ಮೈಸೂರು: ದುಷ್ಟರ ಶಿಕ್ಷೆ, ಶಿಷ್ಟರ ರಕ್ಷಣೆಗೆ ಯುಗಯುಗಗಳಲ್ಲೂ ಅವತಾರ ಎತ್ತಿ ಬರುತ್ತೇನೆ ಎಂದು ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಹೇಳಿರುವ ಮಾತು ಎಲ್ಲಾ ಕಾಲಕ್ಕೂ ಪ್ರಸ್ತುತವಾಗಿದೆ ಎಂದು ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ತಿಳಿಸಿದರು.
ಧರ್ಮದ ಉಳಿವಿಗೆ ಭಗವಂತನ ಅವತಾರ ಬೇರೆ ಬೇರೆ ರೂಪದಲ್ಲಿ ಆಗುತ್ತಲೇ ಇರುತ್ತದೆ ಎಂದು ಹೇಳಿದರು.
ಕೆ ಆರ್ ಮೊಹಲ್ಲಾ ನಾಲಾ ಬೀದಿಯಲ್ಲಿರುವ ವೈಷ್ಣವಿ ಸೇವಾ ಪರಿಷತ್ ಹಮ್ಮಿಕೊಂಡಿದ್ದ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮದಲ್ಲಿ ವಿಶೇಷ ಪೂಜೆ ಸಲ್ಲಿಸಿ ನಂತರ ಗೋಪೂಜೆ ನೆರವೇರಿಸಿ ಶ್ರೀಗಳು ಮಾತನಾಡಿದರು.
ಯುವಕರು ಧರ್ಮದ ಹಾದಿಯಲ್ಲಿ ನಡೆಯಬೇಕು. ಧರ್ಮಕ್ಕೆ ಆಪತ್ತು ಎದುರಾದಲ್ಲಿ ರಕ್ಷಣೆಗೂ ಸಿದ್ಧರಿರಬೇಕು ಎಂದು ಸೂಚಿಸಿದರು.
ಶ್ರೀಕೃಷ್ಣ ಆರಾಧ್ಯ ದೈವ. ಪಶುಪಾಲನೆ ವೃತ್ತಿ ಮಾಡುವ ಗೊಲ್ಲ ಜನಾಂಗದವರಿಗೆ ಗೋಪಾಲಕ ಎಂದು ಖ್ಯಾತಿ ಪಡೆದಿರುವ ಕೃಷ್ಣನೇ ಮುಖ್ಯದೇವರು.
ಕೃಷ್ಣನಷ್ಟು ಕಷ್ಟಗಳನ್ನು ಎದುರಿಸಿದವರು ಮತ್ತೊಬ್ಬರು ಇರಲಾರರು. ತನಗೆ ಎದುರಾದ ಎಲ್ಲ ಕಷ್ಟಗಳನ್ನು ನಗುತ್ತಲೇ ಎದುರಿಸಿ ಜಗತ್ತಿಗೆ ಮಾದರಿಯಾದ ದೈವ. ಬೇರೆ ಧರ್ಮಗಳನ್ನು ಗೌರವಿಸೋಣ. ನಮ್ಮ ಧರ್ಮದ ಉನ್ನತಿಗೆ ಎಲ್ಲರೂ ಶ್ರಮಿಸೋಣ ಎಂದು ಶ್ರೀಗಳು ಕರೆ ನೀಡಿದರು. ಲ
ವೆಂಗಿಪುರ ಮಠದ ಶ್ರೀ ಇಳೈ ಆಳ್ವಾರ್ ಸ್ವಾಮೀಜಿ, ವೈಷ್ಣವಿ ಸೇವಾ ಪರಿಷತ್ ಅಧ್ಯಕ್ಷರಾದ ಚಕ್ರಪಾಣಿ, ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆ ಪ್ರಧಾನ ಕಾರ್ಯದರ್ಶಿ ವಿಕ್ರಮ ಅಯ್ಯಂಗಾರ್, ಪುಷ್ಪ ಅಯ್ಯಂಗಾರ್ , ವೈದೇಹಿ, ಸುಚಿಂದ್ರ, ಚಿತ್ರ, ನಾಗಶ್ರೀ, ವಿದ್ಯಾ, ಮುರುಳೀಧರ್, ಗೀತ, ಜಗದೀಶ್, ಮಧುಸೂದನ್ ಮತ್ತಿತರರು ಭಾಗವಹಿಸಿದ್ದರು.