ವಂದೇ ಭಾರತ್ ರೈಲಿಗೆ 14 ನಿಮಿಷಗಳ ಪವಾಡ; ಶುಚಿಗೊಳಿಸುವ ಹೊಸ ಪ್ರಕ್ರಿಯೆ

ಮೈಸೂರು: ರೈಲ್ವೆ ಸಚಿವಾಲಯದ ನಿರ್ದೇಶನದಂತೆ, ನೈಋತ್ಯ ರೈಲ್ವೆಯ ಮೈಸೂರು ವಿಭಾಗವು ಚೆನ್ನೈ-ಮೈಸೂರು – ಚೆನ್ನೈ ವಂದೇ ಭಾರತ್ ರೈಲಿಗೆ 14 ನಿಮಿಷಗಳ ಪವಾಡ- ಶುಚಿಗೊಳಿಸುವ ಹೊಸ ಪ್ರಕ್ರಿಯೆಯನ್ನು ಪರಿಚಯಿಸಿದೆ.

ಅಂದರೆ ಇದುವರೆಗೆ ವಂದೇ ಭಾರತ್ ರೈಲಿನ 16 ಕೋಚ್ ಗಳನ್ನು ಸ್ವಚ್ಛಗೊಳಿಸಲು ಸುಮಾರು 45 ನಿಮಿಷಗಳು ಬೇಕಾಗುತ್ತಿತ್ತು.ಈಗ ಈ 14 ನಿಮಿಷಗಳ ಪವಾಡ ಪ್ರಕ್ರಿಯೆಯಿಂದ ಅತಿ ವೇಗವಾಗಿ ರೈಲನ್ನು ಸಚ್ಛಗೊಳಿಸಿ ಹೊರಡಲು ಅಣಿಗೊಳಿಸಬಹುದಾಗಿದೆ.

14 ನಿಮಿಷಗಳ ಪವಾಡ ಕಾರ್ಯಕ್ರಮವನ್ನು ವಂದೇ ಭಾರತ್ ರೈಲುಗಳು ವಿವಿಧ ಗಮ್ಯ ಸ್ಥಾನಗಳಿಗೆ ಆಗಮಿಸಿದ ನಂತರ ಅವುಗಳನ್ನು ಶುಚಿಗೊಳಿಸುವ ಪ್ರಕ್ರಿಯೆಯನ್ನು ಸುಗಮಗೊಳಿಸಲು ನಿಖರವಾಗಿ ವಿನ್ಯಾಸಗೊಳಿಸಲಾಗಿದೆ.

ಭಾರತೀಯ ರೈಲ್ವೆ ಅಭಿವೃದ್ಧಿಪಡಿಸಿರುವ ಈ ವಿಧಾನದಿಂದ ಕೇವಲ 14 ನಿಮಿಷಗಳಲ್ಲಿ ಸಂಪೂರ್ಣವಾಗಿ ಸಮಗ್ರವಾಗಿ ಶುಚಿಗೊಳಿಸುವಿಕೆಯನ್ನು ಪೂರ್ಣ ಗೊಳಿಸಲು ದಾಧ್ಯವಾಗಿದೆ.

ಒಟ್ಟು 48 ಸಿಬ್ಬಂದಿ ಮತ್ತು 3 ಮೇಲ್ವಿಚಾರಕರು,ಪ್ರತಿಯೊಂದು ಬೋಗಿಗೂ ತರಬೇತಿ ಪಡೆದ 3 ಸಿಬ್ಬಂದಿ ಸದಸ್ಯರನ್ನು ನಿಯೋಜಿಸಲಾಗುತ್ತದೆ.

ಮೊದಲನೆ ಸಿಬ್ಬಂದಿ ಕಸವನ್ನು ಸಂಗ್ರಹಿಸುತ್ತಾರೆ, ಒಣ ಒರಸುವಿಕೆಯನ್ನು ನಿರ್ವಹಿಸುತ್ತಾರೆ ಮತ್ತು ಹೊರಗಿನ ಕಿಟಕಿ ಗಾಜನ್ನು ಸ್ವಚ್ಛಗೊಳಿಸುತ್ತಾರೆ.

