ನಿರ್ವಹಣೆ ಇಲ್ಲದೆ ಸೊರಗುತ್ತಿವೆ ಶೌಚಾಲಯಗಳು

ಮೈಸೂರು: ಸ್ವಚ್ಛ ಭಾರತ ಯೋಜನೆ ಯಶಸ್ಸಿಗೆ ಶೌಚಾಲಯಗಳ ಅತ್ಯಗತ್ಯವಿದೆ,ಆದರೆ ದಕ್ಷಿಣಕಾಶಿ ನಂಜನಗೂಡಿನಲ್ಲಿ ಶೌಚಾಲಯಗಳು ನಿರ್ವಹಣೆ ಇಲ್ಲದೆ ಉಪಯೋಗವಿಲ್ಲದಂತಾಗಿವೆ.

ಅಭಿವೃದ್ದಿ ಬಗ್ಗೆ ಭಾಷಣ ಬಿಗಿಯುವ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಕೆಲಸಗಳಿಗೆ ಇಲ್ಲಿನ ಶೌಚಾಲಯಗಳು ಹಿಡಿದ ಕೈಗನ್ನಡಿಯಂತಿವೆ.

ಸಾರ್ವಜನಿಕರ ತೆರಿಗೆ ಹಣದಲ್ಲಿ ನಿರ್ಮಿಸಲಾದ ಬಹುತೇಕ ಶೌಚಾಲಯಗಳು ಗೊಬ್ಬೆದ್ದು ನಾರುತ್ತಿದೆ.

ಶೌಚಾಲಯಗಳ ನಿರ್ವಹಣೆಗಾಗಿ ನಗರಸಭೆ ಪ್ರತಿ ವರ್ಷ ಲಕ್ಷಾಂತರ ರೂ ಮೀಸಲಿಡುತ್ತಿದೆ.ಆದರೆ‌ ಸರಿಯಾಗಿ ನಿರ್ವಹಣೆ ಮಾಡದೆ ಹಾಳಾಗುತ್ತಿವೆ ಎಂದು ಜನ‌ ಕಿಡಿಕಾರಿದ್ದಾರೆ.

ಹೊರ ಊರುಗಳಿಂದ‌ ಬಂದವರು ಶೌಚಾಲಯ ಬಳಸಿದರೆ ರೋಗ ಅಂಟಿಸಿಕೊಂಡು ಹೋಗುವುದು ಗ್ಯಾರೆಂಟಿ.

ಸ್ವಚ್ಛ ಭಾರತದ ಕನಸು ಕಾಣುತ್ತಿರುವ ಜನಪ್ರತಿನಿಧಿಗಳಿಗೆ ದುಃಸ್ಥಿತಿಯಲ್ಲಿರುವ ಈ ಶೌಚಾಲಯಗಳು ಕಣ್ಣಿಗೆ ಬೀಳುತ್ತಿಲ್ಲವೆ,ಇಲ್ಲಾ ಗೊತ್ತಿದ್ದೂ ನಿರ್ಲಕ್ಷ್ಯ ‌ವಹಿಸಿದ್ದಾರೆಯೆ ಎಂದು ನಂಜನಗೂಡಿನ ಜನ ಪ್ರಶ್ನಿಸುತ್ತಿದ್ದಾರೆ.

ಕೆಲವು ಶೌಚಾಲಯ ನಿರ್ಮಾಣವಾದರೂ ಸಾರ್ವಜನಿಕರಿಗೆ ಬಳಕೆಗೆ‌ ಸಿಗುತ್ತಿಲ್ಲ.

8 ರಿಂದ 10 ಲಕ್ಷ ವೆಚ್ಚ ಮಾಡಿ ನಿರ್ಮಿಸಲಾದ ಶೌಚಾಲಯಕ್ಕೆ ಬೀಗ ಹಾಕಿದ್ದಾರೆ.ಯಾವ ಕಾರಣಕ್ಕೆ ಬೀಗ ಹಾಕಿದ್ದಾರೋ ತಿಳಿಯದು.

ಶೌಚಾಲಯ ದುಃಸ್ಥಿತಿಯ ಬಗ್ಗೆ ಸ್ಥಳೀಯರು  ಜನಪ್ರತಿನಿಧಿಗಳಿಗೆ ಹಾಗೂ ಅಧಿಕಾರಿಗಳಿಗೆ ಹಿಡಿ ಶಾಪ ಹಾಕುತ್ತಿದ್ದಾರೆ.

ಇನ್ನಾದರೂ‌ ಇರುವ ಶೌಚಾಲಯಗಳು ಉಪಯೋಗಕ್ಕೆ ಬರುವಂತೆ ಮಾಡಿಯಾರಾ,ಬೀಗ ಹಾಕಿರುವಂತಹ ಶೌಚಾಲಯಗಳು ಜನರಿಗೆ ಲಭ್ಯವಾಗಲಿವೆಯೆ‌ ಎಂಬುದನ್ನು ಕಾದು ನೋಡಬೇಕಿದೆ.