ಪಶು ಸಂಜೀವಿನಿ ವಾಹನಕ್ಕೆ ಎಸ್.ಟಿ.ಎಸ್ ಚಾಲನೆ

ಮೈಸೂರು: ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅವರು ಶನಿವಾರ ಜಿಲ್ಲಾ ಪಂಚಾಯತ್ ಆವರಣದಲ್ಲಿ ಪಶು ಚಿಕಿತ್ಸಾ ಪಶು ಸಂಜೀವಿನಿ ವಾಹನವನ್ನು ಹಸಿರು ನಿಶಾನೆ ತೋರಿಸುವ ಮೂಲಕ ಲೋಕಾರ್ಪಣೆ ಮಾಡಿದರು.
ಬಳಿಕ ಮಾಧ್ಯಮ ಪ್ರತಿನಿಧೀಗಳೊಂದಿಗೆ ಮಾತನಾಡಿದ ಅವರು ಪಶು ಸಂಜೀವಿನಿ ವಾಹನದಿಂದ ಜಾನುವಾರುಗಳ ಮಾಲೀಕರಿಗೆ ಅನುಕೂಲವಾಗಲಿದೆ. ಜಾನುವಾರುಗಳಿಗೆ ತೊಂದರೆಯಾದಲ್ಲಿ 1962 ಸಹಾಯವಾಣಿಗೆ ಕರೆ ಮಾಡಿದಲ್ಲಿ ತಕ್ಷಣವೇ ವಾಹನವು ವೈದ್ಯರ ಜೊತೆಯಲ್ಲಿಯೇ ಮಾಲೀಕನ ಮನೆಗೆ ತೆರಳಿ ಜಾನುವಾರುಗಳಿಗೆ ಚಿಕಿತ್ಸೆ ನೀಡಲಾಗುವುದು ಎಂದು ಹೇಳಿದರು.
ಪಶು ಸಂಜೀವಿನಿ ವಾಹನದಲ್ಲಿ ಶಸ್ತ್ರ ಚಿಕಿತ್ಸಾ ಘಟಕ, ಪ್ರಯೋಗ ಶಾಲೆ, ಸ್ಕ್ಯಾನಿಂಗ್ ಉಪಕರಣ ಅಳವಡಿಕೆ, 250 ಲೀಟರ್ ಸಾಮರ್ಥ್ಯದ ನೀರಿನ ಟ್ಯಾಂಕ್, ಹವಾನಿಯಂತ್ರಣ ವ್ಯವಸ್ಥೆ, ಪಶು ವೈದ್ಯರು ಮತ್ತು ಸಿಬ್ಬಂದಿ ಕುಳಿತುಕೊಳ್ಳಲು ಆಸನ ಹಾಗೂ ಆಧುನಿಕ ಪಶು ವೈದ್ಯಕೀಯ ಸೇವೆಗಳನ್ನು ಹೊಂದಿದೆ ಎಂದರು.
ಪಶು ಸಂಜೀವಿನಿ ವಾಹನವನ್ನು ಮುಖ್ಯಮಂತ್ರಿಗಳು ಬೆಂಗಳೂರಿನಲ್ಲಿ ಲೋಕರ್ಪಣೆ ಮಾಡುವರು. ಮೈಸೂರಿನಲ್ಲಿಯೂ ಲೋಕರ್ಪಣೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಪಶು ಸಂಜೀವಿನಿ ವಾಹನ ವ್ಯವಸ್ಥೆಯು ಜಾರಿಯಾಗಲಿದೆ ಎಂದು ತಿಳಿಸಿದರು.

ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಪರಿಮಳ ಶ್ಯಾಂ, ಶಾಸಕ ಎಲ್.ನಾಗೇಂದ್ರ, ಜಿಲ್ಲಾಧಿಕಾರಿ ಬಿ. ಶರತ್, ಮಹಾನಗರ ಪಾಲಿಕೆ ಆಯುಕ್ತ ಗುರುದತ್ ಹೆಗಡೆ, ಮುಡಾ ಅಧ್ಯಕ್ಷ ಹೆಚ್.ವಿ ರಾಜೀವ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.