ಹುಲಿ ದಾಳಿಯಿಂದ ಹಸು ಬಲಿ, ಮತ್ತೊಂದು ಗಂಭೀರ ಗಾಯ; ಆತಂಕಕ್ಕೀಡಾದ ಹೊಳಲು ಗ್ರಾಮದ ಜನತೆ

ಮೈಸೂರು: ಚಿರತೆ ಹಾವಳಿಯಿಂದ ಕಂಗೆಟ್ಟಿದ್ದ ಗ್ರಾಮಸ್ಥರು ಈಗ ಹುಲಿ ದಾಳಿಯೂ ಪ್ರಾರಂಭವಾಗಿರುವುದರಿಂದ, ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ.

ಜಮೀನಿನಲ್ಲಿ ಮೇಯುತ್ತಿದ್ದ ಹಸುಗಳ ಮೇಲೆ ಮಾಲೀಕನ ಎದುರಲ್ಲೆ ಹುಲಿ ದಾಳಿ ನಡೆಸಿದ್ದು ಒಂದು ಹಸು ಸ್ಥಳದಲ್ಲೇ ಮೃತಪಟ್ಟು ಮತ್ತೊಂದು ಹಸು ಗಂಭೀರವಾಗಿ ಗಾಯಗೊಂಡ ಘಟನೆ
ಹೆಚ್ ಡಿ‌ ಕೋಟೆ ತಾಲ್ಲೂಕಿನ ಹೊಸ ಹೊಳಲು ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಲಿಂಗರಾಜು ಅವರ ಪುತ್ರ ವಿಕಾಸ್ ಹಸುಗಳನ್ನು ಮೇಯಿಸುತ್ತಿದ್ದ ವೇಳೆ ಹುಲಿ ದಾಳಿ ಮಾಡಿದೆ.

ವಿಷಯ ತಿಳಿದು ಸ್ಥಳಕ್ಕೆ ದಮ್ಮನಕಟ್ಟೆ ವಲಯ ಅರಣ್ಯಾಧಿಕಾರಿ ಭರತ್ ಮತ್ತು ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಚಿರತೆ ದಾಳಿಯಿಂದ ಜಾನುವಾರುಗಳು ಸಾವನ್ನಪ್ಪುತ್ತಿವೆ ಈಗ ಹುಲಿ ಕಾಟವೂ ಪ್ರಾರಂಭವಾಗಿದೆ.ಜಮೀನಿನ ಕಡೆ ಹೋಗಲು ಭೀತಿ ಕಾಡುತ್ತಿದೆ.ಆದಷ್ಟು ಬೇಗ ಹುಲಿಯನ್ನು ಸೆರೆ ಹಿಡಿಯಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.