ಅಜ್ಜಿಯತಿಥಿಕಾರ್ಯಕ್ಕೆಬಂದವೇಳೆಘಟನೆ:ನಾಲೆಗೆಬಿದ್ದಮಗಳನ್ನುರಕ್ಷಿಸಲುಹೋಗಿಮೂವರುಸಾವು

ಮೈಸೂರು: ಅಜ್ಜಿಯ ತಿಥಿ ಕಾರ್ಯಕ್ಕೆಂದು ಬಂದಿದ್ದ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ನಾಲೆಗೆ ಬಿದ್ದ ಮಗಳನ್ನು ರಕ್ಷಿಸಲು ಹೋಗಿ, ತಂದೆ ತಾಯಿ ಸೇರಿದಂತೆ ಮೂವರು ಮೃತಪಟ್ಟ ಹೃದಯವಿದ್ರಾವಕ ಘಟನೆ ಜಿಲ್ಲೆಯ ಸರಗೂರು ತಾಲೂಕಿನಲ್ಲಿ ನಡೆದಿದೆ.

ಸರಗೂರು ತಾಲೂಕಿನ ಚಂಗೌಡನಹಳ್ಳಿ ಗ್ರಾಮದ ಮಹಮ್ಮದ್ ಕಪಿಲ್ (42), ಶಾವರಭಾನು (35), ಶಾಹೀರಾಭಾನು (20) ಮೃತಪಟ್ಟ ದುರ್ದೈವಿಗಳು.

ಚಂಗೌಡನಹಳ್ಳಿ ಮೂಲದ ಇವರು ಬೆಂಗಳೂರಲ್ಲಿ ಕೆಲಸ ಮಾಡಿಕೊಂಡು ಅಲ್ಲೇ ವಾಸವಾಗಿದ್ದರು.

ಕುಟುಂಬದ ಅಜ್ಜಿಯೊಬ್ಬರ ತಿಥಿ ಕಾರ್ಯಕ್ಕಾಗಿ ಮೊನ್ನೆ ಗ್ರಾಮಕ್ಕೆ ಬಂದಿದ್ದ ನತದೃಷ್ಟರು ತಿಥಿ ಕಾರ್ಯ ಮುಗಿಸಿ ಶನಿವಾರ ನುಗು ಜಲಾಶಯದ ಬಲದಂಡೆ ನಾಲೆಯಲ್ಲಿ ಕೈ ಕಾಲು ತೊಳೆಯಲು ಹೋದಾಗ ದುರ್ಘಟನೆ ನಡೆದು ಹೋಗಿದೆ.

ನಾಲೆಯಲ್ಲಿ ಕೈ ಕಾಲು ತೊಳೆದುಕೊಳ್ಳುವಾಗ ಶಾಹೀರಾಭಾನು ಮೊದಲಿಗೆ ಕಾಲು ಜಾರಿ ಬಿದ್ದಿದ್ದಾರೆ. ಇದನ್ನು ನೋಡಿದ ತಂದೆ ಮಹಮ್ಮದ್ ಕಪೀಲ್ ಮತ್ತು ತಾಯಿ ಶಾವರಭಾನು ರಕ್ಷಣೆಗೆ ನಾಲೆಗಿಳಿದಿದ್ದಾರೆ.

ಆದರೆ ನೀರಿನ ಹರಿವು ಹೆಚ್ಚಾಗಿದ್ದರಿಂದ  ಮೂವರು ನೀರಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

ಸ್ಥಳಕ್ಕೆ ಸರಗೂರು ಠಾಣೆ ಪೊಲೀಸರು ಹಾಗೂ ಅಗ್ನಿ ಶಾಮಕ ಸಿಬ್ಬಂದಿ ಭೇಟಿ ನೀಡಿ, ನಾಲೆಯಿಂದ ಮೂವರ ಮೃತದೇಹಗಳನ್ನು ಹೊರಕ್ಕೆ ತೆಗೆದಿದ್ದಾರೆ.

ಸರಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.