ಪ್ರವಾಸೋದ್ಯಮ ಅಭಿವೃದ್ಧಿಪಡಿಸಲು ಇಲಾಖೆ ಜೊತೆ ಕೈ ಜೋಡಿಸಿ – ಎಂ ಕೆ ಸವಿತಾ ಮನವಿ

ಮೈಸೂರು: ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸಲು ಇಲಾಖೆಯ ಜೊತೆ ಕೈ ಜೋಡಿಸುವಂತೆ ಪ್ರವಾಸೋದ್ಯಮ ಇಲಾಖೆಯ ಜಂಟಿ ನಿರ್ದೇಶಕಿ ಎಂ. ಕೆ ಸವಿತಾ ಮನವಿ ಮಾಡಿದರು.

ಪ್ರವಾಸೋದ್ಯಮ ಅಭಿವೃದ್ಧಿ ಸಲಹಾ ಸಮಿತಿ ರಚಿಸಿ ಎರಡು ತಿಂಗಳಿಗೊಮ್ಮೆ ಸಭೆ ನಡೆಸಿ ಮೈಸೂರಿನ ಪ್ರವಾಸೋದ್ಯಮದ ಅಭಿವೃದ್ಧಿಗೆ ಕ್ರಮ ವಹಿಸಲಾಗುವುದು ಎಂದು ಹೇಳಿದರು.

ಸೆ.27 ರಂದು ವಿಶ್ವ ಪ್ರವಾಸೋದ್ಯಮ ದಿನಾಚರಣೆ‌ ಪ್ರಯುಕ್ತ ಪ್ರವಾಸೋದ್ಯಮ ಇಲಾಖೆಯಲ್ಲಿ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

ಕೇವಲ ದಸರಾ ಸಂದರ್ಭದಲ್ಲಿ ಮಾತ್ರವಲ್ಲದೆ ಉಳಿದ ದಿನಗಳಲ್ಲಿಯೂ ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಪಡಿಸಲು ಬೇಕಾದ ಸಲಹೆ ಪಡೆಯಲು ಪ್ರವಾಸೋದ್ಯಮ ಸಲಹಾ ಸಮಿತಿ ರಚಿಸಿ ಎರಡು ತಿಂಗಳಿಗೊಮ್ಮೆ ಸಭೆ ನಡೆಸಿ ಅಲ್ಲಿ ಬರುವ ಸಲಹೆಗಳನ್ನು ಸೂಚನೆಗಳನ್ನು ಸರ್ಕಾರದ ಗಮನಕ್ಕೆ ತರುವುದಕ್ಕೆ ಅಗತ್ಯ ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.

ಮೈಸೂರಿಗೆ ಬರುವ ಪ್ರವಾಸಿಗರು ಅಕ್ಕ ಪಕ್ಕದಲ್ಲಿರುವ ಊಟಿ, ಮಡಿಕೇರಿಗಳಿಗೆ ವಾಸ್ತವ್ಯಕ್ಕಾಗಿ ತೆರಳುತ್ತಾರೆ‌ ಹಾಗಾಗಿ ಮೈಸೂರನಲ್ಲಿಯೇ ಎಲ್ಲಾ ವ್ಯವಸ್ಥೆಗಳನ್ನು ಉತ್ತಮಗೊಳಿಸಿ ಪ್ರವಾಸಿಗರು ಇಲ್ಲೇ ಇರಲು ಆಕರ್ಷಿಸುವಂತೆ ಮಾಡಬೇಕು ಎಂದು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಸಲಹೆ ನೀಡಿದರು

ದಸರಾ ಸಂದರ್ಭದಲ್ಲಿ ರಾತ್ರಿ 12 ಗಂಟೆಯವರೆಗೂ ದೀಪಾಲಂಕಾರ ವೀಕ್ಷಿಸಲು ಅವಕಾಶ ಹಾಗೂ ದೀಪಾಲಂಕಾರ ವೀಕ್ಷಿಸಿ ನಂತರ ತೆರಳುವ ಪ್ರವಾಸಿಗರಿಗೆ ಮಧ್ಯರಾತ್ರಿಯವರೆಗೂ ಊಟದ ವ್ಯವಸ್ಥೆ ಮಾಡಲು ಹೋಟೆಲ್ ಹಾಗೂ ರೆಸ್ಟೋರೆಂಟ್ ಗಳಿಗೆ ಅವಕಾಶ ಒದಗಿಸಬೇಕು.

