ಮೈಸೂರಿನಲ್ಲಿ ನೈಟ್ ಬೀಟ್ ವ್ಯವಸ್ಥೆ ಮತ್ತಷ್ಟು ಬಿಗಿಗೊಳಿಸಿದ‌ ಅಧಿಕಾರಿಗಳು

ಮೈಸೂರು: ರಾಜಧಾನಿ ಬೆಂಗಳೂರಿನಲ್ಲಿ ಶಂಕಿತ ಉಗ್ರರ ಬಂಧನವಾಗುತ್ತಿದ್ದಂತೆ ಮೈಸೂರಿನಲ್ಲಿ ಹೈ ಅಲರ್ಟ್ ಮಾಡಲಾಗಿದ್ದು,ಪೊಲೀಸರು ಹಗಲು ರಾತ್ರಿ ಶ್ರಮವಹಿಸಿದ್ದಾರೆ.

ಜನಸ್ನೇಹಿ ಪೊಲೀಸ್ ವ್ಯವಸ್ಥೆಯ ಭಾಗವಾಗಿ ದುಷ್ಕರ್ಮಿಗಳನ್ನು ಸದೆಬಡಿಯಲು ನೈಟ್ ಬೀಟ್ ವ್ಯವಸ್ಥೆಯನ್ನ ನಗರದಾದ್ಯಂತ ಮತ್ತಷ್ಟು ಬಿಗಿಗೊಳಿಸಲಾಗಿದೆ.

ಜತೆಗೆ ಸ್ಮಾರ್ಟ್ ಬೀಟ್ ವ್ಯವಸ್ಥೆಯನ್ನ ಕಟ್ಟುನಿಟ್ಟಾಗಿ ಮಾಡಲಾಗುದ್ದು ಪೊಲೀಸರ ಕಾರ್ಯ ವೈಖರಿಯನ್ನು ‌ಹಿರಿಯ ಅಧಿಕಾರಿಗಳು ‌ಪರಿಶೀಲಿಸುತ್ತಿದ್ದಾರೆ.

ಉದಯಗಿರಿ ಮತ್ತಿತರ ಠಾಣೆ ಪೊಲೀಸರು ಸಾರ್ವಜನಿಕರ ನೆರವನ್ನೂ ಕೋರಿದ್ದಾರೆ.

ಅಪರಿಚಿತ ಹಾಗೂ ಶಂಕಿತ ವ್ಯಕ್ತಿಗಳು ಕಂಡುಬಂದಲ್ಲಿ ಕೂಡಲೇ ಮಾಹಿತಿ ನೀಡುವಂತೆ ಮನವಿ ಮಾಡಿದ್ದಾರೆ.

ಮಾಹಿತಿದಾರರ ವಿವರದ ಗೌಪ್ಯತೆ ಕಾಪಾಡುವುದಾಗಿ ಭರವಸೆ ನೀಡಿದ್ದಾರೆ.

ಉದಯಗಿರಿ ಪೊಲೀಸ್ ಠಾಣೆಯ ರಾತ್ರಿ ಗಸ್ತು ಕರ್ತವ್ಯದ ಸಿಬ್ಬಂದಿಗೆ ಶಕ್ತಿನಗರದ ಪಾರ್ಕ್ ಸಮೀಪ ಇನ್ಸ್ಪೆಕ್ಟರ್ ಪಿ. ಕೆ. ರಾಜು ರವರು ಕರ್ತವ್ಯದ ಹಂಚಿಕೆ ಮಾಡಿ ನಂತರ ಸಾರ್ವಜನಿಕರಿಗೆ ಅಭಯ ನೀಡಿದ್ದಾರೆ.

ಶಕ್ತಿನಗರದ ನಾಗರೀಕರೊಂದಿಗೆ ಪೊಲೀಸ್ ಸಿಬ್ಬಂದಿ ಸಂಭಾಷಣೆ ನಡೆಸಿದರು.

ಈ ಹಿಂದೆ ರಾತ್ರಿ ಗಸ್ತಿನ ಸಿಬ್ಬಂದಿಗಳು ಪಾಯಿಂಟ್ ಬುಕ್ ನಲ್ಲಿ ಸಹಿ ಮಾಡುವ ವ್ಯವಸ್ಥೆಯ ಬದಲಾಗಿ ಪೊಲೀಸ್ ಇಲಾಖೆಯ ವತಿಯಿಂದ ಜಾರಿಗೆ ತಂದಿರುವ ಸ್ಮಾರ್ಟ್ ಇ ಬೀಟ್ ವ್ಯವಸ್ಥೆಯ ಬಗ್ಗೆ ನಾಗರಿಕರಿಗೆ ಮಾಹಿತಿ ನೀಡಿದರು.

ಸಾರ್ವಜನಿಕರಿಗೆ ಆತ್ಮಸ್ಥೈರ್ಯ ತುಂಬುವ ಪೊಲೀಸರ ಕೆಲಸಕ್ಕೆ ಮೈಸೂರಿನ ಜನತೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಈ ವೇಳೆ ಸಬ್ ಇನ್ಸ್ಪೆಕ್ಟರ್ ಸುನಿಲ್ ಹಾಗೂ ಸಿಬ್ಬಂದಿ ಹಾಜರಿದ್ದು ನಿಮ್ಮೊಂದಿಗೆ ನಾವಿದ್ದೇವೆ ಎಂದು ಧೈರ್ಯ ತುಂಬಿದರು.

ನಗರ ಪೊಲೀಸ್ ಆಯುಕ್ತ ಡಾ.ಬಿ.ರಮೇಶ್ ಮಾರ್ಗದರ್ಶನದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಮುತ್ತುರಾಜ್ ಹಾಗೂ ಸಂಚಾರ ಮತ್ತು ಅಪರಾಧ ವಿಭಾಗದ ಡಿಸಿಪಿ ಜಾಹ್ನವಿ ಅವರ‌ ಉಸ್ತುವಾರಿಯಲ್ಲಿ ಎಸಿಪಿ ಶಾಂತಮಲ್ಲಪ್ಪ ನೇತೃತ್ವದಲ್ಲಿ ಉದಯಗಿರಿ ಠಾಣಾ ಪೊಲೀಸರು ರಾತ್ರಿ ಗಸ್ತನ್ನು ಇನ್ನೂ ಹೆಚ್ಚು ಬಿಗಿಗೊಳಿಸಿದ್ದಾರೆ.