ಮೈಸೂರು: ಪ್ರವಾಸಿಗರಿಗೆ ಪ್ರೇಕ್ಷಣೀಯ ಸ್ಥಳಗಳಲ್ಲಿ ತೊಂದರೆ, ಅವಘಡಗಳು ಸಂಭವಿಸಿದರೆ ನೆರವಿಗಾಗಿ ಟೂರಿಸ್ಟ್ ಪೊಲೀಸ್ ವ್ಯವಸ್ಥೆ ಜಾರಿ ತರುವ ಕುರಿತು ಚಿಂತನೆ ನಡೆಸಿದ್ದೇವೆ ಎಂದು ಪ್ರವಾಸೋದ್ಯಮ ಸಚಿವ ಹೆಚ್. ಕೆ ಪಾಟೀಲ್ ತಿಳಿಸಿದರು.
ಅರಮನೆ ಕಚೇರಿಯಲ್ಲಿ ಏರ್ಪಡಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರವಾಸಿಗರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಪೊಲೀಸ್ ವ್ಯವಸ್ಥೆಯೊಂದಿಗೆ ಕ್ಯೂಆರ್ ಕೋಡ್ ಬಳಸಿಕೊಂಡು ಹಲವು ಸ್ಥಳಗಳನ್ನು ವೀಕ್ಷಿಸುವ ವ್ಯವಸ್ಥೆಗೂ ಚಾಲನೆ ನೀಡಲು ಉದ್ದೇಶಿಸಲಾಗಿದೆ ಎಂದು ಹೇಳಿದರು.
ಇದರಿಂದ ಟಿಕೆಟ್ ಕೌಂಟರ್ ಬಳಿ ಗಂಟೆಗಟ್ಟಲೆ ನಿಲ್ಲುವ ಹಾಗೂ ಪ್ರತಿ ಸ್ಥಳದಲ್ಲೂ ಮತ್ತೆ ಮತ್ತೆ ಟಿಕೆಟ್ ತೆಗೆದುಕೊಳ್ಳುವ ಕಷ್ಟ ತಪ್ಪುತ್ತದೆ ಅಲ್ಲದೆ ಪಾರ್ಕಿಂಗ್ ವ್ಯವಸ್ಥೆಗೂ ಅನುಕೂಲವಾಗಲಿದೆ ಎಂದು ತಿಳಿಸಿದರು
ಕರ್ನಾಟಕದ ಪರಂಪರೆಯನ್ನು ವಿಶ್ವವಿಖ್ಯಾತಿಗೊಳಿಸಿರುವ ಮೈಸೂರು ನಮ್ಮ ಸಂಸ್ಕೃತಿಯ ಪ್ರತೀಕ.
ಬೆಳಿಗ್ಗೆ ಚಾಮುಂಡೇಶ್ವರಿ ಬೆಟ್ಟಕ್ಕೆ ಭೇಟಿ ನೀಡಿದ್ದು, ಚಾಮುಂಡಿ ಬೆಟ್ಟದ ಅಭಿವೃದ್ಧಿ ಕುರಿತು ಒಂದಷ್ಟು ಸಲಹೆಗಳನ್ನು ನೀಡಲಾಗಿದೆ.
ಪ್ರಸಾದ್ ಯೋಜನೆಯಡಿ ಚಾಮುಂಡಿ ಬೆಟ್ಟದ ಅಭಿವೃದ್ಧಿ ಮಾಡಲಾಗುವುದು, ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬಜೆಟ್ ಮಂಡಿಸುವಾಗ ಬೆಟ್ಟದ ಅಭಿವೃದ್ಧಿಯಲ್ಲಿ ರಾಜಕೀಯ ಇಚ್ಛಾಶಕ್ತಿಯನ್ನು ವ್ಯಕ್ತಪಡಿಸಿದ್ದರು ಎಂದು ತಿಳಿಸಿದರು.
ದಸರಾ ತಯಾರಿ ಆರಂಭವಾಗಿದ್ದು, ದಸರಾ ಮಹೋತ್ಸವಕ್ಕೆ ನಮ್ಮ ಇಲಾಖೆಯಿಂದ ಆಗಬೇಕಾದ ವ್ಯವಸ್ಥೆಗಳ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿದ್ದೇನೆ. ದಸರಾ ಪ್ರಾಧಿಕಾರ ರಚನೆ ಬಗೆಗೆ ಮುಂಬರುವ ದಿನಗಳಲ್ಲಿ ಚರ್ಚಿಸಲಾಗುವುದು.
