ವಿರಳ ಚರ್ಮರೋಗದಿಂದ ಬಳಲುತ್ತಿರುವವರ ಆರೋಗ್ಯ ವಿಚಾರಿಸಿದ ದಿನೇಶ್ ಗುಂಡೂರಾವ್

ಚಾಮರಾಜನಗರ: ವಿರಳ ಚರ್ಮ ರೋಗ ಪತ್ತೆಯಾಗಿರುವ ಹನೂರು ತಾಲೂಕಿನ ಕುರಟ್ಟಿ ಹೊಸೂರು ಹಾಗೂ ಭದ್ರಯ್ಯನಹಳ್ಳಿ ಗ್ರಾಮಗಳಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಭೇಟಿ ನೀಡಿ ರೋಗಿಗಳ ಆರೋಗ್ಯ ವಿಚಾರಿಸಿದರು.

ಭದ್ರಯ್ಯನಹಳ್ಳಿ ಗ್ರಾಮದಲ್ಲಿ ಚರ್ಮ ರೋಗದಿಂದ ಬಳಲುತ್ತಿರುವ ಮಗುವಿನ ಮನೆಗೆ ಭೇಟಿ ನೀಡಿದ ಸಚಿವರು ಎಷ್ಟು ದಿನದಿಂದ ತೊಂದರೆ ಕಾಣಿಸಿಕೊಂಡಿದೆ. ಯಾವ ಚಿಕಿತ್ಸೆ ನೀಡಲಾಗುತ್ತಿದೆ. ಯಾವ ಔಷಧಿಗಳನ್ನು ನೀಡಲಾಗುತ್ತಿದೆ ಎಂಬ ಬಗ್ಗೆ ವಿವರವಾಗಿ ಮಾಹಿತಿ ಪಡೆದರು.

ಕುರಟ್ಟಿ ಹೊಸೂರು ಗ್ರಾಮದಲ್ಲಿ ಚರ್ಮ ರೋಗದಿಂದ ನರಳುತ್ತಿರುವ ಬಾಲಕಿಯ ಮನೆಗೆ ತೆರಳಿ ಆರೋಗ್ಯ ವಿಚಾರಿಸಿ ವಿವರ ಪಡೆದರು.

ಇದೇ ವೇಳೆ ಕುಟುಂಬಸ್ಥರಿಗೆ ಹೆಚ್ಚಿನ ನೆರವು, ಪರಿಹಾರ ನೀಡಬೇಕೆಂದು ಸ್ಥಳೀಯರು ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಸಚಿವರು ಚಿಕಿತ್ಸೆ, ಔಷಧಿಗಳನ್ನು ಅಗತ್ಯಕ್ಕೆ ಅನುಗುಣವಾಗಿ ನೀಡಲಾಗುವುದು. ಪರಿಹಾರ ಕೊಡಿಸುವ ನಿಟ್ಟಿನಲ್ಲಿಯೂ ಅಗತ್ಯಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು.

ಇದೇ ಸಂದರ್ಭದಲ್ಲಿ ವಿಶೇಷ ಪ್ರಕರಣವೆಂದು ಪರಿಗಣಿಸಿ ಪಿಂಚಣಿ ನೀಡುವ ಆದೇಶ ಪತ್ರವನ್ನು ಸಚಿವರು ಪೋಷಕರಿಗೆ ವಿತರಿಸಿದರು.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ದಿನೇಶ್ ಗುಂಡೂರಾವ್ ಅವರು ಹನೂರು ತಾಲೂಕಿನ ಎರಡರಿಂದ ಮೂರು ಗ್ರಾಮಗಳಲ್ಲಿ ವಿರಳ ಚರ್ಮರೋಗ ಕಂಡುಬಂದ ಹಿನ್ನೆಲೆಯಲ್ಲಿ ಆರೋಗ್ಯಾಧಿ ಕಾರಿಗಳ ತಂಡವನ್ನು ಕಳುಹಿಸಿಕೊಡಲಾಗಿತ್ತು. ನಾನೂ ಸಹ ಈ ಬಗ್ಗೆ ಸಂಪೂರ್ಣ ವಿವರ ಪಡೆದುಕೊಂಡಿದ್ದೇನೆ. ಅಪರೂಪದ ಈ ರೋಗ ಇತರೆ ಜಿಲ್ಲೆಯ ಕೆಲವೆಡೆ ಕಂಡು ಬಂದಿರುವ ಮಾಹಿತಿ ಇದೆ. ಇದರ ನಿಯಂತ್ರಣ ಹಾಗೂ ನಿರ್ಮೂಲನೆಗೆ ವಿಶೇಷ ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ರೋಗ ಬಾಧಿತರಿಗೆ ಔಷಧ, ಪೌಷ್ಠಿಕ ಆಹಾರ ಒದಗಿಸುವ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಚಿಕ್ಕ ವಯಸ್ಸಿನಲ್ಲಿಯೇ ವಿರಳ ಚರ್ಮ ರೋಗ ಕಾಣಿಸಿಕೊಂಡಿರುವುದು ಕುಟುಂಬಕ್ಕೆ ನೋವಿನ ಸಂಗತಿಯಾಗಿದೆ ಎಂದು ತಿಳಿಸಿದರು.

ಬಳಿಕ ಕೊಳ್ಳೇಗಾಲ ಪ್ರವಾಸಿಮಂದಿರದಲ್ಲಿ ಸಿಕಲ್ ಸೆಲ್ ಅನಿಮಿಯಾ ರೋಗದಿಂದ ಬಳಲುತ್ತಿರುವವರು ಹಾಗೂ ಅವರ ಕುಟುಂಬದವರನ್ನು ಭೇಟಿ ಮಾಡಿ ಸಚಿವರು ಆರೋಗ್ಯ ವಿಚಾರಿಸಿದರು.

ಶಾಸಕ ಎಂ.ಆರ್. ಮಂಜುನಾಥ್, ಮಾಜಿ ಶಾಸಕ ಆರ್. ನರೇಂದ್ರ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಇಲಾಖೆಯ ಆಯುಕ್ತ ರಂದೀಪ್, ಜಿಲ್ಲಾ ಪಂಚಾಯತ್ ಸಿಇಒ ಆನಂದ್ ಪ್ರಕಾಶ್ ಮೀನಾ, ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ, ಉಪವಿಭಾಗಾಧಿಕಾರಿ ಮಹೇಶ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಚಿದಂಬರ, ಜಿಲ್ಲಾ ಕುಷ್ಠ ರೋಗ ನಿರ್ಮೂಲನಾಧಿಕಾರಿ ಡಾ. ಪ್ರಕಾಶ್, ತಹಶೀಲ್ದಾರ್ ಗುರುಪ್ರಸಾದ್, ತಾಲೂಕು ಪಂಚಾಯತ್ ಕಾರ್ಯನಿರ್ವಾಹಣಾಧಿಕಾರಿ ಆರ್. ಉಮೇಶ್, ತಾಲೂಕು ಆರೋಗ್ಯಾಧಿಕಾರಿ ಡಾ. ಪ್ರಕಾಶ್, ಡಾ. ಗೋಪಾಲ್ ಮತ್ತಿತರರು ಹಾಜರಿದ್ದರು.