ಮೈಸೂರು: ದಸರಾ ಮಹೋತ್ಸವದಲ್ಲಿ ಭಾಗವಹಿಸಲು ಮೊದಲ ಹಂತದಲ್ಲಿ ಕ್ಯಾಪ್ಟನ್ ಅಭಿಮನ್ಯು ನೇತೃತ್ವದ 9 ಆನೆಗಳ ಪಟ್ಟಿಯನ್ನು ಮೈಸೂರು ವನ್ಯಜೀವಿ ವಿಭಾಗ ಬಿಡುಗಡೆ ಮಾಡಿದೆ.
ಮೈಸೂರು ದಸರಾ ಮಹೋತ್ಸವದ ಗಜಪಯಣ ಸೆ.1ರಂದು ಪ್ರಾರಂಭವಾಲಿದ್ದು, ನಾಗರಹೊಳೆಯ ಹೆಬ್ಬಾಗಿಲು ವೀರನ ಹೊಸಳ್ಳಿಯಲ್ಲಿ ಚಾಲನೆ ಸಿಗಲಿದೆ.
ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಜಿಲ್ಲಾಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರ ನೇತೃತ್ವದಲ್ಲಿ ಇತ್ತೀಚೆಗೆ ಬೆಂಗಳೂರಿನಲ್ಲಿ ದಸರಾ ಉನ್ನತಮಟ್ಟದ ಸಭೆ ನಡೆಸಿ ಅದ್ದೂರಿ ದಸರಾ ಮಾಡುವ ಬಗ್ಗೆ ನಿರ್ಧರಿಸಲಾಗಿದೆ.
ಮೈಸೂರು ಜಿಲ್ಲಾಡಳಿತ ದಸರಾ ಮಹೋತ್ಸವಕ್ಕೆ ಸಿದ್ಧತೆ ಪ್ರಾರಂಭಿಸಿದೆ.
ಮೊದಲ ಹಂತದ ಆನೆಗಳು: ನಾಗರಹೊಳೆಯ ಮತ್ತಿಗೋಡು ಆನೆ ಶಿಬಿರದಿಂದ ಅಭಿಮನ್ಯು, ಭೀಮ, ಮಹೇಂದ್ರ, ಬಳ್ಳೆ ಶಿಬಿರದಿಂದ ಅರ್ಜುನ, ದುಬಾರೆ ಶಿಬಿರದಿಂದ ಧನಂಜಯ, ವಿಜಯ, ಗೋಪಿ, ರಾಮಾಪುರ ಶಿಬಿರದಿಂದ ಪಾರ್ಥಸಾರಥಿ, ಭೀಮನಕಟ್ಟೆ ಶಿಬಿರದಿಂದ ವರಲಕ್ಷ್ಮಿ ಆನೆಗಳು ಆಗಮಿಸಲಿವೆ.
ಕ್ಯಾಪ್ಟನ್ ಅಭಿಮನ್ಯು ಜತೆ ಹಿರಿಯ, ಕಿರಿಯ ಹಾಗೂ ಎರಡು ಹೆಣ್ಣಾನೆಗಳು ಭಾಗಿಯಾಗಲಿವೆ.
ಎರಡನೇ ಹಂತದಲ್ಲಿ ಮತ್ತೆ ಐದು ಆನೆಗಳು ಬರಲಿವೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಮೈಸೂರು ವನ್ಯಜೀವಿ ವಿಭಾಗದ ಡಿಸಿಎಫ್ ಸೌರಭ್ ಕುಮಾರ್ ಅವರು ವಿವಿಧ ಆನೆ ಶಿಬಿರಗಳಿಗೆ ಭೇಟಿ ನೀಡಿ ತಪಾಸಣೆ ನಡೆಸಿ ದಸರಾ ಆನೆಗಳ ವಿವರಗಳನ್ನು ಕಲೆ ಹಾಕಿದ್ದರು.
ಇದೀಗ ಉನ್ನತ ಅಧಿಕಾರಿಗಳು 9 ಆನೆಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ.