ಅಂತರಾಜ್ಯ ಕಳ್ಳನ ಬಂಧನ:1ಕೋಟಿಗೂ ಹೆಚ್ಚು‌ ಬೆಲೆಯ ಮಾಲು ವಶ

ಮೈಸೂರು: ಅಂತರಾಜ್ಯ ಕಳ್ಳನೊಬ್ಬನನ್ನು ಬಂಧಿಸುವಲ್ಲಿ ನಗರದ ವಿವಿ ಪುರಂ ಠಾಣಾ ಪೊಲೀಸರು ಯಶಸ್ವಿಯಾಗಿದ್ದು 1ಕೋಟಿಗೂ  ಹೆಚ್ಚು ಬೆಲೆಯ ಮಾಲನ್ನು‌ ವಶಪಡಿಸಿಕೊಂಡಿದ್ದಾರೆ.

ಆಂಧ್ರ ರಾಜ್ಯದ ಸತ್ತಿಬಾಬು ಅಲಿಯಾಸ್ ಸತೀಶ್ ರೆಡ್ಡಿ ಬಂಧಿತ ಆರೋಪಿ.

ಬಂಧಿತನಿಂದ 6 ಕಾರು, 750 ಗ್ರಾಂ ಚಿನ್ನಾಭರಣ, 3 ವಾಚ್ ಗಳು, ಹೆಡ್ ಫೋನ್

ಸೇರಿ ಒಟ್ಟು 1,19,61,706 ರೂ ಮೌಲ್ಯದ ಮಾಲನ್ನು ವಶಪಡಿಸಿಕೊಳ್ಳಲಾಗಿದೆ.

ಐಶಾರಾಮಿ ಮನೆಗಳನ್ನೆ ಟಾರ್ಗೆಟ್ ಮಾಡುತ್ತಿದ್ದ ಸತ್ತಿಬಾಬು ಕಿಟಕಿ ಸರಳು ಮುರಿದು ಕಾರುಗಳ ಕೀ ತೆಗೆದುಕೊಂಡು ಕಾರು ಕಳುವು ಮಾಡುತ್ತಿದ್ದ.

ನಂತರ ಲೀಲಾಜಾಲವಾಗಿ ಮನೆ ಪ್ರವೇಶಿಸಿ ಚಿನ್ನಾಭರಣಗಳನ್ನೂ ದೋಚಿ ಪರಾರಿಯಾಗುತ್ತಿದ್ದ ಎಂಬುದು ವಿಚಾರಣೆ‌ ವೇಳೆ ಗೊತ್ತಾಗಿದೆ.

ಇತ್ತೀಚೆಗೆ ನಡೆದ ಕಾರು ಕಳುವು ಪ್ರಕರಣ ಭೇಧಿಸಲು ಹೊರಟ ವಿವಿ ಪುರಂ ಠಾಣೆ ಪೊಲೀಸರಿಗೆ ಸತ್ತಿಬಾಬು ಸಿಕ್ಕಿಬಿದ್ದಿದ್ದಾನೆ.

ಈತನ ಬಂಧನದಿಂದ ವಿವಿ ಪುರಂ ಠಾಣೆಯ ಮೂರು ಪ್ರಕರಣಗಳು ಹಾಗೂ ವಿಜಯನಗರ ಪೊಲೀಸ್ ಠಾಣೆಯ ಎರಡು ಪ್ರಕರಣಗಳು ಪತ್ತೆಯಾದಂತಾಗಿದೆ.

ಸಂಚಾರ ಮತ್ತು ಅಪರಾಧ ವಿಭಾಗದ ಡಿಸಿಪಿ ಜಾಹ್ನವಿ ರವರ ಮಾರ್ಗದರ್ಶನದಲ್ಲಿ ಹಾಗೂ ಎನ್.ಆರ್.ವಿಭಾಗದ ಎಸಿಪಿ ಅಶ್ವತ್ಥ್ ನಾರಾಯಣ್ ಉಸ್ತುವಾರಿಯಲ್ಲಿ ವಿವಿ ಪುರಂ ಠಾಣೆಯ ಇನ್ಸ್ಪೆಕ್ಟರ್ ಮೋಹನ್ ಕುಮಾರ್ ನೇತೃತ್ವದಲ್ಲಿ ಪಿಎಸ್ಸೈಗಳಾದ ಲೇಪಾಕ್ಷ,ಮೋಹನ್ ಕಾರ್ಯಾಚರಣೆ ನಡೆಸಿದರು ಎಂದು ಮಾಧ್ಯಮ ಗೋಷ್ಠಿಯಲ್ಲಿ ಕಮಿಷನರ್ ಡಾ. ರಮೇಶ್ ಬಾನೋತ್ ತಿಳಿಸಿದರು.

ಸಿಬ್ಬಂದಿ ಪ್ರಸನ್ನ,ಸುರೇಶ್,ರವಿಗೌಡ, ಚೆಲುವರಾಜು,ಸುನಿಲ್ ಕಾಂಬಳೆ, ಈರಣ್ಣ, ಉಮೇಶ್, ಹರೀಶ್, ಚಾಮುಂಡಮ್ಮ, ಕುಮಾರ್ ಅವರುಗಳು ಕಾರ್ಯಾಚರಣೆ ಯಶಸ್ವಿಗೊಳಿಸಿದ್ದಾರೆ.

ನಗರ ಪೊಲೀಸ್ ಆಯುಕ್ತ ಡಾ.ಬಿ.ರಮೇಶ್ ಹಾಗೂ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಮುತ್ತುರಾಜ್ ಪೊಲೀಸರ ಈ ಕಾರ್ಯಾಚರಣೆಯನ್ನ ಪ್ರಶಂಸಿಸಿದ್ದಾರೆ.