ವರ್ಲಿ ಕಲೆ ಕೈಚಳಕದಿಂದ ಶಿಕ್ಷಣ ಇಲಾಖೆಗೆ ಕಲಾ ಮೆರಗು: ಶಿಕ್ಷಕರ ದಿನಾಚರಣೆಗೆ ಕೊಡುಗೆ

ಹಾವೇರಿ: ಹಾವೇರಿಯ ಜಿಲ್ಲಾಡಳಿತ ಭವನದ ಮಹಡಿಯ ಸಾರ್ವಜನಿಕ ಶಿಕ್ಷಣ ಇಲಾಖೆಯ ಕಟ್ಟಡ ಆಧುನಿಕ ರೂಪಬದಲಾಯಿಸಿ ಶಿಕ್ಷಕರ ದಿನಾಚರಣೆಯ ಸಂದರ್ಭದಲ್ಲಿ ಸಾಂಪ್ರದಾಯಿಕ ವರ್ಲಿ ಕಲೆಯ ಚಿತ್ತಾರಗಳಿಂದ ಕಂಗೊಳಿಸುತ್ತಿದೆ.
ಮಾಸಿದ ಸುಣ್ಣ-ಬಣ್ಣಗಳ ಬದಲಿಗೆ ವರ್ಲಿಕೆಯ ರಂಗುಮೆತ್ತಿಕೊಂಡಿದೆ.
ಶೈಕ್ಷಣಿಕ ಯೋಜನೆಗಳ ಮಾಹಿತಿಯ ಪ್ಲಾಸ್ಟಿಕ್ ಪ್ಲೆಕ್ಸ್ ಫಲಕಗಳ ಬದಲಿಗೆ ಪರಿಸರ ಸ್ನೇಹಿ ಗೋಡೆ ಬರಹಗಳ ಮಾಹಿತಿ ಆಕರ್ಷಣೀಯ ಗೋಡೆ ಬರಹಗಳ ಚಿತ್ತಾರ ವಿದ್ಯಾರ್ಥಿಗಳು, ಶಿಕ್ಷಕರು, ಅಧಿಕಾರಿಗಳ ಮನ ಸೆಳೆಯುತ್ತಿವೆ.
ಕಳೆದ ಒಂದು ತಿಂಗಳಿನಿಂದ 25 ಜನ ಶಿಕ್ಷಕರು ಕಾರ್ಯನಿರ್ವಹಿಸಿ ಜಿಲ್ಲಾಡಳಿತ ಭವನದಲ್ಲಿರುವ 2ನೇ ಮಹಡಿಯಲ್ಲಿರುವ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರ ಕಚೇರಿಯ ಹೊರ ಆವರಣದ ಗೋಡೆಗಳಿಗೆ ವರ್ಲಿ ಕಲೆಯ ಪೇಟಿಂಗ್ ಮಾಡಿದ್ದಾರೆ.
ಕಲಾ ಶಿಕ್ಷಕರ ಆಸಕ್ತಿಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು ಬೆನ್ನೆಲುಬಾಗಿ ನಿಂತು ಸುಣ್ಣದಿಂದ ಢಾಳಾಗಿ ಕಾಣುತ್ತಿರುವ ಗೋಡೆಗಳಿಗೆ ಅಲಂಕಾರದ ಜೊತೆಗೆ ಶೈಕ್ಷಣಿಕ ಚಟುವಟಿಕೆಗಳ ಕುರಿತಂತೆ ಸಾರ್ವಜನಿಕರ ಗಮನ ಸೆಳೆಯುವ ನಿಟ್ಟಿನಲ್ಲಿ ಕಲಾ ಮಾಧ್ಯಮದಲ್ಲಿ ಮಾಹಿತಿಯ ಹೂರಣವನ್ನು ಆಕರ್ಷಕವಾಗಿ ಜನರಿಗೆ ತಲುಪಿಸಲು ಯಶಸ್ವಿಯಾಗಿದ್ದಾರೆ.
ಸರ್ಕಾರಿ ಹಾಗೂ ಖಾಸಗಿ ಶಾಲೆಗಳಲಿ ಕಲಾ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರು ತಮ್ಮ ಕೈಚಳಕದಿಂದ ಗೋಡೆಯ ಕೆಳಭಾಗದಲ್ಲಿ ವರ್ಲಿ ಕಲೆಯ ಚಿತ್ರಗಳು ಮೇಲ್ಭಾಗದಲ್ಲಿ ಶಿಕ್ಷಣ ಇಲಾಖೆಯ ಯೋಜನೆಗಳಾದ ಉಚಿತ ಪಠ್ಯಪುಸ್ತಕ ವಿತರಣೆ, ಉಚಿತ ಸೈಕಲ್ ವಿತರಣೆ, ಶೂ ಸಾಕ್ಸ್ ವಿತರಣೆ, ಸಮವಸ್ತ್ರ ವಿತರಣೆ, ಅಕ್ಷರದಾಸೋಹ, ಕ್ಷೀರಭಾಗ್ಯ, ವಿಕಲಚೇತನ ಮಕ್ಕಳಿಗೆ ವ್ಯಾಯಾಮ, ವಿಟಾಮಿನ್ ಮಾತ್ರೆಗಳ ವಿತರಣೆ, ಪರಿಸರ ಜಾಗೃತಿ, ವಿಜ್ಞಾನ ವಿವಿಧ ಮಾದರಿಗಳ ಪ್ರದರ್ಶನ ಹಾಗೂ ಅಟಲ್ ಟೆಂಕರಿಂಗ್ ಪ್ರಯೋಗಾಲಯ, ಮಕ್ಕಳ ಗುಂಪು ಅಧ್ಯಯನ, ವಿದ್ಯಾರ್ಥಿಗಳಿಗೆ ಉಚಿತ ಕಂಪ್ಯೂಟರ್ ಕೊಡುಗೆ, ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಒಳಗೊಂಡಂತೆ ಹಲವು ಶೈಕ್ಷಣಿಕ ಯೋಜನೆಗಳು ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸ್ಫೂರ್ತಿ ದಾಯಕ ಚಿತ್ರಗಳು ವರ್ಣಗಳಲ್ಲಿ ಮೈದಾಳಿವೆ.
