ಬೆಂಗಳೂರು: ಇವರು ಅಶ್ವಥ್ ನಾರಾಯಣ ಅಲ್ಲ. ನವರಂಗಿ ನಾರಾಯಣ. ಕಳ್ಳರನ್ನು ರಕ್ಷಣೆ ಮಾಡುವಲ್ಲಿ ಇವರು ಡಾಕ್ಟರೇಟ್ ಮಾಡಿದ್ದಾರೆ ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಅವರು ವಾಗ್ದಾಳಿ ನಡೆಸಿದರು.
ಸೋಮವಾರ ಡಿ ಕೆ ಶಿವಕುಮಾರ್ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ಅಶ್ವಥ್ ನಾರಾಯಣ್ ಅವರಿಗೆ ಪ್ರಾಮಾಣಿಕ ಗುತ್ತಿಗೆದಾರರ ರಕ್ಷಣೆ ಬಗ್ಗೆ ಚಿಂತೆ ಇಲ್ಲ. ಇದ್ದಿದ್ದರೆ ಅವರ ಕಾಲದಲ್ಲೇ ಬಿಲ್ ಪಾವತಿ ಮಾಡುತ್ತಿದ್ದರು. ಈಗ ತಮ್ಮದೇ ಆದ ಕೆಲವು ಬಿಜೆಪಿ ಗುತ್ತಿಗೆದಾರರನ್ನು ಎತ್ತಿ ಕಟ್ಟಿ ನಕಲಿ ಗುತ್ತಿಗೆದಾರರು, ಬೇನಾಮಿ ಕಳ್ಳರ ರಕ್ಷಣೆಗೆ ನಿಂತಿದ್ದಾರೆಂದು ಡಿಕೆಶಿ ಟೀಕಿಸಿದರು.
ಅಶ್ವಥ್ ನಾರಾಯಣ ಕೃಪಾಪೋಷಿತ ನಾಟಕ ಮಂಡಳಿ ಆಟ ಜಾಸ್ತಿ ದಿನ ನಡೆಯಲ್ಲ. ಅವರು ಎಲ್ಲಿಗೆ ಬೇಕಾದರೂ ಹೋಗಲಿ. ಏನು ಬೇಕಾದರೂ ಮಾಡಲಿ. ಸದ್ಯದಲ್ಲೇ ದಾಖಲೆ ಸಮೇತ ಬಣ್ಣ ಬಯಲು ಮಾಡುತ್ತೇನೆ ಎಂದರು
ರಾಮನಗರ ಕ್ಲೀನ್ ಮಾಡುತ್ತೇನೆ ಎಂದು ಬಂದವರು, ಜಿಲ್ಲೆಯಲ್ಲಿ ಅವರ ಪಕ್ಷವನ್ನೇ ಕ್ಲೀನ್ ಮಾಡಿದರು. ಅಶ್ವತ್ಥ್ ನಾರಾಯಣ ಅವರು ತಮ್ಮ ಇಲಾಖೆಯಲ್ಲಿ ಹಾಗೂ ಬೆಂಗಳೂರಿನಲ್ಲಿ ಏನೆಲ್ಲಾ ಮಾಡಿದ್ದಾರೆ ಎಂಬ ವಿಚಾರವನ್ನು ಬಿಚ್ಚಿಟ್ಟಿಲ್ಲ. ಈ ಬಗ್ಗೆ ನಾನು ಈಗ ಮಾತನಾಡುವುದಿಲ್ಲ. ಸಮಯ ಬಂದಾಗ ಅವರ ಎಲ್ಲಾ ಅಕ್ರಮಗಳನ್ನು ಬಿಚ್ಚಿಡುತ್ತೇನೆ ಎಂದವರು ಹೇಳಿದರು.
ನಾನು ಈ ವಿಚಾರವಾಗಿ ಮೊನ್ನೆಯೇ ಮಾತನಾಡಬೇಕಿತ್ತು. ಆದರೆ ಬಿಬಿಎಂಪಿ ಗುಣಮಟ್ಟ ಪರೀಕ್ಷಾ ಪ್ರಯೋಗಾಲಯದಲ್ಲಿ ಅಗ್ನಿ ಅವಘಡ ಸಂಭವಿಸಿತು. ಇಂದು ಪಕ್ಷದ ಸಭೆ ಇದೆ. ನಾಳೆ ಸ್ವಾತಂತ್ರ ದಿನಾಚರಣೆ ಇದೆ. ಹೀಗಾಗಿ ಈಗ ಮಾತನಾಡುವುದಿಲ್ಲ. ಮುಂದಿನ ದಿನಗಳಲ್ಲಿ ಮಾತನಾಡುತ್ತೇನೆಂದು ಡಿಕೆ ಶಿವಕುಮಾರ್ ಹೇಳಿದರು.
ಅಜ್ಜಯ್ಯನ ಮಠದಲ್ಲಿ ಪ್ರಮಾಣ ಮಾಡುವ ವಿಚಾರವಾಗಿ ಸಿ.ಟಿ ರವಿ ಅವರ ಹೇಳಿಕೆ ವಿಚಾರವಾಗಿ ಕೇಳಿದ ಪ್ರಶ್ನೆಗೆ, ಸಿ.ಟಿ. ರವಿಗೆ ಬುದ್ಧಿ ಭ್ರಮಣೆ ಆಗಿದೆ. ಅವರಿಗೆ ಈಗ ಬೇಕಿರೋದು ಉತ್ತಮ ಚಿಕಿತ್ಸೆ. ಅದನ್ನು ಕೊಡಿಸೋಣ ಎಂದು ಡಿಕೆಶಿ ಹೇಳಿದರು.