ಮೈಸೂರು: ಸ್ವಚ್ಚ ಭಾರತ ಅಭಿಯಾನದ ಭಾಗವಾಗಿ ಭಾನುವಾರ ಮೈಸೂರಿನ ಪೊಲೀಸ್ ಬಡಾವಣೆಯಲ್ಲಿ ಸ್ವಚ್ಚತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಕರ್ನಾಟಕ ಮೃಗಾಲಯ ಪ್ರಾಧಿಕಾರ ಹಾಗೂ ರಮ್ಮನಹಳ್ಳಿ ಪಟ್ಟಣ ಪಂಚಾಯತ್ ನೇತೃತ್ವದಲ್ಲಿ ಪೊಲೀಸ್ ಬಡಾವಣೆಯ ಎರಡನೇ ಹಂತ ಸರ್ದಾರ್ ವಲ್ಲಭಭಾಯ್ ಪಟೇಲ್ ನಗರ, ತಿಪ್ಪಯ್ಯನ ಕೆರೆ ಸುತ್ತಲಿನ ಪ್ರದೇಶದಲ್ಲಿ ಸ್ವಚ್ಚತಾ ಕಾರ್ಯ ನಡೆಯಿತು.
ಪೌರಕಾರ್ಮಿಕರೊಂದಿಗೆ ಬಡಾವಣೆಯ ನಿವಾಸಿಗಳು ಸಾಥ್ ನೀಡಿದರು.
ಸ್ವಚ್ಚತಾ ಕಾರ್ಯ ಆರಂಭಕ್ಕೂ ಮುನ್ನ ಸ್ವಚ್ಚತೆಯಿಂದ ಮನೆ, ಮನ, ಪರಿಸರ ಹಾಗೂ ದೇಶಕ್ಕಾಗುವ ಲಾಭದ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಯಿತು.
ಸದಾ ಸ್ವಚ್ಚತೆ ಕಾಪಾಡುವಂತೆ ಪ್ರತಿಜ್ಞಾವಿಧಿ ಕೂಡಾ ಬೋಧಿಸಲಾಯಿತು.
ಮೈಸೂರಿನ ಪ್ರಮುಖ ಹಾಗೂ ಅತಿ ದೊಡ್ಡ ಕೆರೆಗಳ ಪೈಕಿ ತಿಪ್ಪಯ್ಯನ ಕೆರೆ ಕೂಡ ಒಂದಾಗಿದ್ದು, ಇದನ್ನು ಮುಂದಿನ ತಲೆಮಾರಿಗೆ ಜತನದಿಂದ ಕಾಪಾಡಬೇಕು, ಮೃಗಾಲಯ ಪ್ರಾಧಿಕಾರ ತನ್ನ ಇತಿಮಿತಿಯಲ್ಲಿ ಕೆರೆ ಸಂರಕ್ಷಣೆ ಮಾಡಬಹುದು. ಆದರೆ, ಇದನ್ನು ಸಂರಕ್ಷಿಸಬೇಕಾದ ಹೊಣೆ ಸ್ಥಳೀಯ ನಾಗರಿಕರ ಜವಾಬ್ದಾರಿ ಎಂದು ಮನದಟ್ಟು ಮಾಡಿಕೊಡಲಾಯಿತು.
ಈ ವೇಳೆ ಮಾತನಾಡಿದ ಕರ್ನಾಟಕ ಮೃಗಾಲಯ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಮಹೇಶ್ ಕುಮಾರ್, ಮೈಸೂರು ಪ್ರಕೃತಿದತ್ತವಾದ ನಗರವಾಗಿದ್ದು, ಇಡೀ ದೇಶದಲ್ಲೇ ಭೌಗೋಳಿಕವಾಗಿ ತನ್ನದೇ ಆದ ಸ್ಥಾನ ಕಂಡುಕೊಂಡಿದೆ ಎಂದು ಹೇಳಿದರು
ಇಂತಹ ನಗರವನ್ನು ಸ್ವಚ್ಚವಾಗಿರಿಸುವ ನಿಟ್ಟಿನಲ್ಲಿ ನಾವೆಲ್ಲರೂ ಸಂಕಲ್ಪ ಮಾಡಬೇಕು ಎಂದು ಕರೆ ನೀಡಿದರು.
ಕೆರೆಗಳು ಜಲಮೂಲದ ಪ್ರಮುಖ ತಾಣಗಳಾಗಿದ್ದು, ಅವುಗಳ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ ಎಂದು ತಿಳಿಸಿದರು.
ಮೈಸೂರಿನಲ್ಲಿರುವ ಕೆಲವೇ ದೊಡ್ಡ ಕೆರೆಗಳ ಪೈಕಿ ಚಾಮುಂಡಿ ಬೆಟ್ಟದ ಮಗ್ಗುಲಲ್ಲಿರುವ ತಿಪ್ಪಯ್ಯನ ಕೆರೆ ಕೂಡ ಒಂದು ಪ್ರಾಕೃತಿಕವಾಗಿ ನಿರ್ಮಾಣವಾಗಿರುವ ಕೆರೆ ಸುತ್ತಮುತ್ತ ಸ್ಥಳೀಯರು ಕಸ ಸುರಿಯುತ್ತಿರುವುದು ಸರಯಲ್ಲ ಎಂದು ಬೇಸರದ ವ್ಯಕ್ತಪಡಿಸಿದರು.
ಸ್ವಚ್ಚತಾ ಕಾರ್ಯದಲ್ಲಿ ರಮ್ಮನಹಳ್ಳಿ ಪಟ್ಟಣ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ನರಸಿಂಹಮೂರ್ತಿ, ಕಿರಿಯ ಆರೋಗ್ಯ ನಿರ್ವಾಹಕ ಚನ್ನನಾಯಕ, ಸಮಾನ ಮನಸ್ಕರ ವೇದಿಕೆ ಅಧ್ಯಕ್ಷ ಥಾಮಸ್, ಸ್ಥಳೀಯರಾದ ಮನುಕುಮಾರ್, ಮಾನಸ, ಮೋಹನ ಕುಮಾರ್, ಶಿವಸ್ವಾಮಿ, ಲೀಲಾ ಶಿವಕುಮಾರ್, ಬಿ.ಎಲ್. ತ್ರಿಪುರಾಂತಕ, ಮೋಹನರಾವ್ ಹಾಗೂ ಐವತ್ತಕ್ಕೂ ಹೆಚ್ಚು ಪೌರಕಾರ್ಮಿಕ ಸಿಬ್ಬಂದಿ ಭಾಗವಹಿಸಿದ್ದರು.