2024ರ ಅಂತ್ಯಕ್ಕೆ ಮೈಸೂರು-ಕುಶಾಲನಗರ ಹೆದ್ದಾರಿ ಕಾಮಗಾರಿ ಪೂರ್ಣ -ಪ್ರತಾಪ್ ಸಿಂಹ

ಮೈಸೂರು: ಮೈಸೂರು-ಕುಶಾಲನಗರ ನಡುವೆ 4,130 ಕೋಟಿ ವೆಚ್ಚದಲ್ಲಿ 93 ಕಿಲೋ ಮೀಟರ್ NH-275 ಹೆದ್ದಾರಿ ಕಾಮಗಾರಿಯನ್ನು ಕೈಗೊಂಡಿದ್ದು ಪೂರ್ಣಕಾಮಗಾರಿಯು 2024ರ ಡಿಸೆಂಬರ್‌  ಅಂತ್ಯಕ್ಕೆ ಮುಗಿಯಲಿದೆ ಎಂದು ಸಂಸದರಾದ ಪ್ರತಾಪ್ ಸಿಂಹ  ತಿಳಿಸಿದರು.

ಮೈಸೂರಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಮೈಸೂರು-ಕುಶಾಲನಗರ NH-275 ಯೋಜನೆಗೆ ಸಂಬoಧಿಸಿದ ಸಭೆಯಲ್ಲಿ ಮಾತನಾಡಿದರು.

ಹೆದ್ದಾರಿ ಕಾಮಗಾರಿಯನ್ನು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ ಕೈಗೆತ್ತಿಕೊಂಡಿದೆ, ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯನ್ನು ವಿವಿಧ ರೀತಿಯ ಪ್ಯಾಕೇಜ್‌ಗಳಾಗಿ ವಿಂಗಡಿಸಲಾಗಿದೆ.

ಶ್ರೀರಂಗಪಟ್ಟಣದ ಪಾಲಹಳ್ಳಿಯ ಪಿ.ಅಗ್ರಹಾರದಿಂದ ಹುಣಸೂರಿನವೆರಗೆ ಪ್ಯಾಕೇಜ್-4 ಮತ್ತು 5, ಹುಣಸೂರಿನಿಂದ- ಪಿರಿಯಾಪಟ್ಟಣದವರೆಗೆ ಪ್ಯಾಕೇಜ್-3, ಪಿರಿಯಾಪಟ್ಟಣದಿಂದ ಕುಶಾಲನಗರದವರೆಗೆ ಪ್ಯಾಕೇಜ್- 2 ಎಂದು ವಿಭಾಗಿಸಿ ಕಾಮಗಾರಿಯನ್ನು ಕೈಗೊಳ್ಳಲಾಗುವುದು ಎಂದು ಹೇಳಿದರು.

ಕಾವೇರಿ ನೀರಾವರಿ ನಿಗಮ, ರೈಲ್ವೆ ಮತ್ತು ಚೆಸ್ಕಾಂ ಅಧಿಕಾರಿಗಳಿಗೆ ಹೆದ್ದಾರಿಯ ಬ್ಲೂಪ್ರಿಂಟ್ ನೀಡಿ ಜುಲೈ 30 ರೊಳಗೆ ಅನುಮತಿ ಪಡೆದು ಕಾಮಗಾರಿಯನ್ನು ಪ್ರಾರಂಭಿಸಲಾಗುವುದು ಎಂದು ತಿಳಿಸಿದರು.

ಹೆದ್ದಾರಿ ನಿರ್ಮಾಣಕ್ಕೆ ಸಂಬoಧಿಸಿದoತೆ ಹುಣಸೂರು ಪಿರಿಯಾಪಟ್ಟಣ ಮತ್ತು ಕುಶಾಲನಗರ ತಾಲೂಕಿನ ತಹಸಿಲ್ದಾರ್‌ಗಳಿಗೆ ನಿರ್ದೇಶನ ನೀಡಲಾಗಿದೆ.

ಹೆದ್ದಾರಿ ನಿರ್ಮಾಣವಾಗುವ ಜಮೀನು ದುರಸ್ಥಿ ಮಾಡುವುದರಿಂದ ಪ್ರಸ್ತುತ ಬೆಳೆದಿರುವ ಬೆಳೆಗಳಿಗೆ ಪರಿಹಾರ ನೀಡಲಾಗಿದ್ದು ಮತ್ತೊಂದು ಅವಧಿಯ ಬೆಳೆಗಳಿಗೆ ಯಾವುದೇ ರೀತಿ ಪರಿಹಾರ ದೊರೆಯುವುದಿಲ್ಲ ಎಂದು ಮುಂಚಿತವಾಗಿ ತಿಳಿಸಲಾಗಿದೆ.

ಒಟ್ಟು 1200 ಎಕರೆ ಭೂಮಿಯನ್ನು ಹೆದ್ದಾರಿ ನಿರ್ಮಾಣಕ್ಕೆ ರೈತರಿಂದ ಪಡೆಯಲಾಗಿದ್ದು ಅವರಿಗೆ ಪರಿಹಾರವನ್ನು ಈ ತಿಂಗಳ 30 ರೊಳಗೆ ನೀಡಲಾಗುವುದು ಎಂದು ತಿಳಿಸಿದರು.

ಕಾಮಗಾರಿಯನ್ನು ಸವಾಲಾಗಿ ಸ್ಪೀಕರಿಸಿ 12 ರಿಂದ 14 ತಿಂಗಳ ಅವಧಿಯಲ್ಲಿ ಹೆದ್ದಾರಿ ಕಾಮಗಾರಿ ಪೂರ್ಣಗೊಳಿಸಿ 2024 ಡಿಸೆಂಬರ್‌ಗೆ ಮೈಸೂರು ಕುಶಾಲನಗರ ಹೆದ್ದಾರಿ ಲೋಕಾರ್ಪಣೆ ಗುರಿಯನ್ನು ಹೊಂದಿದ್ದೇವೆ.

ಮೈಸೂರು ಹೊರವರ್ತುಲ ರಸ್ತೆ ಅಭಿವೃದ್ಧಿಗೆ 10 ಕೋಟಿ ಬಿಡುಗಡೆಯಾಗಿದ್ದು ಬ್ಲೂ ಪ್ರಿಂಟ್ ನಿರ್ಮಾಣವಾಗುತ್ತಿದೆ.

ಅರಮನೆ ನಗರಿ ಮೈಸೂರನ್ನು ಸುರಕ್ಷವಾಗಿ ಕಾಯ್ದುಕೊಳುವುದು, ನಗರದಲ್ಲಿ ಹೆಚ್ಚಿನ ವಾಹನ ದಟ್ಟಣೆಯಾಗದಂತೆ ನೋಡಿಕೊಳ್ಳುವುದು ನಮ್ಮ ನಿಲುವಾಗಿದೆ ಎಂದು ಪ್ರತಾಪ್ ಸಿಂಹ ತಿಳಿಸಿದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ, ಹೆದ್ದಾರಿ ಪ್ರಾಧಿಕಾರ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳಿದ್ದರು.