ಮಹಿಳೆಯರು ಸ್ವಯಂ ಉದ್ಯೋಗಿಗಳಾಗಲಿ ವಿಶ್ವ ಪ್ರಸನ್ನ ತೀರ್ಥ ಶ್ರೀ ಕರೆ

ಮೈಸೂರು: ಇಂದಿನ ದುಬಾರಿ ಜೀವನದಲ್ಲಿ ಒಬ್ಬ ವ್ಯಕ್ತಿಯ ದುಡಿಮೆಯಿಂದ ಮಧ್ಯಮ ವರ್ಗದವರ ಕುಟುಂಬ ನಿರ್ವಹಣೆ ಕಷ್ಟ, ಮಹಿಳೆಯರು ಸ್ವಯಂ ಉದ್ಯೋಗಿಗಳಾಗಿ ಕುಟುಂಬ ನಿರ್ವಹಣೆಗೆ ಕೈಜೋಡಿಸಬೇಕು ಎಂದು ಉಡುಪಿಯ ಶ್ರೀ ಪೇಜಾವರ ಮಠದ ಪರಮಪೂಜ್ಯ ಶ್ರೀ ಶ್ರೀ ವಿಶ್ವ ಪ್ರಸನ್ನ ತೀರ್ಥ ಶ್ರೀಪಾದಂಗಳು ಕರೆ ನೀಡಿದರು.

ಮೈಸೂರಿನ ಸರಸ್ವತಿಪುರಂನಲ್ಲಿರುವ ಶ್ರೀ ಕೃಷ್ಣದಾಮ ಸಭಾಂಗಣದಲ್ಲಿ
ಶ್ರೀ ದುರ್ಗಾ ಫೌಂಡೇಶನ್ ಹಾಗೂ ಸಂಜೀವಿನಿ ಫೌಂಡೇಶನ್
ಗುರುವಾರ ಮಹಿಳೆಯರಿಗೆ ಹಮ್ಮಿಕೊಂಡಿದ್ದ ಉಚಿತ ಕಂಪ್ಯೂಟರ್, ಟೈಲರಿಂಗ್, ಮೇಕಪ್, ಹ್ಯಾಂಡ್ ವರ್ಕ್ ತರಬೇತಿಯ ಕಾರ್ಯಗಾರ ಉದ್ಘಾಟಿಸಿ ಮಾತನಾಡಿದರು.

ಮಹಿಳಾ ಸಬಲೀಕರಣದಿಂದ ದೇಶದ ಅಭಿವೃದ್ಧಿ ಸಾಧ್ಯ, ಹೀಗಾಗಿ ಮಹಿಳೆಯರಿಗೆ ಆಯೋಜಿಸುವ ವಿವಿಧ ತರಬೇತಿಯನ್ನು ಸದ್ಬಳಕೆ ಮಾಡಿಕೊಂಡು ಆರ್ಥಿಕ ಸ್ವಾವಲಂಬನೆ ಸಾಧಿಸುವಂತೆ ಕಿವಿಮಾತು ಹೇಳಿದರು.

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಅರ್ಥಶಾಸ್ತ್ರದ ಪ್ರಾಧ್ಯಾಪಕರಾದ ಡಾಕ್ಟರ್ ಆರ್ ಎಚ್ ಪವಿತ್ರ ಮಾತನಾಡಿ,
ನಿರುದ್ಯೋಗಿ ಮಹಿಳೆಯರು ತಾವು ಪಡೆದ ಸ್ವಉದ್ಯೋಗದ ತರಬೇತಿಯನ್ನು ವೃತ್ತಿಗೆ ಪೂರಕವಾಗಿ ಬಳಸಿಕೊಂಡಾಗ ತರಬೇತಿ ಪಡೆದದ್ದಕ್ಕೂ ಸಾರ್ಥಕವಾಗುತ್ತದೆ‌ ಎಂದು ಹೇಳಿದರು.

ಸರಸ್ವತಿಪುರಂನ ಆರಕ್ಷಕ ನಿರೀಕ್ಷಕರಾದ ರವೀಂದ್ರ ಸಿ ಎಂ
ತರಬೇತಿ ಪಡೆದ ಮಹಿಳೆಯರು ಸ್ವಯಂ ಉದ್ಯೋಗ ಸೃಷ್ಟಿಸಿಕೊಂಡು, ವಿವಿಧ ರೀತಿಯ ಫ್ಯಾಷನ್ ಆಧಾರಿತ ಬಟ್ಟೆಗಳನ್ನು ಹೊಲಿದು ಹಣ ಸಂಪಾದಿಸಿ, ಆರ್ಥಿಕವಾಗಿ ಸಬಲರಾಗಬೇಕು ಎಂದು ಸಲಹೆ ನೀಡಿದರು.

ಶ್ರೀ ದುರ್ಗಾ ಫೌಂಡೇಶನ್ ಅಧ್ಯಕ್ಷರಾದ ರೇಖಾ ಶ್ರೀನಿವಾಸ್ ಮಾತನಾಡಿ ಕೌಶಲ್ಯ ತರಬೇತಿಗಳು ಜೀವನಕ್ಕೆ ದಾರಿ ದೀಪವಾಗಲಿದೆ ಎಂದು ತಿಳಿಸಿದರು.

21 ದಿನಗಳ ಕಾಲ ನಡೆಯುವ ಈ ಕಾರ್ಯಗಾರ ಸೇರಬಯಸುವವರು 9742445558 ನಂಬರಿಗೆ ಸಂಪರ್ಕಿಸಬಹುದು.

ಹಿರಿಯ ಸಮಾಜಸೇವಕರಾದ ಕೆ ರಘುರಾಮ್ ವಾಜಪಾಯಿ, ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಡಿ. ಟಿ ಪ್ರಕಾಶ್, ಶಿಕ್ಷಣ ತಜ್ಞರಾದ ದೀಪಾದನಸಿಂಗ್, ಕಾರ್ಯಧ್ಯಕ್ಷರಾದ ರವಿಶಾಸ್ತ್ರಿ, ಪ್ರಧಾನ ಕಾರ್ಯದರ್ಶಿ ಸುಬ್ರಹ್ಮಣ್ಯ ಎಂ ತಂತ್ರಿ,ಶ್ರೀ ಸಂಜೀವಿನಿ ಫೌಂಡೇಶನ್ ಅಧ್ಯಕ್ಷ ಭರತ್ ಕುಮಾರ್, ಅಶ್ವಿನಿ ಗೌಡ, ಭಾಗ್ಯಶ್ರೀ, ಅಂಬಾಭವಾನಿ ಮಹಿಳಾ ಸಮಾಜದ ಅಧ್ಯಕ್ಷೆ ಸವಿತಾ ಘಾಟ್ಕೆ ಮತ್ತಿತರರು ಭಾಗವಹಿಸಿದ್ದರು.