ಮೈಸೂರು: ದೇವರ ಹೆಸರಿನಲ್ಲಿ ಭಕ್ತರಿಗೆ ಪಂಗನಾಮ ಹಾಕಿ ರಾತ್ರೋರಾತ್ರಿ ಎಸ್ಕೇಪ್ ಆಗಿದ್ದ ಏಳುದೇವರ ಒಲಿಸಿಕೊಂಡಿದ್ದ ಸ್ವಯಂ ಘೋಷಿತ ದೇವಮಾನವ ಗುಡ್ಡಪ್ಪ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಈ ವ್ಯಕ್ತಿಯ ಸಾವಿನಿಂದ ಗುಡ್ಡಪ್ಪನ ಮಾತಿಗೆ ಮರುಳಾಗಿ ಲಕ್ಷಾಂತರ ರೂಪಾಯಿ ಸಾಲ ಕೊಟ್ಟ ಭಕ್ತರು ಅತಂತ್ರಕ್ಕೆ ಸಿಲುಕಿದ್ದಾರೆ.
ಬನ್ನೂರಿನ ರಂಗಸಮುದ್ರದ ರಾಜಾಪರಮೇಶ್ವರಿ ನಾಲೆ ದಂಡೆಯಲ್ಲಿ ನಿರ್ಮಿಸಲಾದ ಜಲ್ ಜಲ್ ಶಾಂತಿ ಮಾದಪ್ಪ ದೇವಸ್ಥಾನದ ಗುಡ್ಡಪ್ಪ ವಿಜಯ್ ಕುಮಾರ್ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಜಲ್ ಜಲ್ ಮಾದಪ್ಪ,ಗಂಗಾಮಾತೆ,ಗಿರಿಜಾಮಾತೆ,ಲಕ್ಷ್ಮೀದೇವಿ,ಕರಿಮಾರಮ್ಮ,ಬೆಟ್ಟಳ್ಳಿ ಮಾರಮ್ಮ ಹಾಗೂ ಮುನೇಶ್ವರ ದೇವರುಗಳು ಒಂದೇ ದಿನ ಗುಡ್ಡಪ್ಪನ ಮೈಮೇಲೆ ಬರುತ್ತಿತ್ತು ಎಂದು ಭಕ್ತರು ಹೇಳುತ್ತಿದ್ದರು.
ಈ ವೇಳೆ ಭಕ್ತರಿಗೆ ಹಣ ನೀಡುವಂತೆ ಆಜ್ಞೆ ಮಾಡುತ್ತಿದ್ದ.ಅಲ್ಲದೆ ದೇವಸ್ಥಾನದಲ್ಲಿ ಹುತ್ತ ನಿರ್ಮಿಸಿ ನಿಧಿ ಇರುವುದಾಗಿ ಆಸೆ ಹುಟ್ಟಿಸಿ ಭಕ್ತರಿಂದ ಲಕ್ಷಾಂತರ ಹಣ ಸಾಲ ಪಡೆದಿದ್ದಾಗಿ ಬಹಳಷ್ಟು ಮಂದಿ ದೂರಿದ್ದಾರೆ.
ಸರ್ಕಾರದ ಗಮನಕ್ಕೆ ಹೋದ್ರೆ ನಿಧಿಯನ್ನ ವಶಪಡಿಸಿಕೊಳ್ಳುತ್ತೆ ಎಂಬ ಸಬೂಬು ಹೇಳಿ ಹಣ ಹಿಂದಿರುಗಿಸದೆ ಸತಾಯಿಸುತ್ತಿದ್ದ.
ಲಕ್ಷಗಳಲ್ಲಿ ಹಣ ಕೊಟ್ಟ ಭಕ್ತರಾದ ಮಹದೇವಮ್ಮ,ಶಿವಮ್ಮ,ಜಯಮ್ಮ,ವಡ್ಗಲ್ಲೇಗೌಡ,ನಾರಾಯಣ,ಅಶ್ವಿನಿ,ಆನಂದ್,ಸುನಂದ,ಮೋಹನ್ ಲಾಲ್ ಎಂಬುವರು ಪೊಲೀಸರ ಮೊರೆ ಹೋಗಿದ್ದರು.
ಪೊಲೀಸರ ವಿಚಾರಣೆ ಹಾಗೂ ಸಾಲಗಾರ ಭಕ್ತರ ಒತ್ತಡಕ್ಕೆ ಹೆದರಿದ ಗುಡ್ಡಪ್ಪ ವಿಜಯ್ ಕುಮಾರ್ ಕಳೆದ ವರ್ಷ ನಾಪತ್ತೆಯಾಗಿದ್ದರು.
ಗುಡ್ಡಪ್ಪನ ಪತ್ತೆಗಾಗಿ ಭಕ್ತರು ಹುಡುಕಾಟದಲ್ಲಿದ್ದರು.
ಮಂಡ್ಯದ ಹೊಸೂರು ಕಾಲೋನಿ ಹಳ್ಳಿಯ ತೋಟದ ಮನೆಯೊಂದರಲ್ಲಿ ಗುಡ್ಡಪ್ಪ ವಿಜಯ್ ಕುಮಾರ್ ನೇಣಿಗೆ ಶರಣಾಗಿದ್ದಾರೆ.
ರಂಗಸಮುದ್ರದಿಂದ ನಾಪತ್ತೆಯಾದ ವಿಜಯ್ ಕುಮಾರ್ ಖಾಸಗಿ ವ್ಯಕ್ತಿಯೊಬ್ಬರ ತೋಟದ ಮನೆ ಸೇರಿಕೊಂಡು ಹಸುಗಳನ್ನ ಸಾಕುತ್ತಾ ತೋಟದ ನಿರ್ವಹಣೆಯಲ್ಲಿ ಮುಳುಗಿದ್ದ.
ವಿಜಯ್ ಕುಮಾರ್ ಆತ್ಮಹತ್ಯೆಗೆ ಶರಣಾಗಿದ್ದಾನೆ.ನಿಧಿ ಆಸೆಗೆ ಲಕ್ಷಾಂತರ ಹಣ ನೀಡಿ ವಂಚನೆಗೆ ಒಳಗಾದ ಭಕ್ತರು ಕಣ್ಣೀರಿನಲ್ಲಿಮುಳುಗಿದ್ದಾರೆ.
ಕೋಟ್ಯಾಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ಜಲ್ ಜಲ್ ಶಾಂತಿ ಮಾದಪ್ಪ ದೇವಾಲಯವೂ ಅನಾಥವಾಗಿದೆ