CWMA-ತಮಿಳುನಾಡಿನ ವಿರುದ್ಧ ಕರ್ನಾಟಕ ಸೇನಾ ಪಡೆ ಪ್ರತಿಭಟನೆ

ಮೈಸೂರು: ನಮ್ಮ ಜಲಾಶಯಗಳಲ್ಲಿ ನೀರಿಲ್ಲದಿದ್ದರೂ, ತಮಿಳುನಾಡಿಗೆ ಪದೇ ಪದೇ ನೀರು ಬಿಡಿ ಎಂದು ಆದೇಶ ಮಾಡುತ್ತಿರುವ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಹಾಗೂ ತಮಿಳುನಾಡಿನ ವಿರುದ್ಧ ಕರ್ನಾಟಕ ಸೇನಾ ಪಡೆ ಹಾಗೂ ಅಖಿಲ ಕರ್ನಾಟಕ ಒಕ್ಕಲಿಗರ ಸಂಘದವರು ಮೈಸೂರಿನ ಜಿಲ್ಲಾ ಪಂಚಾಯತ್ ಕಚೇರಿ ಮುಂಭಾಗ ಪೊರಕೆ ಚಳವಳಿ ನಡೆಸಿದರು.

ಕಾವೇರಿ ನೀರು ನಿರ್ವಹಣಾ ಮಂಡಳಿ ಈ ದೇಶದ ಒಕ್ಕೂಟದ ವ್ಯವಸ್ಥೆಗೆ ಅಗೌರವ ತೋರುತ್ತಿದೆ. ತಮಿಳ್ನಾಡು ಸರಕಾರ ತನ್ನ ರಾಜಕೀಯ ಅಸ್ತಿತ್ವವನ್ನು ಉಳಿಸಿಕೊಳ್ಳಲು ಪದೇಪದೇ ನಮ್ಮ ಮೇಲೆ ಖ್ಯಾತೆ ತೆಗೆಯುತ್ತಿದೆ ಎಂದು ಪ್ರತಿಭಟನಾ ನಿರತರು ದೂರಿದರು.

ಕಾವೇರಿ ಮಂಡಳಿ ತಮಿಳುನಾಡಿನ ಏಜೆಂಟ್ ರಂತೆ ವರ್ತಿಸುತ್ತಿದೆ. ಕಾವೇರಿ ಕಣಿವೆಯ ಜಲಾಶಯಗಳಲ್ಲಿ ಸಾಕಷ್ಟು ನೀರಿಲ್ಲದಿದ್ದರೂ  ಕೇಂದ್ರ ಸರ್ಕಾರದ ಅಧೀನದಲ್ಲಿರುವ ಕಾವೇರಿ ನೀರು ಮಂಡಳಿ ತಮಿಳುನಾಡಿಗೆ ಪದೇ ಪದೇ ನೀರು ಬಿಡಲು ಹೇಳುತ್ತಿರುವುದು ಅತ್ಯಂತ ಖಂಡನೀಯ ಎಂದು ಕಿಡಿಕಾರಿದರು.

ಶತಮಾನಗಳಿಂದಲೂ ತಮಿಳುನಾಡು ನಮ್ಮ ಮೇಲೆ ಹಿಡಿತ ಸಾಧಿಸುತ್ತಿದೆ. 1924ರಲ್ಲಿ ಸ್ವಾತಂತ್ರ ಪೂರ್ವದಲ್ಲಿ ಬ್ರಿಟಿಷ್ ಆಳ್ವಿಕೆಯಿದ್ದ ಕಾಲದಲ್ಲಾದ ಒಪ್ಪಂದವನ್ನೇ ತಮಿಳು ನಾಡು ಮುಂದಿಟ್ಟುಕೊಂಡು ನಮ್ಮ ರಾಜ್ಯಕ್ಕೆ ಪ್ರತಿ ಬಾರಿ ಅನ್ಯಾಯವೆಸಗುತ್ತಿದೆ ಎಂದು ಆರೋಪಿಸಿದರು.

ನಮ್ಮ ರಾಜ್ಯದ ಸಂಸದರು, ಕೇಂದ್ರ ಮಂತ್ರಿಗಳು ಹಾಗೂ ರಾಜ್ಯಸಭಾ ಸದಸ್ಯರು  ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡಿಸಿ ವಸ್ತುಸ್ಥಿತಿ ತಿಳಿ ಹೇಳಿ, ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿ, ನೂರಾರು ವರ್ಷಗಳ ಬ್ರಿಟಿಷ್ ಕಾಲದಲ್ಲಾದ ಒಪ್ಪಂದವನ್ನು ಕೂಡಲೇ ರದ್ದು ಮಾಡಿಸಬೇಕು ಎಂದು ಆಗ್ರಹಿಸಿದರು.

ಹೊಸ ಒಪ್ಪಂದ ರೂಪಿಸಿ ಕರ್ನಾಟಕದಲ್ಲಿ ಸರಿಯಾಗಿ ಮಳೆಯಾದರೆ ನೀರು ಬಿಡುವ ಹಾಗೆ, ಮಳೆಯಾಗಿದ್ದರೆ ನೀರು ಬಿಡದಿರುವ ಹಾಗೆ ಒಂದು ಹೊಸ ಒಪ್ಪಂದವನ್ನು ರೂಪಿಸಿ ಇದಕ್ಕೆ ಶಾಶ್ವತ ಪರಿಹಾರವನ್ನು ಸೂಚಿಸಬೇಕು  ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಅಖಿಲ ಕರ್ನಾಟಕ ಒಕ್ಕಲಿಗರ ಸಂಘದ ರಾಜ್ಯಾಧ್ಯಕ್ಷ ಸಿ ಜಿ ಗಂಗಾಧರ್, ಕರ್ನಾಟಕ ಸೇನಾ ಪಡೆ ಅಧ್ಯಕ್ಷ ತೇಜೇಶ್ ಲೋಕೇಶ್ ಗೌಡ, ಪ್ರಭುಶಂಕರ್, ವಿಜಯೇಂದ್ರ, ಕೃಷ್ಣಯ್ಯ, ಶಾಂತರಾಜೇಅರಸ್, ನರಸಿಂಹೇಗೌಡ, ಗಿರೀಶ್, ಯಶ್ವಂತ್, ಆರ್ ಮಹಾದೇವ ಸ್ವಾಮಿ, ನೇಹಾ, ಸೋಮಶೇಖರ್, ನಾಗಣ್ಣ, ಎಳನೀರು ರಾಮಣ್ಣ, ದರ್ಶನ್,  ಹರೀಶ್, ಕುಮಾರ್ ಗೌಡ, ಶ್ರೀನಿವಾಸ ರಾಜಕುಮಾರ್, ಅನಿಲ್, ಹನುಮಂತಯ್ಯ, ಗಣೇಶ್ ಪ್ರಸಾದ್, ಬಸವರಾಜು ಮಿನಿ ಬಂಗಾರಪ್ಪ, ಪ್ರದೀಪ್, ದಿಲೀಪ್, ಸುಬ್ಬೇಗೌಡ, ಕೃಷ್ಣಮೂರ್ತಿ ಮುಂತಾದವರು ಪಾಲ್ಗೊಂಡಿದ್ದರು.