ಎರಡನೆಯ ಸಿಬ್ಬಂದಿ ಉಪಹಾರ ಮೇಜು ಮತ್ತು ಆಸನಗಳನ್ನು ಶುಚಿಗೊಳಿಸುತ್ತಾರೆ ಮತ್ತು ನೀರಿನಿಂದ ಒರೆಸುತ್ತಾರೆ.

ಮೂರನೆಯ ಸಿಬ್ಬಂದಿ ಕಸದಬುಟ್ಟಿಗಳನ್ನು ಶೌಚಾಲಯಗಳನ್ನು ಕನ್ನಡಿಗಳನ್ನು ದ್ವಾರದ ಪ್ರದೇಶಗಳನ್ನು ಸ್ವಚ್ಛಗೊಳಿಸುತ್ತಾರೆ ಮತ್ತು ಈ ಪ್ರದೇಶಗಳನ್ನು ಸೂಕ್ಷ್ಮವಾಗಿ ಒರೆಸುತ್ತಾರೆ.

ವಿಭಾಗೀಯ ರೈಲ್ವೆ ವ್ಯವಸ್ಥಾಪಕರಾದ ಶ್ರೀಮತಿ ಶಿಲ್ಪಿ ಅಗರ್ವಾಲ್ ರವರು ಈ ಕೆಲಸದಲ್ಲಿ ತೊಡಗಿರುವ ಎಲ್ಲಾ ಸಿಬ್ಬಂದಿಗಳ ಕಾರ್ಯವನನ್ನು ಮೆಚ್ಚಿದರು.

14 ನಿಮಿಷಗಳ ಪವಾಡ ಕಾರ್ಯಕ್ರಮವು ವಂದೇ ಭಾರತ್ ರೈಲುಗಳಲ್ಲಿ ಶುಚಿಗೊಳಿಸುವ ಪ್ರಕ್ರಿಯೆಯನ್ನು ಸುವ್ಯವಸ್ಥಿತಗೊಳಿಸಲು ಮತ್ತು ನಿಖರವಾಗಿ ಹೊಂದಿಸುವ ಗುರಿಯನ್ನು ಹೊಂದಿದೆ ಎಂದು ಅವರು ಹೇಳಿದರು. ಈ ಪ್ರಕ್ರಿಯೆಯು ಹೆಚ್ಚು ಪರಿಣಾಮಕಾರಿಯಾಗಿದ್ದೂ ನಿಖರವಾದ ಸಮಯದ ಚೌಕಟ್ಟಿನೊಳಗೆ ರೈಲು ಹಿಂದಿರುಗಿ ಹೊರಡಲು ಸಿದ್ಧಮಾಡುತ್ತದೆ ಎಂದು ತಿಳಿಸಿದರು.

ಭಾನುವಾರ ಮುಂಜಾನೆ, ಮೈಸೂರು ರೈಲು ನಿಲ್ದಾಣದಲ್ಲಿ “ಏಕ್ ತಾರೀಖ್ ಏಕ್ ಘಂಟಾ ಏಕ್ ಸಾಥ್” ಎಂಬ ಶೀರ್ಷಿಕೆಯಡಿಯಲ್ಲಿ ಬೃಹತ್ ಸ್ವಚ್ಛತಾ ಶ್ರಮದಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.ನೈಋತ್ಯ ರೈಲ್ವೆಯ ಮೈಸೂರು ವಿಭಾಗದ ವಿಭಾಗೀಯ ರೈಲ್ವೆ ವ್ಯವಸ್ಥಾಪಕರಾದ ಶಿಲ್ಪಿ ಅಗರ್ವಾಲ್ ರವರು, ಇತರ ಹಿರಿಯ ಅಧಿಕಾರಿಗಳು, ವಿಭಾಗದ ಸಿಬ್ಬಂದಿ ಮತ್ತು ಬ್ರಹ್ಮಕುಮಾರಿ ಮತ್ತು ಇತರ ಸಂಸ್ಥೆಗಳ ಸ್ವಯಂಸೇವಕರ ಜೊತೆ ಈ ಶ್ರಮದಾನ ಕಾರ್ಯಕ್ರಮ ಯಶಸ್ವಿಯಾಗಿದೆ