕಲಾಪದಲ್ಲಿ ಮೈಸೂರಿನ ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಶಾಸಕ ಟಿ. ಎಸ್. ಶ್ರೀವತ್ಸ ಅವರು ಮೈಸೂರು ಅಭಿವೃದ್ಧಿ ಬಗ್ಗೆ‌ ಪ್ರಸ್ತಾಪ ಮಾಡಿ ಎಲ್ಲರ ಗಮನ ಸೆಳೆದಿದ್ದಾರೆ.

ಮೈಸೂರು ಮಹಾನಗರ ಹಾಗೂ ಮೈಸೂರು ಜಿಲ್ಲೆಯ ಸಮಗ್ರ ಅಭಿವೃದ್ಧಿಯ ಬಗ್ಗೆ ಸಿದ್ದರಾಮಯ್ಯನವರ ಬಜೆಟ್ ನಲ್ಲಿ ಘೋಷಣೆ ಆಗಿರುವ ಕೆಲವು ಯೋಜನೆಗಳು ಮತ್ತು ಬೊಮ್ಮಾಯಿ ಅವರ ಬಜೆಟ್ ನ ಕೆಲವು ಯೋಜನೆಗಳಿಗೆ ಸಮರ್ಪಕವಾಗಿ ಅನುದಾನ ವಿತರಿಸಿ ಶೀಘ್ರ ಕೆಲಸ ಪ್ರಾರಂಭಿಸುವ ಬಗ್ಗೆ ಸದನದಲ್ಲಿ ವಿಚಾರ ಮಂಡಿಸಿದರು.

ಮೈಸೂರು ಜಿಲ್ಲೆಯವರು ಹಾಗೂ ಹಿಂದುಳಿದ ವರ್ಗದ ಎರಡನೇ ನಾಯಕರಾದ ಸಿದ್ದರಾಮಯ್ಯನವರು ತಮ್ಮ ತವರು ಜಿಲ್ಲೆಗೆ ಕೊಟ್ಟಿರುವ ಬಜೆಟ್ ನಲ್ಲಿ ಹೆಚ್ಚಿನ ಹಣ ಮೀಸಲಿಡಬೇಕೆಂದು ಮನವಿ ಮಾಡಿದರು.

ದೊಡ್ಡ ಆಸ್ಪತ್ರೆ ಖ್ಯಾತಿಯ ಕೃಷ್ಣರಾಜ ಆಸ್ಪತ್ರೆಗೆ ಮುಂದಿನ ವರ್ಷ 100 ವರ್ಷಗಳು ತುಂಬುತ್ತಿದೆ, ಈ ಕಟ್ಟಡಕ್ಕೆ ಹೆಚ್ಚಿನ ಅನುದಾನ ನೀಡುವ ಮೂಲಕ ರಾಜ್ಯದಲ್ಲೇ ಮಾದರಿ ಆಸ್ಪತ್ರೆಯಾಗಿ ಮಾಡಬೇಕೆಂದು ತಿಳಿಸಿದರು.

ವರುಣಾ ವಿಧಾನಸಭಾ ಕ್ಷೇತ್ರದಲ್ಲಿ ಚಿತ್ರನಗರಿ ಸ್ಥಾಪಿಸಲು ಅನುಮೋದನೆಯಾಗಿದ್ದು ಇದರ ಕಾರ್ಯ ಚಟುವಟಿಕೆಗಳು ಬೇಗ ಪ್ರಾರಂಭವಾಗಲಿ, ಇದಕ್ಕೂ ಕೂಡ ಹೆಚ್ಚಿನ ಅನುದಾನ ನೀಡಿ ಮೈಸೂರು ಜಿಲ್ಲೆಯನ್ನು ಇನ್ನೂ ಹೆಚ್ಚಿನ ಪ್ರವಾಸೋದ್ಯಮ ಕ್ಷೇತ್ರ ಮಾಡಬೇಕೆಂದು ಶ್ರೀವತ್ಸ ಕೋರಿದರು.

ಮೈಸೂರಿನ ಪಾರಂಪರಿಕ‌ ಕಟ್ಟಡಗಳಾದ ಲ್ಯಾನ್ಸ ಡೌನ್, ದೇವರಾಜ ಮಾರುಕಟ್ಟೆ, ವಾಣಿವಿಲಾಸ ಮಾರುಕಟ್ಟೆ,ಎಂ.ಜಿ.ರಸ್ತೆ ಯ ಮಾರುಕಟ್ಟೆ ಬಗ್ಗೆ ಸರ್ಕಾರದ ಗಮನಕ್ಕೆ ತರಲಾಯಿತು.

ಚಾಮುಂಡಿ ಅಭಿವೃದ್ಧಿ ಪ್ರಾಧಿಕಾರ ಮಾಡಿರುವುದು ಹೆಮ್ಮೆಯ ಸಂಗತಿ ಆದರೆ ರಾಜ್ಯದ ಜನರ ಆಶಯವಾದ ದಸರಾ ಪ್ರಾಧಿಕಾರ ರಚನೆ ಮಾಡುವ ಬಗ್ಗೆ ಬಜೆಟ್ ನಲ್ಲಿ ಪ್ರಸ್ತಾವನೆ ಇಲ್ಲದಿರುವುದು ನನಗೆ ಬೇಸರ ತಂದಿದೆ ಎಂದು ಶಾಸಕರು ತಿಳಿಸಿದರು

ಸರ್ಕಾರ ಮುಂದಿನ ಮುಂಗಡ ಬಜೆಟ್ ನಲ್ಲಿ ಮೈಸೂರು ಜೆಲ್ಲೆಗೆ ಸರ್ಕಾರಿ ಇಂಜಿನಿಯರಿಂಗ್ ಕಾಲೇಜನ್ನು ಘೋಷಣೆ ಮಾಡಬೇಕೇಂದು ಶ್ರೀವತ್ಸ ಕೋರಿದ್ದಾರೆ.