ಮೈಸೂರಿಗೆ ಒಂದು ವರ್ಷಕ್ಕೆ 50 ಲಕ್ಷ ಜನ ಪ್ರವಾಸಿಗರು ಬರುತ್ತಾರೆ. ಮುಂದಿನ ದಿನಗಳಲ್ಲಿ ಪ್ರವಾಸಿಗರ ಸ್ನೇಹಿ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸಲಾಗುವುದು. ಸಂಸ್ಕೃತಿ ಇತಿಹಾಸ ಪರಂಪರೆಯ ಪ್ರತೀಕವಾದ ಪಾರಂಪರಿಕ ಕಟ್ಟಡಗಳ ಸಂರಕ್ಷಣೆ ಬಗ್ಗೆ ವಿಶೇಷ ಕಾಳಜಿವಹಿಸಲಾಗುವುದು ಎಂದು ಸಚಿವರು ಹೇಳಿದರು.
ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಕಾರ್ಯವೈಖರಿ ನಮಗೆ ಅಸಮಾಧಾನ ತಂದಿದೆ. ಈ ಕುರಿತು ಅಧಿಕಾರಿಗಳಿಂದಲೂ ಅಸಂತೋಷ ವ್ಯಕ್ತವಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿ ಒಳಗೊಂಡಂತೆ 3 ಜನರ ಸಮಿತಿ ರಚಿಸಿ 80 ಎಕರೆ ವಿಸ್ತಾರವಾದ ಪ್ರದೇಶವನ್ನು ಯಾವ ರೀತಿ ಬಳಸಿಕೊಂಡು ಅಭಿವೃದ್ದಿ ಪಡಿಸಬಹುದು ಎಂಬ ಬಗ್ಗೆ ಚರ್ಚಿಸಲಾಗುವುದು ಎಂದರು.
ಹತ್ತು ವರ್ಷಗಳ ಬಳಿಕ ಅರಮನೆಯಲ್ಲಿರುವ ಟ್ರೆಜ಼ರಿಯನ್ನು ತೆರೆಯಲಾಗಿದ್ದು, ಅದರಲ್ಲಿ 369 ಅಪರೂಪದ ವಸ್ತುಗಳಿವೆ. ತಾಮ್ರಪತ್ರ, ನಟರಾಜ ವಿಗ್ರಹ ಹಾಗೂ ನಾಣ್ಯಗಳು ಸೇರಿದಂತೆ ಹಲವು ವಸ್ತುಗಳು ದೊರೆತ್ತಿದ್ದು, ಅವುಗಳನ್ನು ನೋಡುವ ಅವಕಾಶ ಜನರಿಗೆ ಸಿಗಬೇಕು.
ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳ ಹಳೆ ಕಚೇರಿ ಕಟ್ಟಡ ಪಾರಂಪರಿಕವಾಗಿದ್ದು ಅದನ್ನು ವಸ್ತು ಪ್ರದರ್ಶನಕ್ಕೆ ಬಳಸಿಕೊಳ್ಳಲಾಗುವುದು ಎಂದು ತಿಳಿಸಿದರು.
ಜಂಗಲ್ ಲಾಡ್ಜ್ ಕಂಪನಿಯು 2020-21ರ ವೇಳೆಯಲ್ಲಿ 61 ಕೋಟಿ ವ್ಯವಹಾರ ನಡೆಸಿದ್ದು, 2022-23ಕ್ಕೆ 111 ಕೋಟಿ ವ್ಯವಹಾರ ವಿಸ್ತಾರವಾಗಿದೆ ಎಂದು ಹೆಚ್.ಕೆ.ಪಾಟೀಲ್ ವಿವರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾಧಿಕಾರಿಗಳಾದ ಡಾ. ಕೆ ವಿ ರಾಜೇಂದ್ರ, ಪ್ರವಾಸೋದ್ಯಮ ಇಲಾಖೆಯ ಎ.ಸಿ.ಎಸ್ ಕಪಿಲ್ ಮೋಹನ್, ಕಾರ್ಯದರ್ಶಿಗಳಾದ ರಾಮ್ ವಿಲಾಸ್ ಪ್ರಸಾದ್, ಬಿ ಜೆ ವಿಜಯ್ ಕುಮಾರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.