ಮೈಸೂರು: ಜಗದ್ಗುರು ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳ 108ನೇ ಜಯಂತಿ ಮಹೋತ್ಸವವನ್ನು ಆ. 29ರಂದು ಆಚರಿಸಲಾಗುವುದು ಎಂದು ಜೆಎಸ್ಎಸ್ ಮಹಾವಿದ್ಯಾಪೀಠದ ಕಾರ್ಯದರ್ಶಿ ಬೆಟ್ ಸೂರ್ ಮಠ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು,ಆ.29ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶ್ರೀಗಳ ಜಯಂತಿ ಮಹೋತ್ಸವವನ್ನು ಉದ್ಘಾಟಿಸಲಿದ್ದಾರೆ ಎಂದು ಹೇಳಿದರು.
ಜಿಲ್ಲಾ ಉಸ್ತುವಾರಿ ಸಚಿವ ಡಾ. ಹೆಚ್. ಸಿ. ಮಹದೇವಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ. ಸಂಸದ ಪ್ರತಾಪ್ ಸಿಂಹ ರಾಜ ಗುರು ತಿಲಕ ಕೃತಿಯನ್ನು ಲೋಕಾರ್ಪಣೆ ಗೊಳಿಸಲಿದ್ದಾರೆ.
ಶಾಸಕ ಜಿ.ಟಿ ದೇವೇಗೌಡ ಅವರು ಪ್ರಸಾದ ಮಾಸಿಕ ವಿಶೇಷ ಸಂಚಿಕೆಯನ್ನು ಬಿಡುಗಡೆಗೊಳಿಸಲಿದ್ದಾರೆ ಎಂದು ವಿವರಿಸಿದರು.
ಶಾಸಕರು ಗಳಾದ ತನ್ವೀರ್ ಸೇಟ್, ಶ್ರೀವತ್ಸ, ಹರೀಶ್ ಗೌಡ, ಮೇಯರ್ ಶಿವಕುಮಾರ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿ, ಆದಿಚುಂಚನಗಿರಿ ಮಠದ ಜಗದ್ಗುರು ಶ್ರೀ ನಿರ್ಮಲಾನಂದನಾಥ ಮಹಾಸ್ವಾಮೀಜಿ, ಉಡುಪಿ ಪೇಜಾವರ ಮಠದ ಶ್ರೀ ವಿಶ್ವ ಪ್ರಸನ್ನ ತೀರ್ಥ ಶ್ರೀಪಾದಂಗಳವರ ದಿವ್ಯ ಸಾನಿಧ್ಯದಲ್ಲಿ ಈ ಸಮಾರಂಭ ನಡೆಯಲಿದೆ ಎಂದು ಹೇಳಿದರು
ಅಂದು ಮಧ್ಯಾಹ್ನ ಜೆಎಸ್ಎಸ್ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದವರಿಗೆ ಅಭಿನಂದನಾ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ನೇರವಾಗಿ ಪಾಲ್ಗೊಳ್ಳಲು ಸಾಧ್ಯವಾಗದವರು ಆನ್ಲೈನ್ ನಲ್ಲಿ ಕಾರ್ಯಕ್ರಮವನ್ನು youtube http://YouTube.com/c/JSSMahavidyapeethaonline ಲಿಂಕ್ ಮೂಲಕ ವೀಕ್ಷಿಸಬಹುದಾಗಿದೆ ಎಂದು ತಿಳಿಸಿದರು.
ಶ್ರೀಗಳ ಜಯಂತಿ ಮಹೋತ್ಸವದ ಅಂಗವಾಗಿ ಜೆಎಸ್ಎಸ್ ಗ್ರಂಥಮಾಲೆಯ ಪ್ರಕಟಣೆಗಳಿಗೆ ಆಗಸ್ಟ್ 29ರಿಂದ ಸೆಪ್ಟೆಂಬರ್ 30ರವರೆಗೆ ಶೇ. 50 ರಷ್ಟು ರಿಯಾಯಿತಿ ದರದಲ್ಲಿ ನೀಡಲಾಗುವುದು ಎಂದು ಮಾಹಿತಿ ನೀಡಿದರು.
ಪೂಜ್ಯರ ಜಯಂತಿ ಅಂಗವಾಗಿ ಮೃಗಾಲಯದ ಪ್ರಾಣಿ ಸಂಕುಲಕ್ಕೆ ಒಂದು ದಿನದ ಆಹಾರ ವಿತರಣೆ ಮಾಡಲು ಈ ವರ್ಷವೂ ಒಂದು ಲಕ್ಷ ರೂ ನೀಡಲಾಗಿದೆ ಎಂದು ಇದೇ ವೇಳೆ ಬೆಟ್ ಸೂರ್ ಮಠ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಜೆಎಸ್ಎಸ್ ಮಹಾವಿದ್ಯಾಪೀಠದ ಕಾರ್ಯದರ್ಶಿ -2 ಶಿವಕುಮಾರ ಸ್ವಾಮಿ ಮತ್ತು ನಿರಂಜನ ಮೂರ್ತಿ ಉಪಸ್ಥಿತರಿದ್ದರು.