ಅತ್ಯಾಚಾರಿಗೆ 20 ವರ್ಷ ಶಿಕ್ಷೆ ವಿಧಿಸಿದ ಮಕ್ಕಳ‌ ಸ್ನೇಹಿ ನ್ಯಾಯಾಲಯ

ಚಾಮರಾಜನಗರ:ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದ ವ್ಯಕ್ತಿಗೆ ಚಾಮರಾಜನಗರ ಮಕ್ಕಳ ಸ್ನೇಹಿ ಹಾಗೂ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಶಿಕ್ಷೆ‌ ವಿಧಿಸಿದೆ.

ಕೊಳ್ಳೆಗಾಲ ತಾಲ್ಲೂಕು, ಕಾಂಚಳ್ಳಿ ಗ್ರಾಮದ ಆರೋಪಿ ಬಸವರಾಜು @ ಬಸವರಾಜಚಾರಿ (35)ಎಂಬಾತನಿಗೆ ಚಾಮರಾಜನಗರ ಮಕ್ಕಳ ಸ್ನೇಹಿ ಹಾಗೂ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ನಿಶಾರಾಣಿ ಅವರು  ಶಿಕ್ಷೆ ವಿಧಿಸಿದ್ದಾರೆ.

5 ವರ್ಷದ ಬಾಲಕಿ ಮನೆಯ ಮುಂದೆ ಆಟವಾಡುತ್ತಿದ್ದಾಗ ಆರೋಪಿ ಬಸವರಾಜಚಾರಿಯು ಬಾಲಕಿಗೆ ಇಡ್ಲಿ ಕೊಡುವ ನೆಪದಲ್ಲಿ ತನ್ನ ಮನೆಗೆ ಕರೆದುಕೊಂಡು ಹೋಗಿ ಲೈಂಗಿಕ ‌ದೌರ್ಜ್ಯನ್ಯ ಎಸಗಿದ್ದ.

ತಕ್ಷಣ ನೊಂದ ಬಾಲಕಿಯು ಕಿರುಚಿಕೊಂಡಾಗ ಆಕೆಯನ್ನು ಅಲ್ಲೇ ಬಿಟ್ಟು ಹೋಗಿದ್ದ.

ನಂತರ ನೊಂದ ಬಾಲಕಿಯ ಪೋಷಕರು ಬಂದು ವಿಚಾರಿಸಿ ಆರೋಪಿಯನ್ನು ವಿಚಾರ ಮಾಡಲು ಮನೆಗೆ ಹೋಗಿದ್ದಾಗ ಆರೋಪಿಯು ತನ್ನ ಮನೆಯ ಒಳಗಡೆ ಹೋಗಿ ಮೈ ಮೇಲೆ ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಪ್ರಯತ್ನಪಟ್ಟಿದ್ದ.

ಕೊಳ್ಳೆಗಾಲ ರಾಮಾಪುರ ಪೊಲೀಸ್‌ ಠಾಣಾ ಪೊಲೀಸರು 02.12.2019ರಂದು ಈ ಸಂಬಂಧ ಪೋಕ್ಸೊ ಕಾಯ್ದೆ ಅಡಿ ಪ್ರಕರಣ ದಾಖಲಿಸಿಕೊಂಡು ತನಿಖಾಧಿಕಾರಿ ವೃತ್ತ ನಿರೀಕ್ಷಕರಾದ ಮನೋಜ್‌ ಕುಮಾರ್ ದೋಷಾರೋಪಣ ಪತ್ರವನ್ನು ಸಲ್ಲಿಸಿದ್ದರು.

ಆರೋಪಿ ಬಸವರಾಜಚಾರಿಗೆ ಭಾರತೀಯ ದಂಡ ಸಂಹಿತೆ ಕಲಂ 376(ಎಬಿ)ಗೆ 20 ವರ್ಷ ಕಠಿಣ ಶಿಕ್ಷೆ, 5 ಸಾವಿರ ದಂಡ, ದಂಡ ತೆರಲು ತಪ್ಪಿದಲ್ಲಿ, 6 ತಿಂಗಳ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧೀಕಾರದಿಂದ 4 ಲಕ್ಷ ರೂಪಾಯಿ ಹಣವನ್ನು 30 ದಿನದ ಒಳಗೆ ನೊಂದ ಬಾಲಕಿಗೆ ಪರಿಹಾರದ ರೂಪದಲ್ಲಿ ನೀಡಬೇಕೆಂದು ಆದೇಶಿಸಿ ನ್ಯಾಯಾಲಯವು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ಕೆ.ಯೋಗೇಶ್ ಅವರು ಸರ್ಕಾರದ ಪರವಾಗಿ ಆರೋಪಿತನ ವಿರುದ್ಧ ವಿಚಾರಣೆ ನಡೆಸಿ ವಾದವನ್ನು ಮಂಡಿಸಿದರು.