ಈ ಚಿತ್ರಗಳಿಗೆ ವರ್ಲಿಯ ಚಿತ್ರಗಳು ಇಂಬು ನೀಡಿ ಆಕರ್ಷಣೆಗೊಳಿಸಿದೆ.
ಜಿಲ್ಲೆಯಲ್ಲಿ ಅತ್ಯಂತ ಪ್ರತಿಭಾನ್ವಿತ ಕಲಾ ಶಿಕ್ಷಕರು ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
ಈಗಾಗಲೇ ಜಿಲ್ಲೆಯ ಹಲವು ಶಾಲೆಗಳಲ್ಲಿ ಪೇಟಿಂಗ್ ಮಾಡುವುದರ ಮೂಲಕ ತಮ್ಮ ಪ್ರತಿಭೆಯನ್ನು ತೋರಿಸಿದ್ದಾರೆ.
ಈ ಶಿಕ್ಷಕರಿಗೆ ಮತ್ತಷ್ಟು ಪ್ರೇರಣೆ ನೀಡುವ ನಿಟ್ಟಿನಲ್ಲಿ ಜಿಲ್ಲಾಡಳಿತ ಭವನದ ಸಾರ್ವಜನಿಕ ಶಿಕ್ಷಣ ಇಲಾಖೆ ಕಚೇರಿಯ ಹೊರಗಡೆ ಗೋಡೆಯ ಮೇಲೆ ವರ್ಲಿ ಕಲೆಯ ಚಿತ್ರಗಳನ್ನು ಬಿಡಿಸುವುದರ ಮೂಲಕ ಕಚೇರಿಗೆ ಸುಂದರ ವಾತಾವರಣ ನಿರ್ಮಿಸಿದ್ದಾರೆ. ಇದರಿಂದ ಕಚೇರಿಗೆ ಭೇಟಿ ನೀಡುವವರಿಗೆ ಖುಷಿ ನೀಡಿದೆ. ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ ಎಂದು ಡಿ.ಡಿ.ಪಿ.ಐ ಅಂದಾನೆಪ್ಪ ವಡಗೇರಿ ಅವರು ಮಾಹಿತಿ ನೀಡಿದರು.
ಜಿಲ್ಲೆಯ ಎಲ್ಲ ಶಾಲೆಗಳಲ್ಲೂ ವರ್ಲಿ ಕಲೆಯ ಮೂಲಕ ಶೈಕ್ಷಣಿಕ ಜಾಗೃತಿ ಸಂದೇಶಗಳ ಜೊತೆಗೆ ಶಾಲಾ ಗೋಡೆಗಳಿಗೂ ಚಿತ್ತಾರ ಬಿಡಿಸುವ ಮೂಲಕ ಮಕ್ಕಳಲ್ಲಿ ಪಾರಂಪರಿಕ ಕಲೆಯ ಬಗ್ಗೆ ಆಸಕ್ತಿ ಮೂಡಿಸಲು ಉದ್ದೇಶಿಸಲಾಗಿದೆ. ಆಸಕ್ತಿ ತೋರುವ ಸರ್ಕಾರಿ ಕಚೇರಿ ಕಟ್ಟಡಗಳಿಗೂ ವರ್ಲಿ ಕಲೆಯ ಚಿತ್ತಾರಕ್ಕೆ ಚಿತ್ರಕಲಾ ಶಿಕ್ಷಕರ ತಂಡ ಸಿದ್ಧವಿದೆ. ಪ್ಲೆಕ್ಸ್, ಪ್ಲಾಸ್ಟಿಕ್ ಫಲಕಗಳ ಬದಲಿಗೆ ವರ್ಲಿ ಕಲೆಯ ಚಿತ್ರಗಳಿಗೆ ಅವಕಾಶ ಕಲ್ಪಿಸಿದರೆ ಪರಿಸರ ರಕ್ಷಣೆಯ ಜೊತೆಗೆ ಪಾರಂಪರಿಕ ಕಲೆಗಳೀಗೆ, ಕಲಾವಿದರಿಗೆ ಪೆÇ್ರೀತ್ಸಾಹ ದೊರಕುತ್ತದೆ ಎಂದು ವೀಕ್ಷಕರ ಅಭಿಪ್ರಾಯ.