ಕೇರಳದಿಂದ ಬರುವ ಮೆಡಿಕಲ್ ವೇಸ್ಟ್ ಅನ್ನು ಮೈಸೂರಿನಲ್ಲಿ ಡಂಪ್ ಮಾಡುತ್ತಿದ್ದು, ಸ್ವಚ್ಛ ನಗರಿ ಮೈಸೂರನ್ನು ಸ್ವಚ್ಛ ನಗರವನ್ನಾಗಿ ಉಳಿಸಿಕೊಳ್ಳಲು ಜಿಲ್ಲಾಡಳಿತ ಹಾಗೂ ಸರ್ಕಾರ ಗಮನವಹಿಸಬೇಕು ಎಂದು ಕೋರಿದರು.

ಶಕ್ತಿ ಯೋಜನೆಯಿಂದ ಶೇ. 30ರಷ್ಟು ಹೆಚ್ಚು ಮಹಿಳೆಯರು ದಸರಾ ವೀಕ್ಷಿಸಲು ಆಗಮಿಸುವ ಹಿನ್ನೆಲೆ ವಸತಿ ಸೌಲಭ್ಯ ಸೇರಿದಂತೆ ಇತರ ಸೌಲಭ್ಯಗಳನ್ನು ಒದಗಿಸಬೇಕು. ದಸರಾ ಮುಗಿದ ನಂತರವೂ ಮುಂದಿನ ಎರಡು ವಾರಗಳವರೆಗೆ ದಸರಾ ದೀಪಾಲಂಕಾರ ವೀಕ್ಷಣೆಗೆ ಅವಕಾಶ ಕಲ್ಪಿಸಬೇಕು. ಅರಮನೆ ಸುತ್ತ ಸಂಚರಿಸುವ ಟಾಂಗಾದವರು ಪ್ರವಾಸಿಗರಿಂದ ಹೆಚ್ಚು ಹಣ ವಸೂಲಿ ಮಾಡುತ್ತಿದ್ದು ಕಿಲೋಮೀಟರ್ ಗೆ ಇಂತಿಷ್ಟು ದರವನ್ನು ಇಲಾಖೆಯಿಂದ ನಿಗದಿಪಡಿಸಬೇಕು ಎಂದು ಒತ್ತಾಯಿಸಿದರು.

ಪ್ರವಾಸೋದ್ಯಮಕ್ಕೆ ಸಂಬಂಧಿಸಿದ ಹೋಟೆಲ್ ಕಾರ್ಮಿಕರಿಂದ ಹಿಡಿದು ಪೆಟ್ರೋಲ್ ಬಂಕ್ ನಲ್ಲಿ ಕಾರ್ಯನಿರ್ವಹಿಸುವವರಿಗೆ ದಸರಾ ಸ್ವಯಂಸೇವಕರೆಂದು ಬ್ಯಾಡ್ಜ್ ನೀಡುವುದು. ಪ್ರವಾಸಿ ತಾಣಗಳಲ್ಲಿ ಗ್ರೀನ್ ಪೋಲಿಸಿಂಗ್ ವ್ಯವಸ್ಥೆ ನಿರ್ವಹಿಸುವುದು ಸೇರಿದಂತೆ‌ ಕೆಲ ಉತ್ತಮ ಸಲಹೆ ನೀಡಿದರು

ಸಭೆಯಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಯ ಸಹಾಯಕ ನಿರ್ದೇಶಕರಾದ ಟಿ.ಕೆ. ಹರೀಶ್, ಹೋಟೆಲ್ ಮಾಲೀಕರ ಅಸೋಸಿಯೇಷನ್ ನ ಅಧ್ಯಕ್ಷ ನಾರಾಯಣಗೌಡ,ಕಾರ್ಯ ನಿರತ ಪತ್ರಕರ್ತರ ಸಂಘದ ರಾಜ್ಯ ಸಮಿತಿ ಸದಸ್ಯ ಬಿ.ರಾಘವೇಂದ್ರ , ಟ್ರಾವೆಲ್ ಅಸೋಸಿಯೇಷನ್ ಪ್ರೆಸಿಡೆಂಟ್ ಜೆ.ಪಿ ಅರಸ್ ಸೇರಿದಂತೆ ಹಲವಾರು ಮಂದಿ ಉಪಸ್ಥಿತರಿದ್ದರು.