ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ; ಬಾಲಕಿ ಗರ್ಭಿಣಿ: ಶಿಕ್ಷಕ ಅರೆಸ್ಟ್

ಕೋಲಾರ: ಇತ್ತೀಚೆಗೆ ತಿದ್ದಿ ಬುದ್ದಿ ಹೇಳಬೇಕಾದ ಶಿಕ್ಷಕರೇ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ ನಡೆಸುವಂತಹ ಕೃತ್ಯಗಳು ಹೆಚ್ಚು ಕೇಳಿಬರುತ್ತಿದೆ.ಇದು ನಿಜಕ್ಕೂ ಆತಂಕಕಾರಿ ಬೆಳವಣಿಗೆ.

ಮೊನ್ನೆಯಷ್ಟೇ ಬೆಂಗಳೂರಿನಲ್ಲಿ ಕಾಮುಕ ಪ್ರಾಂಶುಪಾಲ ಆರನೆ ತರಗತಿ ವಿದ್ಯಾರ್ಥಿನಿಗೆ ಲೈಂಗಿಕ ದೌರ್ಜನ್ಯ ನಡೆಸಿದ್ದ. ಆತನನ್ನು ಪೊಕ್ಸೊ ಕಾಯ್ದೆಯಡಿ ಬಂಧಿಸಲಾಗಿದೆ.

ಅದು ಇನ್ನೂ ಸುದ್ದಿಯಾಗಿರುವಾಗಲೇ ಇದೀಗ ಕೋಲಾರದಲ್ಲೂ ಇಂತಹದೇ ನೀಚ ಕೃತ್ಯ ವರದಿಯಾಗಿದೆ.

ಕೋಲಾರ ಜಿಲ್ಲೆ, ಶ್ರೀನಿವಾಸಪುರ ತಾಲೂಕಿನ ಅಡ್ಡಗಲ್ ಖಾಸಗಿ ಶಾಲೆಯಲ್ಲಿ ಶಿಕ್ಷಕನೊಬ್ಬ ವಿದ್ಯಾರ್ಥಿನಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದು ಆಕೆ ಈಗ ಗರ್ಭಿಣಿ.

ಆ ಬಾಲಕಿಗೆ ಇನ್ನೂ ಆಟವಾಡುವ ವಯಸ್ಸು. ಆದರೆ ಕಾಮುಕ ಶಿಕ್ಷಕ ಇಂತಹ ಮುಗ್ಧ ಮನಸ್ಸಿನ ಹೂವನ್ನು ನಶಿಸಿಬಿಟ್ಟಿದ್ದಾನೆ.

ಆ ಬಾಲಕಿಯ ಹೊಟ್ಟೆಯಲ್ಲೊಂದು ಪುಟ್ಟ ಕಂದ ಇದೆ ಎಂದರೆ ಪೋಷಕರು ಹೇಗೆ ಅರಗಿಸಿಕೊಳ್ಳಬೇಕು.

ಖಾಸಗಿ ಶಾಲೆಯ ಶಿವಕುಮಾರ್ ಎಂಬ ಕಾಮುಕ ಶಿಕ್ಷಕನನ್ನು ಗೌನಿಪಲ್ಲಿ ಪೊಲೀಸರು ಪೋಕ್ಸೋ ಕಾಯ್ದೆಯಡಿ ಬಂಧಿಸಿದ್ದಾರೆ.

ಇದೇ ಶಾಲೆಯ 8ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿಯ ಮೇಲೆ ಕಳೆದ 8-9 ತಿಂಗಳಿಂದ ಶಿಕ್ಷಕ ಅತ್ಯಾಚಾರ ನಡೆಸಿದ್ದಾನೆ ಎಂದು ವಿದ್ಯಾರ್ಥಿಯ ಕುಟುಂಬದವರು ದೂರಿದ್ದಾರೆ.

ಕಳೆದ ಕೆಲ ದಿನಗಳಿಂದ ಬಾಲಕಿಗೆ ತೀವ್ರ ಹೊಟ್ಟೆ ನೋವು ಕಾಡುತ್ತಿದ್ದರಿಂದ ತಾಯಿಗೆ ಹೇಳಿದ್ದಾಳೆ, ಹಾಗಾಗಿ ಶನಿವಾರ ಸಂಜೆ ಮಗಳನ್ನು ಮನೆಯವರು ಸರ್ಕಾರಿ ಆಸ್ಪತ್ರೆಗೆ ಕರೆತಂದು ತೋರಿಸಿದ್ದಾರೆ.

ಆಗ ವೈದ್ಯರು ಬಾಲಕಿ ಐದು ತಿಂಗಳ ಗರ್ಭಿಣಿ ಎಂದು ಸ್ಪಷ್ಟಪಡಿಸಿದ್ದಾರೆ.