ಮೈಸೂರು: ಬ್ರಿಟಿಷ್ ಸರ್ವಾಧಿಕಾರದ ಆಳ್ವಿಕೆಯಿಂದ ಮುಕ್ತಗೊಂಡು ಸ್ವತಂತ್ರ ರಾಷ್ಟ್ರದ ಕನಸು ನನಸಾದ ಆಗಸ್ಟ್ 15 ಭಾರತೀಯರೆಲ್ಲರಿಗೂ ಪವಿತ್ರವಾದ ದಿನ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಸಿಎಂ. ಸಿ. ಮಹದೇವಪ್ಪ ಹೇಳಿದರು.
ಮೈಸೂರಿನ ಬನ್ನಿಮಂಟಪ ಕವಾಯತು ಮೈದಾನದಲ್ಲಿ ಸಚಿವರು ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ನೇತೃತ್ವದಲ್ಲಿ ನಡೆದಅಹಿಂಸಾತ್ಮಕ ಹೋರಾಟ ವಿಶ್ವದ ಇತಿಹಾಸದಲ್ಲೇ ಮಾದರಿಯಾಗಿದೆ ಎಂದು ತಿಳಿಸಿದರು.
ಯಾವುದೇ ರಕ್ತಪಾತವಿಲ್ಲದೆ, ಮದ್ದುಗುಂಡುಗಳ ಕಾಳಗವಿಲ್ಲದೆ ಸತ್ಯ, ಅಹಿಂಸೆ, ಸತ್ಯಾಗ್ರಹದಂತ
ಅಹಿಂಸಾತ್ಮಕ ಅಸ್ತ್ರಗಳ ಮೂಲಕ ಬ್ರಿಟಿಷರನ್ನು ದೇಶ ಬಿಟ್ಟು ಹೋಗುವಂತೆ ಮಾಡಿದ ವಿನೂತನ ಹೋರಾಟವಿದು ಎಂದು ಬಣ್ಣಿಸಿದರು.
ಸ್ವಾತಂತ್ರ‍್ಯಕ್ಕಾಗಿ ಹೋರಾಟ, ತ್ಯಾಗ, ಬಲಿದಾನಗಳನ್ನು ಮಾಡಿದ ಹಿರಿಯರನ್ನು ಕೃತಜ್ಞತೆಯಿಂದ ನೆನಪು
ಮಾಡಿಕೊಳ್ಳುವ ನಮ್ಮೆಲ್ಲರ ಕರ್ತವ್ಯದ ದಿನ ಇದು.
ನಮ್ಮದೇಶ ಪ್ರೇಮ ಸ್ವಾತಂತ್ರ‍್ಯ ದಿನಾಚರಣೆಯ ಸಂಭ್ರಮಕ್ಕಷ್ಟೇಸೀಮಿತಗೊಳ್ಳಬಾರದು,ದೇಶ ಪ್ರೇಮ ನಮ್ಮಲ್ಲಿ ಪ್ರತಿದಿನ ಪ್ರತಿಕ್ಷಣ ರಕ್ತಗತವಾಗಿರಬೇಕು ಎಂದು ಹೇಳಿದರು.
ಭಾಷೆ ಧರ್ಮ, ಸಂಸ್ಕೃತಿಗಳನ್ನು ಮೀರಿ ಮನುಷ್ಯರೆಲ್ಲ ಒಂದೇ ಎಂಬ ಭಾವದಲ್ಲಿ ನಮ್ಮನ್ನು ಬೆಸೆಯಬೇಕು.
ನಮಗೆ ಸ್ವಾತಂತ್ರ್ಯತಂದು ಕೊಡಲು ಹೋರಾಡಿದ ಮಹಾತ್ಮಗಾಂಧೀಜಿ, ಜವಾಹರ್ ಲಾಲ್ ನೆಹರು,
ಸರ್ದಾರ್ ವಲ್ಲಭಾಯಿ ಪಟೇಲ್, ಗೋಪಾಲಕೃಷ್ಣ ಗೋಖಲೆ, ಲೋಕಮಾನ್ಯ ತಿಲಕ್, ನೇತಾಜಿ
ಸುಭಾಷ್‌ಚಂದ್ರಬೋಸ್, ಮೌಲಾನಾ ಅಬ್ದುಲ್ ಕಲಾಂ ಆಜಾದ್, ಡಾ. ಬಿ.ಆರ್. ಅಂಬೇಡ್ಕರ್ ಸೇರಿದಂತೆ
ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗಿಯಾದ ಸಮಸ್ತರಿಗೂ ಈ ಸಂದರ್ಭದಲ್ಲಿ ಸಾಷ್ಟಾಂಗ ನಮಸ್ಕಾರಗಳನ್ನು
ಸಲ್ಲಿಸುತ್ತೇನೆ ಎಂದು ಮಹದೇವಪ್ಪ ತಿಳಿಸಿದರು.
