ಅಖಂಡ‌ ಕರ್ನಾಟಕ ಬಂದ್ ಮೈಸೂರಿನಲ್ಲಿ ಯಶಸ್ವಿ: ಬಿಕೊ‌ ಎನ್ನುತ್ತಿರುವ ರಸ್ತೆಗಳು

ಮೈಸೂರು: ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನು ಖಂಡಿಸಿ ಶುಕ್ರವಾರ ಕರೆ ನೀಡಲಾಗಿದ್ದ ಅಖಂಡ‌ ಕರ್ನಾಟಕ ಬಂದ್ ಗೆ ಮೈಸೂರಿನಲ್ಲಿ ಉತ್ತಮ ಪ್ರತಿಕ್ರಿಯೆ ಕಂಡು ಬಂದಿತು.

ನಗರ ಹಾಗೂ ಜಿಲ್ಲೆಯಾದ್ಯಂತ ಎಲ್ಲಾ ಅಂಗಡಿ- ಮುಂಗಟ್ಟುಗಳನ್ನು ಸ್ವಯಂ ಪ್ರೇರಿತವಾಗಿ ಮುಚ್ಚುವ ಮೂಲಕ ಕಾವೇರಿ ಹೋರಾಟಕ್ಕೆ ಬೆಂಬಲ ಸೂಚಿಸಿದ್ದಾರೆ.

ನಗರದ ಪ್ರಮುಖ ಮಾರುಕಟ್ಟೆಯಾಗಿರುವ ದೇವರಾಜ ಮಾರುಕಟ್ಟೆ, ಚಿಕ್ಕ ಮಾರುಕಟ್ಟೆ, ಎನ್.ಆರ್ ಮೋಹಲ್ಲದಲ್ಲಿರುವ ಮಾರುಕಟ್ಟೆ ಸೇರಿದಂತೆ ಬಹುತೇಕ ಎಲ್ಲಾ ಮಾರುಕಟ್ಟೆಗಳು ಪೂರ್ಣ ಬಂದ್ ಆಗಿವೆ.

ಪ್ರತಿ ಬಾರಿ ಬಂದ್ ಸಂದರ್ಭದಲ್ಲಿ ಎನ್ಆರ್ ಮೊಹಲ್ಲದಲ್ಲಿ ಅಂಗಡಿ ಮುಂಗಟ್ಟುಗಳು  ತೆರೆದಿರುತಿತ್ತು.ಆದರೆ ಇಂದಿನ ಬಂದ್ ಗೆ ಎನ್ ಆರ್ ಮೊಹಲ್ಲದ ಜನತೆ ಉತ್ತಮ ಸ್ಪಂದನೆ ನೀಡಿ ಎಲ್ಲಾ ಅಂಗಡಿಗಳನ್ನು ಮುಚ್ಚಿ ಕಾವೇರಿ ಪ್ರತಿಭಟನೆಗೆ ತಮ್ಮ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದರು.

ನಗರ ಹಾಗೂ ಜಿಲ್ಲೆಯಾದ್ಯಂತ ಪೆಟ್ರೋಲ್ ಬಂಕ್ ಮಾಲೀಕರು ಸಹ ಬಂದ್ ಗೆ ಬೆಂಬಲ ಸೂಚಿಸಿದ್ದಾರೆ.

ಜಿಲ್ಲಾಡಳಿತ ರಜೆ ಘೋಷಿಸಿರುವುದರಿಂದ ಖಾಸಗಿ ಹಾಗೂ ಸರಕಾರಿ ಮತ್ತು ಅನುದಾನಿತ ಶಾಲೆ ಸೇರಿದಂತೆ ಎಲ್ಲಾ ಶಾಲಾ-ಕಾಲೇಜುಗಳನ್ನು ಮುಚ್ಚಲಾಗಿತ್ತು.

ನಗರದಲ್ಲಿನ ಎಲ್ಲಾ ಮಾಲ್ ಗಳು, ಚಿತ್ರಮಂದಿರಗಳು ಸಹಾ ತೆರೆದಿರಲಿಲ್ಲ.

ನಗರ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರು ಇಲ್ಲದೆ ಇರುವುದರಿಂದ ಬಸ್ ಸಂಚಾರ ಸ್ಥಗಿತಗೊಂಡಿದ್ದು ಬಿಕೋ ಎನ್ನುತ್ತಿದೆ.ಹಾಗೆಯೇ ಜಿಲ್ಲೆ, ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳಿಗೆ ತೆರಳುವ ಸಬರ್ಬನ್ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ಸಂಖ್ಯೆ ಅತಿ ವಿರಳವಾಗಿತ್ತು.

ಬೆಳಿಗ್ಗೆ ಹೊರ ಜಿಲ್ಲೆ ಹಾಗೂ ರಾಜ್ಯಗಳಿಂದ ಮೈಸೂರಿಗೆ ಆಗಮಿಸಿದ ಪ್ರಯಾಣಿಕರು ತಮ್ಮ ಸ್ಥಳಗಳಿಗೆ ತೆರಳಲು ಆಗದೆ  ಪರದಾಡಬೇಕಾಯಿತು.

ಬಂದ್ ಇದ್ದರೂ ಕೆಲವರು ಬಸ್ ಇರಬಹುದು ಎಂದುಕೊಂಡು ಬೆಳಿಗ್ಗೆ ಬಸ್ ನಿಲ್ದಾಣಕ್ಕೆ  ಆಗಮಿಸಿ ವಾಪಸ್ ಆಗಿದ್ದಾರೆ. ಖಾಸಗಿ ಬಸ್ ಮಾಲೀಕರು ಕೂಡಾ ಬಂದ್ ಗೆ ಬೆಂಬಲ ಸೂಚಿಸಿದ್ದ ಅವುಗಳ ಸಂಚಾರ ಸ್ಥಗಿತಗೊಂಡಿತ್ತು.

ಮುಂಜಾಗ್ರತಾ ಕ್ರಮವಾಗಿ ನಗರದಾದ್ಯಂತ ಬಿಗಿ ಪೊಲೀಸ್ ಬಂದೋ ಬಸ್ತ್ ಮಾಡಲಾಗಿದ್ದು, ನಗರದಲ್ಲಿ ಯಾವುದೇ  ಅಹಿತಕರ ಘಟನೆ ವರದಿಯಾಗಿಲ್ಲ.

ನಗರದ ವಿವಿಧ ವೃತ್ತಗಳಲ್ಲಿ ಕನ್ನಡ ಪರ ಸಂಘಟನೆಗಳ ಹೋರಾಟಗಾರರು ಪ್ರತಿಭಟನಾ ಮೆರವಣಿಗೆ ನಡೆಸಿ ತಮಿಳು ನಾಡು ಸರ್ಕಾರದ ವಿರುದ್ಧ ಘೋಷಣೆಯನ್ನು ಕೂಗಿದರು.

ಒಟ್ಟಾರೆ ಸಾಂಸ್ಕೃತಿಕ ನಗರಿಯಲ್ಲಿ ಕರ್ನಾಟಕ ಬಂದ್ ಪೂರ್ಣ ಯಶಸ್ವಿಯಾಗಿದೆ.