ಶ್ರೀರಂಗಪಟ್ಟಣ: ಎಷ್ಟೇ ಗಿಡ ನೆಟ್ಟರೂ, ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡರೂ ಪ್ಲಾಸ್ಟಿಕ್ ಬಳಕೆ ಕಡಿಮೆಯಾಗದ ಹೊರತು ಪರಿಸರ ಮಾಲಿನ್ಯ ತಡೆಗಟ್ಟುವುದು ಅಸಾಧ್ಯ ಎಂದು ಶಾಸಕ ರಮೇಶ್ ಬಾಬು ಬಂಡೀಸಿದ್ದೇ ಗೌಡ ಹೇಳಿದರು.
ಪುರಸಭೆ ವತಿಯಿಂದ ಹಮ್ಮಿಕೊಂಡಿದ್ದ ಪ್ಲಾಸ್ಟಿಕ್ ಮುಕ್ತ ಅಭಿಯಾನಕ್ಕೆ ಗಿಡ ನೆಡುವ ಮೂಲಕ ಚಾಲನೆ ನೀಡಿ ಶಾಸಕರು ಮಾತನಾಡಿದರು.
ಪ್ಲ್ಯಾಸ್ಟಿಕ್ ತೆಜಿಸುವ ಕೆಲಸ ನಮ್ಮಿಂದಲೇ ಆರಂಭವಾಗಲಿ, ನಮಗಾಗಿ ಇಷ್ಟೆಲ್ಲಾ ಕೊಟ್ಟಿರುವ ಪ್ರಕೃತಿಯ ಉಳಿವಿಗೆ ನಮ್ಮಿಂದ ಸಣ್ಣ ಕೊಡಗೆಯನ್ನಾದರೂ ನೀಡೋಣ ಎಂದು ಕರೆ ನೀಡಿದರು.
ನಮಗಾಗಿ, ನಮ್ಮ ಮುಂದಿನ ಪೀಳಿಗೆಗಾಗಿ ಪರಿಸರ ಉಳಿಸಲು ಪಣ ತೊಡೋಣ. ಪ್ಲಾಸ್ಟಿಕ್ ಮುಕ್ತ ಪರಿಸರ ಅಭಿಯಾನಕ್ಕೆ ಕೈ ಜೋಡಿಸೋಣ ಎಂದು ಜನರಲ್ಲಿ ಮನವಿ ಮಾಡಿದರು.
ಪ್ಲಾಸ್ಟಿಕ್ ನಿಂದ ಎಷ್ಟೆಲ್ಲಾ ತೊಂದರೆಗಳಿವೆ ಎಂದು ತಿಳಿದಿದ್ದರೂ ಬಳಕೆಗೆ ಸುಲಭವಾಗಿದೆ ಎಂಬ ಕಾರಣಕ್ಕೆ ಪ್ಲಾಸ್ಟಿಕನ್ನೇ ನೆಚ್ಚಿಕೊಂಡಿರುವವರು ಹಲವರು.
ಪ್ಲಾಸ್ಟಿಕ್ ಬಳಕೆ ಕಡಿಮೆಗೊಳಿಸುವಂತೆ ಸರ್ಕಾರಗಳು, ಸಂಘ ಸಂಸ್ಥೆಗಳು ಮನವಿ ಮಾಡಿದರೂ ಅದರ ಬಳಕೆ ಕಡಿಮೆ ಮಾಡದಿದ್ದಲ್ಲಿ ಇನ್ನಷ್ಟು ಅನಾಹುತಗಳನ್ನು ನಾವೇ ಮೈಮೇಲೆ ಎಳೆದುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು
ಪ್ಲಾಸ್ಟಿಕ್ ಚೀಲದ ಬದಲು ಕಾಗದ ಅಥವಾ ಬಟ್ಟೆಯ ಚೀಲ ಬಳಸಿ,ಪ್ಲಾಸ್ಟಿಕ್ ಗೋಣಿಗಳ ಬದಲು ಸೆಣಬಿನ ನಾರಿನ ಗೋಣಿ, ಪ್ಲಾಸ್ಟರ್ ಆಫ್ ಪ್ಯಾರಿಸ್ ಬದಲು ಮಣ್ಣಿನ ಮೂರ್ತಿಗಳ ಬಳಕೆ ಮಾಡಬೇಕು ಎಂದು ರಮೇಶ್ ಬಾಬು ಬಂಡೀಸಿದ್ದೇಗೌಡ ತಿಳಿಹೇಳಿದರು.
ಪ್ಲಾಸ್ಟಿಕ್ ವಸ್ತುಗಳನ್ನು ಎಲ್ಲೆಂದರಲ್ಲಿ ಎಸೆಯದೆ ಮರು ಬಳಕೆ ಮಾಡುವಂತಾದರೆ ಬೀದಿಯಲ್ಲಿರುವ ದನಗಳು, ನಾಯಿಗಳು ಪ್ಲಾಸ್ಟಿಕ್ ತಿನ್ನುವುದನ್ನೂ ತಪ್ಪಿಸಬಹುದು ಎಂದು ತಿಳಿಸಿದರು.
ಶ್ರೀರಂಗಪಟ್ಟಣದ ಪೇಟೆ ಬೀದಿಯ ಮಾರ್ಗವಾಗಿ ತೆರಳಿ ರಸ್ತೆ ಬದಿ ವ್ಯಾಪಾರಿಗಳಿಗೆ ಅಂಗಡಿ ವ್ಯಾಪಾರಿಗಳಿಗೆ ಪ್ಲಾಸ್ಟಿಕ್ ನಿಷೇಧ ಮಾಡುವುದರ ಬಗ್ಗೆ ತಿಳುವಳಿಕೆ ಹೇಳಿದರು.
ಕರಪತ್ರಗಳನ್ನು ಹಂಚಿ ಸಾರ್ವಜನಿಕರಲ್ಲಿ ಅರಿವು ಮೂಡಿಸಿದರು.
ಪುರಸಭಾ ಅರೋಗ್ಯ ಅಧಿಕಾರಿಗಳು ಮತ್ತು ಪುರಾಸಭೆಯ ಚುನಾಯಿತ ಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.