(ವರದಿ: ರಾಮಸಮುದ್ರ ಎಸ್. ವೀರಭದ್ರಸ್ವಾಮಿ)
ಚಾಮರಾಜನಗರ: ಸರ್ಕಾರಿ ಐಡಿಗಳ ದುರುಪಯೋಗ ಪಡಿಸಿಕೊಳ್ಳಲು ಕುಮ್ಮಕ್ಕು ನೀಡುವ ಅದಿಕಾರಿಗಳ ಮೇಲೆ ಕ್ರಮ ಇಲ್ಲದ ಕಾರಣ ಫಲಾನುಭವಿಗಳು ಕಷ್ಟ ಅನುಭವಿಸಬೇಕಾಗಿದೆ.
ರಾಜ್ಯ ಸರ್ಕಾರ ಜನತೆಗೆ ಐದು ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡಿ ಈಗಾಗಲೇ ಕೆಲವನ್ನು ಜಾರಿಗೆ ತಂದಿದೆ.
ಆ ಪೈಕಿ ಗೃಹಲಕ್ಷ್ಮಿ ಯೋಜನೆ ಒಂದಾಗಿದೆ. ಇದರ ಲಾಭ ಪಡೆಯಲಿಚ್ಛಿಸುವ ಫಲಾನುಭವಿಗಳ ಉಚಿತ ನೋಂದಣಿಗೆ ಪ್ರತಿ ಗ್ರಾಮ ಪಂಚಾಯಿತಿ ಕೇಂದ್ರಸ್ಥಾನದಲ್ಲಿ ಬಾಪೂಜಿ ಸೇವಾ ಕೇಂದ್ರ ಮತ್ತು ಗ್ರಾಮಗಳಲ್ಲಿ ಗ್ರಾಮ ಒನ್ ಕೇಂದ್ರಕ್ಕೆ ಸರ್ಕಾರ ಅಧಿಕೃತ ಪರವಾನಿಗೆ ನೀಡಿದೆ.
ಚಾಮರಾಜನಗರ ಪಟ್ಟಣ ಸೇರಿದಂತೆ ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ಪಂಚಾಯ್ತಿ ಲಾಗಿನ್ ಖಾಸಗಿ ಆನ್ ಲೈನ್ ಸೆಂಟರ್‌ನವರು ತಮಗೆ ಬೇಕಾದ ಬಾಪೂಜಿ ಸೇವಾ ಕೇಂದ್ರ ಹಾಗೂ ಗ್ರಾಮ ಒನ್ ನಿರ್ವಾಹಕರಿಂದ ಲಾಗಿನ್ ಐಡಿ ಮತ್ತು ಪಾಸ್‌ವರ್ಡ್ ಪಡೆದು ಫಲಾನುಭವಿಗಳ ಅರ್ಜಿ ನೋಂದಣಿಗೆ ಹಣ ಪಡೆಯುತ್ತಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಜಾತಿ-ಆದಾಯ ಪ್ರಮಾಣ ಪತ್ರ, ವಿದ್ಯಾರ್ಥಿವೇತನ, ಪಿಎಂ ಕಿಸಾನ್ ಸಮ್ಮಾನ್ ಯೋಜನೆ, ಬೆಳೆವಿಮೆ ನೋಂದಣಿಗೆ ಅರ್ಜಿ ಸಲ್ಲಿಕೆ, ಬ್ಯಾಂಕ್ ಖಾತೆಗೆ ಆಧಾರ್, ಪ್ಯಾನ್ ಲಿಂಕ್, ಪಡಿತರ ಚೀಟಿಗೆ ಆಧಾರ್ ಲಿಂಕ್, ಗೃಹಜ್ಯೋತಿ ನೋಂದಣಿ, ಆಧಾರ್, ರೇಷನ್ ಕಾರ್ಡ್ ತಿದ್ದುಪಡಿ, ಇ-ಕೆವೈಸಿ ಮುಂತಾದ ಹೆಸರಿನಲ್ಲಿ ಜನರಿಂದ ಸಾಕಷ್ಟು ಹಣ ವಸೂಲಿ ಮಾಡುವಲ್ಲಿ ಕೆಲವರು ನಿರತರಾಗಿದ್ದಾರೆ.
