ಮೈಸೂರು: ಜಿಲ್ಲೆಯಾದ್ಯಂತ ಮಾರಕ ರೋಗಗಳ ವಿರುದ್ಧ ನೀಡುವ ಲಸಿಕೆಗಳಿಂದ ವಂಚಿತರಾದಂತಹ 5 ವರ್ಷದೊಳಗಿನ ಎಲ್ಲಾ ಮಕ್ಕಳು ಹಾಗೂ ಗರ್ಭಿಣಿಯರಿಗೆ ಲಸಿಕೆಗಳನ್ನು ಪೂರ್ಣಗೊಳಿಸಲು ಸರ್ಕಾರ ಇಂದ್ರಧನುಷ್ ಅಭಿಯಾನ 5.0 ಆಯೋಜಿಸಿದೆ ಎಂದು ಜಿಲ್ಲಾಧಿಕಾರಿ ಡಾ ಕೆ.ವಿ.ರಾಜೇಂದ್ರ ಇವರು ತಿಳಿಸಿದರು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ರಾಷ್ಟ್ರೀಯ ಸಾರ್ವತ್ರಿಕ ಲಸಿಕಾ ಕಾರ್ಯಕ್ರಮ ದಡಿ ತೀವ್ರತರ ಮಿಷನ್ ಇಂದ್ರ ಧನುಷ್ 5.0 ಕಾರ್ಯಕ್ರಮ ವನ್ನು ಅನುಷ್ಠಾನ ಗೊಳಿಸುವ ನಿಟ್ಟಿನಲ್ಲಿ ಹಮ್ಮಿಕೊಂಡಿದ್ದ ಸಭೆಯಲ್ಲಿ ಅವರು ಮಾತನಾಡಿದರು.
2023 ರ ಅಂತ್ಯದೊಳಗೆ ದಡಾರ ಮತ್ತು ರುಬೆಲ್ಲಾ ರೋಗಗಳ ನಿರ್ಮೂಲನೆ ಗುರಿಯಿದೆ. ಈ ರೋಗಗಳ ವಿರುದ್ಧ ಲಸಿಕಾ ಪ್ರಕ್ರಿಯೆ ಹಾಗೂ ಪಿಸಿವಿ 3ನೇ ಡೋಸ್ ಲಸಿಕಾ ಪ್ರಕ್ರಿಯೆಯ ವೇಗ ಹೆಚ್ಚಿಸಲು ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ 3 ಸುತ್ತುಗಳಲ್ಲಿ ಅಭಿಯಾನ ನಡೆಯಲಿದ್ದು, ಆಗಸ್ಟ್ 7ರಿಂದ 12ರವರೆಗೆ, ಸೆಪ್ಟೆಂಬರ್ 11ರಿಂದ 16ರವರೆಗೆ ಮತ್ತು ಅಕ್ಟೋಬರ್ 9ರಿಂದ 14ರವರೆಗೆ ನಡೆಯಲಿದೆ ಎಂದು ತಿಳಿಸಿದರು.
ಇಂದ್ರಧನುಷ್ 5.0 ಯೋಜನೆ ಪರಿಣಾಮಕಾರಿ ಅನುಷ್ಠಾನಕ್ಕೆ ಹಳ್ಳಿಗಳು, ಕೊಳಚೆ ಪ್ರದೇಶಗಳಲ್ಲಿ ಹೆಚ್ಚು ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಬೇಕು.
ಆರೋಗ್ಯಧಿಕಾರಿಗಳು ಆಶಾ ಕಾರ್ಯಕರ್ತೆಯರಿಗೆ ಲಸಿಕೆ ಪಡೆಯುವವರನ್ನು ಗುರುತಿಸುವ ಕೆಲಸ ವಹಿಸಬೇಕು ಎಂದು ಸೂಚಿಸಿದರು.
ಆಶಾ ಕಾರ್ಯಕರ್ತೆಯರಿಗೆ ಈ ಕುರಿತು ತರಬೇತಿ ನೀಡಿ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮಳೆಗಾಲ ಪ್ರಾರಂಭವಾಗಿದ್ದು ಡೆಂಗ್ಯೂ ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬರುತ್ತಿದೆ ಆದ್ದರಿಂದ ಸೊಳ್ಳೆಗಳು ಉತ್ಪತ್ತಿ ಆಗದಂತೆ ನೋಡಿಕೊಳ್ಳಬೇಕು ಎಂದು ಡಾ.ರಾಜೇಂದ್ರ ಸಲಹೆ ನೀಡಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಾದ ಡಾ. ಕುಮಾರಸ್ವಾಮಿ ಅವರು ಮಾತನಾಡಿ ಆಗಸ್ಟ್ ಸೆಪ್ಟೆಂಬರ್ ಹಾಗೂ ಅಕ್ಟೋಬರ್ ತಿಂಗಳಲ್ಲಿ ಇಂದ್ರಧನುಷ್ ಲಸಿಕೆ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ.
ಫಲಾನುಭವಿಗಳು https://uwinselfregistration.mohfw.giv.in ನಲ್ಲಿ ನೋಂದಣಿ ಮಾಡಿಕೊಳ್ಳಬಹುದಾಗಿದೆ ಎಂದು ತಿಳಿಸಿದರುಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ. ಎಂ ಗಾಯತ್ರಿ, ಮೈಸೂರು ಮಹಾನಗರ ಪಾಲಿಕೆಯ ಆಯುಕ್ತ ಆಶಾದ್ ಉರ್ ರೆಹಮಾನ್ ಶರೀಫ್ ಹಾಗೂ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಪಾಲ್ಗೊಂಡಿದ್ದರು.