ನಮ್ಮದು ಜನಪರ ಸರ್ಕಾರ. ನಾಡಿನ ಜನತೆಯ ಶ್ರೇಯೋಭಿವೃದ್ಧಿಯೇ ನಮ್ಮ ಆದ್ಯ ಕರ್ತವ್ಯ. ಚುನಾವಣಾಪ್ರಣಾಳಿಕೆಯಲ್ಲಿ ನಾಡಿನ ಜನತೆಗೆ ನೀಡಿದ ವಚನದಂತೆ ಸಮೃದ್ಧ ಕರ್ನಾಟಕವನ್ನು ನಿರ್ಮಿಸಲು ಬದ್ಧರಾಗಿದ್ದೇವೆ ಎಂದು ಹೇಳಿದರು.
ಈಗಾಗಲೇ ಶಕ್ತಿ ಯೋಜನೆ, ಅನ್ನ ಭಾಗ್ಯ ಹಾಗೂ ಗೃಹಜ್ಯೋತಿ ಯೋಜನೆಗಳು ಜಾರಿಯಾಗಿದೆ.
ಗೃಹಲಕ್ಷ್ಮೀ ಯೋಜನೆಗೆ ನೋಂದಣಿ ಪ್ರಕ್ರಿಯೆ ನಡೆಯುತ್ತಿದೆ, ನಾವು ಭರವಸೆ ನೀಡಿದ್ದ ಐದು
ಗ್ಯಾರಂಟಿಗಳಲ್ಲಿ ನಾಲ್ಕು ಗ್ಯಾರಂಟಿಗಳಿಗೆ ಚಾಲನೆ ದೊರಕಿದಂತಾಗಿದೆ ಎಂದು ಸಚಿವರು ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯನವರು 2023-24ನೇ ಸಾಲಿನ ರಾಜ್ಯ ಬಜೆಟ್‌ನಲ್ಲಿ ತವರು ಜಿಲ್ಲೆ ಮೈಸೂರಿಗೆ
ಭರ್ಜರಿ ಕೊಡುಗೆ ನೀಡಿದ್ದಾರೆ.
ವಿಶೇಷ ಕಂಪು, ರುಚಿ ಮತ್ತು ಸೊಗಡಿನಿಂದ ಜನಮನದಲ್ಲಿ ನೆಲೆಸಿರುವ ಮೈಸೂರು ಮಲ್ಲಿಗೆ,
ನಂಜನಗೂಡು ರಸಬಾಳೆ ಹಾಗೂ ಮೈಸೂರು ವೀಳ್ಯದೆಲೆಗಳು ವಿಶೇಷ ಮಾನ್ಯತೆ ಪಡೆದಿವೆ. ಇವುಗಳ ಉತ್ಪಾದನೆ, ಸಂಶೋಧನೆ, ಮಾರುಕಟ್ಟೆ ಮತ್ತು ಬ್ರ‍್ಯಾಂಡಿಂಗ್ ಉತ್ತೇಜಿಸಲು ನೂತನ ಕಾರ್ಯಕ್ರಮಗಳನ್ನು ರೂಪಿಸುವುದಾಗಿ
ಘೋಷಣೆ ಮಾಡಿದ್ದಾರೆ
ಮೈಸೂರು ಬಿತ್ತನೆ ಪ್ರದೇಶದಲ್ಲಿ ಮೂಲಭೂತ ಸೌಕರ್ಯ ಬಲಪಡಿಸಲಾಗುವುದು,ಇದರಿಂದ ಉತ್ತಮ ಗುಣಮಟ್ಟದ ಮಿಶ್ರತಳಿ ಕಚ್ಚಾ ರೇಷ್ಮೆಯನ್ನು ಉತ್ಪಾದಿಸಲು ಅನುಕೂಲವಾಗಲಿದೆ
ಎಂದು ತಿಳಿಸಿದರು.
ಜೊತೆಗೆ, ಮೈಸೂರು ರಾಜ್ಯ ಕರ್ನಾಟಕ ಎಂದು ಮರುನಾಮಕರಣವಾಗಿ 50 ವರ್ಷ ಪೂರ್ಣಗೊಳ್ಳಲಿರುವ ಹಿನ್ನೆಲೆಯಲ್ಲಿ ವಿಶೇಷ ಕಾರ್ಯಕ್ರಮಗಳ ಆಯೋಜನೆ ಮಾಡಲಾಗುತ್ತಿದೆ ಎಂದು ಹೇಳಿದರು.
ಮೈಸೂರಿನ ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರ ಆವರಣವನ್ನು ಮೇಲ್ದರ್ಜೆಗೇರಿಸಲು ಕ್ರಮ,
ಮೈಸೂರಿನ ಚಾಮುಂಡಿ ವಿಹಾರ ಕ್ರೀಡಾಂಗಣದ ಬಳಿ ತಂತ್ರಜ್ಞಾನದೊಂದಿಗೆ ಅಂತಾರಾಷ್ಟ್ರೀಯ ಗುಣಮಟ್ಟದ
ಕರ್ನಾಟಕ ಪುರಾತತ್ವ ವಸ್ತುಸಂಗ್ರಹಾಲಯ ಮತ್ತು ಕಲಾಗ್ಯಾಲರಿ ನಿರ್ಮಾಣ ಮಾಡಲಾಗುವುದು ಎಂದು ಎಚ್.ಸಿ.ಮಹದೇವಪ್ಪ ತಿಳಿಸಿದರು.