ಮೈಸೂರಿನಲ್ಲಿ ಬ್ರಾಹ್ಮಣ ಸಂಘಟನೆ- ಅರ್ಚಕರ ಸಂಘದಿಂದ ವಿಕ್ರಂ ಲ್ಯಾಂಡರ್ ಯಶಸ್ವಿಗೆ ಸರ್ವಸಿದ್ಧಿ ಯಾಗ

ಮೈಸೂರು: ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘಟನೆ ಹಾಗೂ ಅರ್ಚಕರ ಸಂಘದ ವತಿಯಿಂದ ಚಂದ್ರನ ಕಕ್ಷೆಗೆ ತೆರಳಿರುವ ವಿಕ್ರಂ ಲ್ಯಾಂಡರ್ ಯಶಸ್ವಿಗೆ ಸರ್ವಸಿದ್ಧಿ ಯಾಗವನ್ನು ನೆರವೇರಿಸಲಾಯಿತು.

ಮೈಸೂರಿನ ಇರ್ವಿನ್ ರಸ್ತೆಯಲ್ಲಿರುವ ಪುರಾತನ ಶ್ರೀ ಪಂಚಮುಖಿ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಸರ್ವಸಿದ್ಧಿ ಯಾಗವು ಅರ್ಚಕರ ಸಂಘದ ಅಧ್ಯಕ್ಷರು ಹಾಗೂ ಪಂಚಮುಖಿ ಆಂಜನೇಯ ಸ್ವಾಮಿ ದೇವಸ್ಥಾನದ ಪ್ರಧಾನ ಅರ್ಚಕರಾದ ವಿದ್ವಾನ್ ಕೃಷ್ಣಮೂರ್ತಿ ರವರ ನೇತೃತ್ವದಲ್ಲಿ  ನೆರವೇರಿತು.

ಈ‌ ವೇಳೆ ಮಾತನಾಡಿದ ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಡಿ ಟಿ ಪ್ರಕಾಶ್, ಈ ಅಪೂರ್ವ ಸಾಧನೆಗೆ ಕಾರಣರಾದ ದೇಶದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ, ಇಸ್ರೋ ಅಧ್ಯಕ್ಷರಿಗೆ ಹಾಗೂ ವಿಜ್ಞಾನಿಗಳಿಗೆ ದೇವರು ಆಯುರಾರೋಗ್ಯ ಕರುಣಿಸಲಿ ಎಂದು ಪ್ರಾರ್ಥಿಸಲಾಗಿದೆ ಎಂದು ತಿಳಿಸಿದರು.

ಇಡೀ ಮೈಸೂರಿನ ಜನತೆಯ ಪರವಾಗಿ ಚಂದ್ರಯಾನ 3 ಯಶಸ್ವಿಯಾಗಲು ದೈವ ಅನುಗ್ರವೂ ಸಿಗಲಿ ಎಂಬ‌ ಆಶಯದಿಂದ ಸರ್ವಸಿದ್ದಿ ಯಾಗ ನೆರವೇರಿಸಿದ್ದೇವೆ ಎಂದು ಹೇಳಿದರು.

ಚಂದ್ರಯಾನ 3ರ ಚಂದ್ರನ ನೌಕೆಯು ಚಂದ್ರನ ದಕ್ಷಿಣ ಧ್ರುವದಲ್ಲಿ ಸುರಕ್ಷಿತವಾಗಿ ಇಳಿಯಲಿ ಈ ಯೋಜನೆಯು ಇತಿಹಾಸ ನಿರ್ಮಿಸಲಿ ರಾಷ್ಟ್ರದ ಹೆಸರು ಪ್ರಪಂಚದಲ್ಲಿ ಅಗ್ರಗಣ್ಯವಾಗಲಿ ಎಂದು ಆಶಿಸಿದರು.

ಅರ್ಚಕರ ಸಂಘದ ಅಧ್ಯಕ್ಷರಾದ ವಿದ್ವಂತ್ ಕೃಷ್ಣಮೂರ್ತಿ, ಮೈಸೂರು ಬ್ರಾಹ್ಮಣ ಯುವ ವೇದಿಕೆಯ ಪ್ರಧಾನ ಕಾರ್ಯದರ್ಶಿ ವಿಕ್ರಮ ಅಯ್ಯಂಗಾರ್, ಅಜಯ್ ಶಾಸ್ತ್ರಿ, ಸುಚಿಂದ್ರ,ಅಪೂರ್ವ ಸುರೇಶ್ ,ಎಸ್ ಎನ್ ರಾಜೇಶ್, ಆನಂದ್, ರಾಕೇಶ್ ಮತ್ತಿತರರು ಭಾಗವಹಿಸಿದ್ದರು.