ಬೃಹತ್ ಉಚಿತ ಆಯುರ್ವೇದ ತಪಾಸಣಾ ಶಿಬಿರ

ಮೈಸೂರು: ಉಡುಪಿ ಪೇಜಾವರ ಮಠದ ಶ್ರೀ ವಿಶ್ವ ಪ್ರಸನ್ನ ತೀರ್ಥ ಶ್ರೀಪಾದಂಗಳವರ 36ನೇ ಚಾತುರ್ಮಾಸ್ಯ ವ್ರತದ ಭಾಗವಾಗಿ ಭಾನುವಾರ ಮೈಸೂರಿನ ಶ್ರೀಕೃಷ್ಣ ಧಾಮದಲ್ಲಿ ಬೃಹತ್ ಉಚಿತ ಆಯುರ್ವೇದ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಯಿತು.

ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಉಡುಪಿ ಪೆಜಾವರ ಮಠಾಧಿಶರಾದ ವಿಶ್ವ ಪ್ರಸನ್ನ ತೀರ್ಥ ಶ್ರೀ ಪಾದಂಗಳು ಮತ್ತು ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ಚಂದ್ರವನ ಆಶ್ರಮದ ಶ್ರೀ ತ್ರಿನೇತ್ರ ಮಹಂತ ಶಿವಯೋಗಿ ಸ್ವಾಮೀಜಿ ವಹಿಸಿದ್ದರು.

ಆಯುರ್ವೇದ ತಪಾಸಣಾ ಶಿಬಿರ ಉದ್ಘಾಟನೆ ವೇಳಡ ಆಶೀರ್ವಚನ ನೀಡಿದ ಶ್ರೀ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿಯವರು ಶ್ರೀ ಕೃಷ್ಣದಾಮದ ಸದಸ್ಯರು ಈ ಆರೋಗ್ಯ ಶಿಬಿರಕ್ಕೆ ಎಲ್ಲಾ ವ್ಯವಸ್ಥೆ ಮಾಡಿರುವುದು ಸಂತಸ ತಂದಿದೆ ಇದರ ಉಪಯೋಗವನ್ನು ಮೈಸೂರಿನ ಜನತೆ ಸದುಪಯೋಗಪಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಶ್ರೀ ತ್ರಿನೇತ್ರ ಮಹಂತ ಶಿವಯೋಗಿ ಸ್ವಾಮೀಜಿ ಆಶೀರ್ವಚನ ನೀಡಿ ಮಾತನಾಡಿ ಇಂಗ್ಲಿಷ್ ಔಷಧಿ ಇತ್ತೀಚಿನ ಅಂದರೆ ಸುಮಾರು 90 100 ವರ್ಷಗಳಿಂದ ಬಳಕೆಯಾಗುತ್ತಿದೆ ಆದರೆ ನಮ್ಮ ನಾಡಿನ ಯೋಗ, ಆಯುರ್ವೇದ ಪದ್ಧತಿಗಳು ಸಾವಿರಾರು ವರ್ಷಗಳ ಇತಿಹಾಸವನ್ನು ಹೊಂದಿದೆ ಎಂದು ತಿಳಿಸಿದರು.

ನಮ್ಮ ದೇಶ ತಪೋವನ ಇದ್ದಂತೆ ಇದಕ್ಕೆ ಇಲ್ಲಿ ಅನೇಕ ಯತಿಗಳು ಸಾಧು ಸಂತರು ಜನಿಸಿ ನಡೆದಾಡಿರುವ ತಪೋಭೂಮಿಯಾಗಿದೆ ಇಲ್ಲಿ ಜನಿಸಿದ ನಾವೆಲ್ಲರೂ ಪುಣ್ಯವಂತರು ಎಂದು ತಿಳಿಸಿದರು.

ಮೊದಲು ಚಿಂತೆಯನ್ನು ಬಿಡಬೇಕು ಚಿಂತೆಯಿಂದಲೇ ಹಲವು ರೋಗಗಳು ನಮ್ಮನ್ನು ಕಾಡುತ್ತದೆ ಹಾಗಾಗಿ ಚಿಂತೆಯನ್ನು ಬಿಡಬೇಕು ನಮ್ಮ ಪೂರ್ವಜರು ಕಲಿಸಿಕೊಟ್ಟಿರುವ ಯೋಗ, ಧ್ಯಾನ ಮತ್ತು ಆಯುರ್ವೇದ ಪದ್ಧತಿಯನ್ನು ಬಳಸಿಕೊಂಡು ಎಲ್ಲರೂ ಸಮಾಧಾನ ಚಿತ್ತದಿಂದ ಆರೋಗ್ಯವಂತರಾಗಬೇಕು ಎಂದು ಹೇಳಿದರು.

ವಿದೇಶಗಳಲ್ಲಿ ನಮ್ಮ ಯೋಗಪದ್ದತಿ ಕಲಿತು ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ.ನಮ್ಮ ಯೋಗಪದ್ದತಿ ಹಾಗೂ ಆಯುರ್ವೇದ ಪದದತಿಯನ್ನು ನಮ್ಮವರೆಲ್ಲ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಮುಂದಿನ ತಿಂಗಳು 6ನೇ ತಾರೀಕು ನಮ್ಮ ಬೇಬಿ ಗ್ರಾಮದಲ್ಲಿ ಇದೇ ಅಯುರ್ವೇದ ಟೀಮ್ ಉಚಿತ ಆಯುರ್ವೇದ ತಪಾಸಣೆ ಶಿಬಿರವನ್ನು ಹಮ್ಮಿಕೊಂಡಿದ್ದೇವೆ ಎಂದು ಶ್ರೀಗಳು ತಿಳಿಸಿದರು.

ಶಾಸಕ ಶ್ರೀವತ್ಸ, ಮೈಸೂರು ಮಹಾನಗರ ಪಾಲಿಕೆ ಮೇಯರ್ ಶಿವಕುಮಾರ್, ಖ್ಯಾತ ವೈದ್ಯರಾದ ರೂಪಾ ಪ್ರಕಾಶ್, ಪ್ರಕಾಶ್, ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆಯ ಪ್ರಧಾನ ಕಾರ್ಯದರ್ಶಿ ವಿಕ್ರಮ ಅಯ್ಯಂಗಾರ್ ಮತ್ತಿತರ ಗಣ್ಯರು ಪಾಲ್ಗೊಂಡಿದ್ದರು.