ಚಾಮರಾಜನಗರ: ನ್ಯಾಯಾಲಯಕ್ಕೆ ಹಾಜರುಪಡಿಸಲು ಕರೆದೊಯ್ಯುತ್ತಿದ್ದಾಗ ಪರಾರಿಯಾಗಿದ್ದ ವಿಚಾರಣಾ ಕೈದಿ ಮಹಿಳೆಯರ ಪರ್ಸ್ ಕದಿಯಲು ಹೋಗಿ ಮತ್ತೆ ಸಿಕ್ಕಿ ಬಿದ್ದಿದ್ದಾನೆ
ರುವ ಘಟನೆ ಚಾಮರಾಜನಗರ ಸಮೀಪದ ಕೌಲಂದೆ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ.
ಚಾಮರಾಜನಗರ ತಾಲೂಕಿನ ಮೇಗಲಹುಂಡಿ ಸುರೇಶ್(30) ಪೊಲೀಸರ ಕೈಗೆ ಸಿಕ್ಕಿಬಿದ್ದ ವಿಚಾರಣಾ ಕೈದಿ.
ಪರಾರಿಯಾಗಿದ್ದ ಕೆಲವೇ ಗಂಟೆಗಳಲ್ಲಿ ಆತ ಖಾಕಿ ಬಲೆಗೆ ಸಿಕ್ಕಿ ಬಿದ್ದಿದ್ದಾನೆ.
ಕೆಲ ದಿನಗಳ ಹಿಂದೆ ಚಾಮರಾಜನಗರ ಗ್ರಾಮಾಂತರ ಠಾಣೆ ಪೊಲೀಸರು ಸುರೇಶ್ ನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು.
ತಮಿಳುನಾಡು ಸತ್ಯಮಂಗಲಂನ ನ್ಯಾಯಾಲಯಕ್ಕೆ ಶುಕ್ರವಾರ ವಿಚಾರಣೆಗೆ ಕರೆದೊಯ್ಯುತ್ತಿದ್ದಾಗ ಹಾಸನೂರಿನ ಹೋಟೆಲ್ ಬಳಿ ಪೊಲೀಸರಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದ.
ಈತ ಯಾರನ್ನೋ ಕಾಡಿ ಬೇಡಿ ಚಾಮರಾಜನಗರಕ್ಕೆ ಬಂದಿದ್ದಾನೆ.
ಚಾಮರಾಜನಗರದಿಂದ ನಂಜನಗೂಡಿಗೆ ರಾತ್ರಿ ರೈಲಿನಲ್ಲಿ ಹೋಗಿ ಶನಿವಾರ ಅಲ್ಲಿಂದ ವಾಪಸ್ ಚಾಮರಾಜನಗರಕ್ಕೆ ಬರುವಾಗ ಮಹಿಳಾ ಬೋಗಿಯಲ್ಲಿ ಪರ್ಸ್ ಕದಿಯಲು ಯತ್ನಿಸಿದ್ದಾನೆ.
ಆಗ ಸಹ ಪ್ರಯಾಣಿಕರು ಈತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಒಟ್ಟಾರೆ ಪರಾರಿಯಾಗಿದ್ದ ಕೈದಿ ಮತ್ತೆ ಬಂಧನಕ್ಕೆ ಒಳಗಾಗಿದ್ದಾನೆ.
ಚಾಮರಾಜನಗರ ಗ್ರಾಮಾಂತರ ಠಾಣಾ ಪೊಲೀಸರು ಸುರೇಶ್‌ನ ಆರೋಗ್ಯ ತಪಾಸಣೆಗೊಳಿಸಿ ಸತ್ಯಮಂಗಲಂ ನ್ಯಾಯಾಲಯ ವಶಕ್ಕೆ ಕೊಡಲು ತೆರಳಿದ್ದಾರೆ.
ಈ ಆರೋಪಿ ವಿರುದ್ಧ ದೇವಾಲಯ ಹುಂಡಿ ಕಳವು, ದರೋಡೆ ಸೇರಿದಂತೆ ಚಾಮರಾಜನಗರ ಗ್ರಾಮಾಂತರ ಠಾಣೆ, ಪೂರ್ವ ಠಾಣೆ ವ್ಯಾಪ್ತಿಯಲ್ಲಿ ಹಲವು ಪ್ರಕರಣಗಳು ದಾಖಲಾಗಿವೆ.
ಅದೇ ರೀತಿ, ತಮಿಳುನಾಡಿನ ಈರೋಡ್ ಜಿಲ್ಲಾ ವ್ಯಾಪ್ತಿಯಲ್ಲೂ ಈತನ ವಿರುದ್ಧ ಕಳವು ಪ್ರಕರಣಗಳು ದಾಖಲಾಗಿವೆ.
ಇಬ್ಬರು ಪೊಲೀಸರಿಗೆ ಅಮಾನತು ಶಿಕ್ಷೆ:
ವಿಚಾರಣಾ ಕೈದಿ ತಪ್ಪಿಸಿಕೊಂಡಿದ್ದರ ಹಿನ್ನೆಲೆಯಲ್ಲಿ ಮೀಸಲು ಪಡೆಯ ವೀರಭದ್ರ ಹಾಗೂ ಶಿವಾಜಿ ಎಂಬವರನ್ನು ಅಮಾನತುಗೊಳಿಸಿ ಚಾಮರಾಜನಗರ ಎಸ್ಪಿ ಆದೇಶ ಹೊರಡಿಸಿದ್ದಾರೆ.
ಕರ್ತವ್ಯಲೋಪ ಹಿನ್ನೆಲೆ ಇಬ್ಬರು ಪೊಲೀಸ್ ಸಿಬ್ಬಂದಿಯನ್ನು ಅಮಾನತುಗೊಳಿಸಿ ಇಲಾಖಾ ವಿಚಾರಣೆಗೆ ಎಸ್ಪಿ ಸೂಚಿಸಿದ್ದಾರೆ.