ಸರ್ಕಾರ ಸೂಚಿಸಿದ ಕೇಂದ್ರಗಳಲ್ಲಿ ಕೆಲ ನಿರ್ವಾಹಕರು ಗೃಹಲಕ್ಷ್ಮಿಯೋಜನೆಯ ತಮ್ಮಲಾಗಿನ್ ಐಡಿ ಮತ್ತು ಪಾಸ್‌ವರ್ಡ್ ಖಾಸಗಿಯವರಿಗೆ ನೀಡಿ ಅವರಿಂದ ಹಣ ಪಾಲುದಾರಿಕೆಯಲ್ಲಿ ಭಾಗಿಯಾಗುತ್ತಿದ್ದಾರೆ.
ತಮ್ಮಲ್ಲಿ ಸರ್ವರ್ ಸಮಸ್ಯೆಯಾಗುತ್ತಿದೆ ಎಂದು ನೋಂದಣಿ ಪ್ರಕ್ರಿಯೆ ವಿಳಂಬ ಮಾಡುತ್ತಿದ್ದಾರೆ.
ಮಹಿಳೆಯರು ಇಲ್ಲಿ ಉಚಿತ ನೋಂದಣಿಗೆ ಹೆಚ್ಚು ಸಮಯ ಕಾಯುವುದಕ್ಕಿಂತ ಹೊರಗಡೆ ಹಣ ಖರ್ಚಾದರೂ ಬೇಗ ಕೆಲಸವಾಗುತ್ತದೆ ಎಂದುಕೊಂಡು ಖಾಸಗಿ ಆನ್ಲೈನ್ ಕೇಂದ್ರಗಳತ್ತ ಮುಖ ಮಾಡುತ್ತಿದ್ದಾರೆ.
ಇದರ ಪರಿಣಾಮ ಸರ್ಕಾರದ ಕೇಂದ್ರಗಳಿಗಿಂತ ಖಾಸಗಿ ಅನ್ ಲೈನ್ ಕೇಂದ್ರಗಳ ಮುಂದೆ ಸಾಲು ಹೆಚ್ಚು ಕಂಡುಬರುತ್ತಿದೆ.
ಮಹಿಳೆಯರ ದಟ್ಟಣೆ ನೋಡಿಯೂ ಸಂಬಂಧಪಟ್ಟ ಅಧಿಕಾರಿಗಳು ಮೌನವಹಿಸುತ್ತಿದ್ದಾರೆ. ಮೇಲಧಿಕಾರಿಗಳು ಕೂಡಲೇ ಪರಿಶೀಲಿಸಿ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಂಡು ಮುಗ್ಧ ಜನತೆಗೆ ಸರ್ಕಾರದ ಯೋಜನೆ ಒದಗಿಸಿಕೊಡಬೇಕಿದೆ.
ಸರ್ಕಾರಿ ಐಡಿ ಬಳಸಿ ಸುಲಿಗೆ ಮಾಡುವವರ ಮೇಲೆ ಕ್ರಮ ಒಂದೆಡೆಯಾದರೆ ಇದಕ್ಕೆ ಕುಮ್ಮಕ್ಕು ನೀಡುವ ಅದಿಕಾರಿಗಳ ಮೇಲೆ ಎಪ್ಐಆರ್ ದಾಖಲಿಸಿ ಜೈಲಿಗಟ್ಟಬೇಕಾಗಿದೆ.
ಖಾಸಗಿಯಲ್ಲಿ ೫೦-೧೦೦ ರೂ ಪಢೆಯುತ್ತಿರುವುದರಿಂದ ಗ್ರಾಮ ಒನ್ ಸೇರಿದಂತೆ ಇನ್ನಿತರ ಸರ್ಕಾರಿ ಸ್ವಾಮ್ಯದ ಸೇವಾ ಕೇಂದ್ರಗಳಿಗೂ ಕೆಟ್ಟ ಹೆಸರು ಬರುತ್ತದೆ.